ಜೆಡಿಎಸ್​ನಿಂದ ಮಾತ್ರ ನೀರಾವರಿ ಯೋಜನೆ ಸಾಕಾರ: ಬೆಂಬಲ ನೀಡುವಂತೆ ಜಿಲ್ಲಾಧ್ಯಕ್ಷ ಎ.ಮಂಜುನಾಥ್​ ಮನವಿ

2
Published on

ಚನ್ನಪಟ್ಟಣ: ರಾಜ್ಯದ ನೀರಾವರಿ ಯೋಜನೆಗಳನ್ನು ಸಾಕಾರಗೊಳಿಸುವುದು ಜೆಡಿಎಸ್​ನಿಂದ ಮಾತ್ರ ಸಾಧ್ಯ. ನೀರಾವರಿ ಯೋಜನೆಗಳ ಸಾಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಜನತೆ ಬೆಂಬಲಿಸುವ ಮೂಲಕ ಜೆಡಿಎಸ್​ಗೆ ಶಕ್ತಿ ತುಂಬಬೇಕು ಎಂದು ಮಾಗಡಿ ಶಾಸಕ, ಜೆಡಿಎಸ್​ ಜಿಲ್ಲಾಧ್ಯಕ್ಷ ಎ.ಮಂಜುನಾಥ್​ ಮನವಿ ಮಾಡಿದರು.

ಗುರುವಾರ ತಾಲೂಕಿನ ದೊಡ್ಡಮಳೂರಿನ ಶ್ರೀ ಅಪ್ರಮೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, 2ನೇ ದಿನದ ಗಂಗಾರಥ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದ ನೀರಾವರಿ ಯೋಜನೆಗಳ ಅನುಷ್ಠಾನ ಪ್ರಾದೇಶಿಕ ಪಕ್ಷ$$$್ವಆದ ಜೆಡಿಎಸ್​ನಿಂದ ಮಾತ್ರ ಸಾಧ್ಯ. ಎಲ್ಲದಕ್ಕೂ ಹೈಕಮಾಂಡ್​ ಮುಂದೆ ಭಿಕ್ಷೆಗೆ ನಿಲ್ಲುವ ರಾಷ್ಟ್ರೀಯ ಪಕ್ಷಗಳಿಂದ ಸಾಧ್ಯವಿಲ್ಲ. ನೀರಾವರಿ ಯೋಜನೆಗಳ ಸಮಗ್ರ ಅನುಷ್ಠಾನದ ಸಂಕಲ್ಪದೊಂದಿಗೆ ನಮ್ಮ ಪಕ್ಷ ಹಮ್ಮಿಕೊಂಡಿರುವ ಜನತಾ ಜಲಧಾರೆ ರಥಯಾತ್ರೆಗೆ ಇಡೀ ರಾಜ್ಯದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಇದು ಅನ್ಯಪಕ್ಷಗಳಿಗೆ ನಡುಕ ತಂದಿದೆ. 75 ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ನಡೆಸಿರುವ ರಾಷ್ಟ್ರೀಯ ಪಕ್ಷಗಳಿಗೆ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗಿಲ್ಲ. ಇದನ್ನು ಅರಿತಿರುವ ಜನತೆ ಜೆಡಿಎಸ್​ನ ಈ ಕಾರ್ಯಕ್ರಮವನ್ನು ಬೆಂಬಲಿಸುತ್ತಿದ್ದಾರೆ ಎಂದರು.

ನೆರೆಯ ತಮಿಳುನಾಡು, ಆಂಧ್ರಪ್ರದೇಶಗಳಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿ ಇರುವುದರಿಂದ ಅಲ್ಲಿನ ಎಲ್ಲ ಯೋಜನೆಗಳಿಗೆ ಅನುಕೂಲವಾಗಿದೆ. ಕೇಂದ್ರದಲ್ಲಿ ಯಾವುದೇ ಪಕ್ಷದ ಸರ್ಕಾರವಿದ್ದರೂ, ಅಲ್ಲಿನ ಸರ್ಕಾರಗಳು ತಮಗೆ ಬೇಕಾದ ಯೋಜನೆಗಳಿಗೆ ಮಂಜೂರಾತಿ ಪಡೆಯುತ್ತವೆ. ಆದರೆ, ನಮ್ಮ ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಜನ ಮಣೆ ಹಾಕುವುದರಿಂದ ರಾಜ್ಯದ ಯೋಜನೆಗಳು ಜಾರಿಯಾಗದೆ ಹಳ್ಳ ಹಿಡಿಯುತ್ತಿವೆ. ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರುವುದರಿಂದ ರಾಜ್ಯ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಂಜುನಾಥ್​ ಅಭಿಪ್ರಾಯಪಟ್ಟರು.

ತಾಲೂಕು ಹಸಿರಾಗಲು ದೊಡ್ಡಗೌಡರು ಕಾರಣ: ತಮ್ಮ ದೂರದೃಷ್ಟಿಯಿಂದ ಮಾಜಿ ಪ್ರಧಾನಿ ದೇವೇಗೌಡರು ಇಗ್ಗಲೂರು ಜಲಾಶಯ ಕಟ್ಟದಿದ್ದರೆ ಇಂದು ತಾಲೂಕಿನಲ್ಲಿ ಯಾವುದೇ ನೀರಾವರಿ ಯೋಜನೆಗಳನ್ನು ಸಾಕಾರಗೊಳಿಸುವುದು ಸಾಧ್ಯವಿರಲಿಲ್ಲ. ಇಂದು ತಾಲೂಕು ಏನಾದರೂ ಹಸಿರಿನಿಂದ ಕಂಗೊಳಿಸುತ್ತಿದೆ ಎಂದರೆ ಅದಕ್ಕೆ ಮಾಜಿ ಪ್ರಧಾನಿ ದೇವೇಗೌಡರ ದೂರದೃಷ್ಟಿಯೇ ಕಾರಣ. ಜತೆಗೆ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಸಹ, ಜಿಲ್ಲೆಗೆ ಶಾಶ್ವತ ನೀರಾವರಿ ಕಲ್ಪಿಸಲು ಶ್ರಮಪಟ್ಟಿದ್ದಾರೆ. ನೀರಾವರಿ ವಿಚಾರದಲ್ಲಿ ದೇವೇಗೌಡರ ಕುಟುಂಬಕ್ಕಿರುವ ಬದ್ಧತೆಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ಎಂದು ಎ. ಮಂಜುನಾಥ್​ ಹೇಳಿದರು.

ಜೆಡಿಎಸ್​ ತಾಲೂಕು ಅಧ್ಯಕ್ಷ ಎಚ್​.ಸಿ.ಜಯಮುತ್ತು ಮಾತನಾಡಿ, ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಕುಮಾರಸ್ವಾಮಿಯವರ ಕೈಯನ್ನು ನಾವೆಲ್ಲ ಮತ್ತಷ್ಟು ಬಲಪಡಿಸಬೇಕಿದೆ. ಈ ಬಾರಿಯೂ ಸಹ ಅವರನ್ನು ಗೆಲ್ಲಿಸುವ ಹೊಣೆ ನಮ್ಮ ಮೇಲಿದ್ದು, ನಾವೆಲ್ಲ ಒಟ್ಟಾಗಿ ಸೇರಿ ಅವರನ್ನು ಗೆಲ್ಲಿಸೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಮಳೂರು ಜಿಪಂ ವ್ಯಾಪ್ತಿಯಲ್ಲಿ ಸಂಚಾರ: ಎರಡನೇ ದಿನದ ಜನತಾ ಜಲಧಾರೆ ಗಂಗಾರಥ ಮಳೂರು ಜಿಪಂ ವ್ಯಾಪ್ತಿಯ ದೊಡ್ಡಮಳೂರು, ಹೊಟ್ಟಿಗಾನಹೊಸಹಳ್ಳಿ, ಕೂಡ್ಲೂರು, ಮಳೂರುಪಟ್ಟಣ, ಚಕ್ಕೆರೆ, ಗಂಗೇದೊಡ್ಡಿ, ಸಂಕಲಗೆರೆ, ಬೈರಾಪಟ್ಟಣ, ಮುದಗೆರೆ, ಸೇರಿದಂತೆ ಹಲವು ಹಳ್ಳಿಗಳಲ್ಲಿ ಸಂಚರಿಸಿತು. ಗಂಗಾರಥ ಸಂಚರಿಸಿದ ಬಹುತೇಕ ಗ್ರಾಮಗಳಲ್ಲಿ ಪಟಾಕಿ ಸಿಡಿಸಿ, ಪೂರ್ಣಕುಂಭ ಹೊತ್ತು ಜಲಧಾರೆ ರಥವನ್ನ ಗ್ರಾಮಸ್ಥರು ಸ್ವಾಗತಿಸಿದರು. ಗ್ರಾಮದ ಮಹಿಳೆಯರು ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ಸಂಭ್ರಮಿಸಿದರು.

ತಾಲೂಕು ಜೆಡಿಎಸ್​ ಅಧ್ಯಕ್ಷ ಎಚ್​.ಸಿ.ಜಯಮುತ್ತು, ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹಾಪ್​ಕಾಮ್ಸ್​ ದೇವರಾಜು, ಪಿಎಲ್​ಡಿ ಬ್ಯಾಂಕ್​ ಅಧ್ಯಕ್ಷ ಮಾಗನೂರು ಗಂಗರಾಜು, ಬಿಡಿಸಿಸಿ ಬ್ಯಾಂಕ್​ ನಿರ್ದೇಶಕ ಕುಕ್ಕೂರುದೊಡ್ಡಿ ಜಯರಾಂ, ನಗರಸಭಾ ಅಧ್ಯಕ್ಷ ಪ್ರಶಾಂತ್​, ಜೆಡಿಎಸ್​ ಮುಖಂಡರಾದ ಸಿಂ.ಲಿಂ.ನಾಗರಾಜು, ಗೋವಿಂದಹಳ್ಳಿ ನಾಗರಾಜು, ನರ್ಸರಿ ಲೋಕೇಶ್​, ಕೂಡ್ಲೂರು ವೆಂಕಟೇಶ್​, ಮಳೂರುಪಟ್ಟಣ ರವಿ, ಗ್ರಾಪಂ ಅಧ್ಯಕ್ಷರುಗಳಾದ ಮುದಗೆರೆ ಬಿಂದು, ಕೂಡ್ಲೂರು ಗೋವಿಂದೇಗೌಡ, ಮಹಿಳಾ ಜಿಲ್ಲಾಧ್ಯಕ್ಷೆ ರೇಖಾ ಉಮಾಶಂಕರ್​ ಸೇರಿದಂತೆ ಹಲವರು ಉಪಸ್ಥಿತರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net