ಜೆಡಿಎಸ್‌ನಿಂದ ನೀರಿನ ಸಮಸ್ಯೆ ಪರಿಹಾರ, ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅಭಯ, ಮಧುರೆಯಲ್ಲಿ ಜನತಾ ಜಲಧಾರೆ ಅಭಿಯಾನ

2
Published on

ದೊಡ್ಡಬಳ್ಳಾಪುರ: ರಾಜ್ಯದ ನೀರಿನ ಸಮಸ್ಯೆ ಪರಿಹರಿಸಲು ಜೆಡಿಎಸ್‌ನಿಂದ ಮಾತ್ರ ಸಾಧ್ಯ. ಆದ್ದರಿಂದ, ಪಕ್ಷವನ್ನು ಅಧಿಕಾರಕ್ಕೆ ತರುವಂತೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದರು.

ಮಧುರೆ ಹೋಬಳಿಯ ಶನಿಮಹಾತ್ಮ ದೇವಾಲಯದ ಬಳಿ ಶುಕ್ರವಾರ ಹಮ್ಮಿಕೊಂಡಿದ್ದ ಜನತಾ ಜಲಧಾರೆ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ ಚಿನ್ನದ ಕ್ಷೇತ್ರ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಿ, ಇಲ್ಲಿಂದಲೇ ಪಕ್ಷಕ್ಕೆ ಭದ್ರ ಬುನಾದಿ ಹಾಕಬೇಕು ಎಂದು ಕರೆ ನೀಡಿದರು.

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು 2018ರಲ್ಲಿ ಸಿಎಂ ಆಗಿದ್ದಾಗ ರೈತರ ಸಾಲ ಸಂಪೂರ್ಣ ಮನ್ನಾ ಮಾಡುವುದಾಗಿ ಹೇಳಿದ್ದರು. ಅದರಂತೆ 28 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದರು. ಆದ್ದರಿಂದ, ರೈತಪರವಾದ ಜೆಡಿಎಸ್ ಬೆಂಬಲಿಸಬೇಕು ಎಂದರು.

ಜೆಡಿಎಸ್ ಗುಂಪುಗಾರಿಕೆ ಬಯಲು: ಜನತಾ ಜಲಧಾರೆ ರಥಯಾತ್ರೆ ತಾಲೂಕು ಜೆಡಿಎಸ್‌ನಲ್ಲಿರುವ ಗುಂಪುಗಾರಿಕೆಯನ್ನು ಬಹಿರಂಗಗೊಳಿಸಿತು. ರಥಯಾತ್ರೆ ಸ್ವಾಗತಕ್ಕೆ ಅಧ್ಯಕ್ಷ ಬಿ.ಮುನೇಗೌಡ ಮತ್ತು ಬೆಂಬಲಿಗರು ಜೆಡಿಎಸ್ ಕಚೇರಿಯಿಂದ ಕಾರುಗಳಲ್ಲಿ ಹೊರಟರೆ, ಅಪ್ಪಯ್ಯಣ್ಣ ಹಾಗೂ ವಿಧಾನಪರಿಷತ್ ಸದಸ್ಯ ರಮೇಶಗೌಡ ನೇತೃತ್ವದ ಕಾರ್ಯಕರ್ತರ ಗುಂಪು ಪ್ರವಾಸಿ ಮಂದಿರದಿಂದ ಮಧುರೆಗೆ ತೆರಳಿದ್ದು, ಜೆಡಿಎಸ್‌ನಲ್ಲಿ ಏನೊಂದು ಸರಿಯಿಲ್ಲ ಎಂಬುದನ್ನು ಸಾಬೀತುಪಡಿಸಿತು.

ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ, ಜೆಡಿಎಸ್ ತಾಲೂಕು ಲಕ್ಷ್ಮೀಪತಯ್ಯ, ವಿಧಾನ ಪರಿಷತ್ ಸದಸ್ಯ ರಮೇಶ್ ಗೌಡ, ಬಮುಲ್ ಮಾಜಿ ಅಧ್ಯಕ್ಷ ಎಚ್.ಅಪ್ಪಯ್ಯಣ್ಣ, ಜೆಡಿಎಸ್ ತಾಲೂಕು ಅಧ್ಯಕ್ಷ ಲಕ್ಷ್ಮೀಪತಯ್ಯ, ಮುಖಂಡರಾದ ಎಸ್‌ಎಸ್ ಘಾಟಿ ಲಯನ್ಸ್ ಕ್ಲಬ್ ಅಧ್ಯಕ್ಷ ಹರೀಶ್‌ಗೌಡ, ಕುಂಟನಹಳ್ಳಿ ಮಂಜುನಾಥ, ಚಂದ್ರಶೇಖರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net