

ಬೀದರ್: ಬರುವ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಜೆಡಿಎಸ್ ಜಲಧಾರೆ ಯಾತ್ರೆ ಆರಂಭಿಸುತ್ತಿದ್ದು, ಇದು ಗಡಿ ಜಿಲ್ಲೆಯಲ್ಲಿ ತೆನೆ ಹೊತ್ತ ಮಹಿಳೆ ಶಕ್ತಿ ವೃದ್ಧಿಸಬಹುದೆ ಎಂಬ ಚರ್ಚೆ ನಡೆದಿವೆ. ಜಿಲ್ಲೆಯಲ್ಲಿ ಜೆಡಿಎಸ್ ಸ್ಥಿತಿ ಅಷ್ಟಕ್ಕಷ್ಟೇ ಇದೆ. ಹೀಗಾಗಿ ಜಲಧಾರೆ ಯಾವ ಪ್ರಭಾವ ಬೀರಬಲ್ಲದು ಎಂಬುದು ಜಿಲ್ಲೆಯ ರಾಜಕೀಯ ವಲಯದ ಕುತೂಹಲ ಹೆಚ್ಚಿಸಿದೆ.
ರಾಜ್ಯದ ಎಲ್ಲ ಭಾಗಗಳಿಗೂ ನೀರು ಒದಗಿಸುವ, ಲಭ್ಯ ನೀರಿನ ಸಮರ್ಪಕ ಬಳಕೆ ಜತೆಗೆ ನನೆಗುದಿಗೆ ಬಿದ್ದಿರುವ ಎಲ್ಲ ನೀರಾವರಿ ಯೋಜನೆಗಳನ್ನು ಜಾರಿಗೊಳಿಸುವ ಮಹಾ ಸಂಕಲ್ಪದೊಂದಿಗೆ ರಾಜ್ಯದ 15 ಕಡೆಗಳಿಂದ ಜಲಧಾರೆ ರಥ ಆರಂಭಿಸಿದೆ. ಇದರಲ್ಲಿ ಗಡಿ ಜಿಲ್ಲೆ ಬೀದರ್ ಸೇರಿಸಲಾಗಿದೆ. ಗೋದಾವರಿ ಜಲಾನಯನದಲ್ಲಿ ಹರಿಯುವ ಜಿಲ್ಲೆಯ ಮಾಂಜ್ರಾ ನದಿ ನೀರಿನ ಸದ್ಬಳಕೆಗೆ ಇದು ಕೊಡುಗೆ ನೀಡಬಹುದೆ ಎಂಬ ಚಚರ್ೆ ನಡೆದಿವೆ. ಶನಿವಾರ ಬೆಳಗ್ಗೆ 11.30ಕ್ಕೆ ಕಮಲನಗರ ತಾಲೂಕಿನ ಸಂಗಮನಲ್ಲಿ ಯಾತ್ರೆಗೆ ಚಾಲನೆ ಸಿಗಲಿದ್ದು, ಶಾಸಕ, ಜೆಡಿಎಸ್ ಹಿರಿಯ ಮುಖಂಡ ಬಂಡೆಪ್ಪ ಖಾಶೆಂಪುರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.
ಬಚಾವತ್ ಆಯೋಗದ ತೀರ್ಪಿನ ಪ್ರಕಾರ ಬೀದರ್ ಜಿಲ್ಲೆಯು 23.37 ಟಿಎಂಸಿ ನೀರು ಬಳಸಿಕೊಳ್ಳಬೇಕು. ಆದರೆ ಆಡಳಿತರೂಢ ಸರ್ಕಾರಗಳ ಅಸಡ್ಡೆತನದಿಂದ ಇನ್ನೂ 10 ಟಿಎಂಸಿಯಷ್ಟು ನೀರು ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಜಲಮೂಲ ಲಭ್ಯ ಇದ್ದರೂ ಜಿಲ್ಲೆಯ ಜನರಿಗೆ ಲಾಭ ಸಿಕ್ಕಿಲ್ಲ. ಮಾಂಜ್ರಾ ನದಿ ನೀರು ಬಳಕೆಗೆ ಬ್ಯಾರೇಜ್ ನಿರ್ಮಾಣ, ಏತ ನೀರಾವರಿ ಯೋಜನೆ ರೂಪಿಸಬೇಕು.ಇದಕ್ಕಾಗಿಯೇ ಜಲಧಾರೆ ಯೋಜನೆಗೆ ಮಾಂಜ್ರಾ ಸೇರಿಸಿರುವುದು ವಿಶೇಷ.
ಜಿಲ್ಲೆಯ ಆರು ವಿಧಾನಸಭೆ ಕ್ಷೇತ್ರಗಳ ಪೈಕಿ ಬೀದರ್ ದಕ್ಷಿಣದಲ್ಲಿ ಮಾತ್ರ ಜೆಡಿಎಸ್ ಬಲಿಷ್ಠವಿದೆ. ಬಂಡೆಪ್ಪ ಖಾಶೆಂಪುರ ಇಲ್ಲಿಂದ ಎರಡನೇ ಬಾರಿ ಶಾಸಕರಾಗಿದ್ದಾರೆ. ದಕ್ಷಿಣ ಹೊರತುಪಡಿಸಿ ಜಿಲ್ಲೆಯ ಯಾವ ಕ್ಷೇತ್ರದಲ್ಲೂ ಪಕ್ಷ ಮಜಬೂತ್ ಇಲ್ಲ. ಈ ಹಿಂದೆ ಜೆಡಿಎಸ್ ಭದ್ರಕೋಟೆಯಾಗಿದ್ದ ಬಸವಕಲ್ಯಾಣ ಇದೀಗ ನೆಲಕಚ್ಚಿದೆ. ಹುಮನಾಬಾದ್, ಭಾಲ್ಕಿ, ಬೀದರ್ ಉತ್ತರ, ಔರಾದ್ನಲ್ಲಿ ಹೇಳಿಕೊಳ್ಳುವಂಥ ಪಕ್ಷ ಸಂಘಟನೆ ಇಲ್ಲ. ಹೀಗಾಗಿ ಇದೀಗ ನಡೆಸುತ್ತಿರುವ ಜಲಧಾರೆ ಯಾತ್ರೆ ಜಿಲ್ಲೆಯಲ್ಲಿ ಜೆಡಿಎಸ್ಗೆ ಶಕ್ತಿ ತುಂಬುತ್ತಾ ಎಂಬುದು ಕಾದು ನೋಡಬೇಕು.
ಬೀದರ್ ನೀರು ಬಳಕೆಗೆ ತೆಲಂಗಾಣ ಯೋಜನೆ: ಮಹಾರಾಷ್ಟ್ರದ ಬೀಡ್ ಹತ್ತಿರ ಉಗಮವಾಗಿ ಉಸ್ಮಾನಾಬಾದ್, ಲಾತೂರ್ ಮೂಲಕ ಬೀದರ್ ಪ್ರವೇಶಿಸುವ ಮಾಂಜ್ರಾ ಜಿಲ್ಲೆಯಲ್ಲಿ 125 ಕಿ.ಮೀ. ಹರಿಯುತ್ತದೆ. ಬಚಾವತ್ ಆಯೋಗದ ತೀರ್ಪಿನ ಪ್ರಕಾರ ಬೀದರ್ 23.37 ಟಿಎಂಸಿ ನೀರು ಬಳಸಿಕೊಳ್ಳಬೇಕು. ಆದರೆ ಈ ಕೆಲಸ ಆಳುವ ಸರ್ಕಾರಗಳು ಈವರೆಗೆ ಮಾಡಿಲ್ಲ. ಕರ್ಕಾಟಕ ಸರ್ಕಾರ ಅಸಡ್ಡೆಯಿಂದ ಎಚ್ಚುತ್ತುಕೊಂಡಿರುವ ನೆರೆಯ ತೆಲಂಗಾಣ ಜಿಲ್ಲೆಯಿಂದ ಹರಿದು ಹೋಗುವ ನೀರನ್ನು ಸದ್ಬಳಕೆಗೆ ಯೋಜನೆ ರೂಪಿಸಿದೆ. ಸಂಗಾರಡ್ಡಿ ಜಿಲ್ಲೆಯ ನಾರಾಯಣಖೇಡ್ ಹತ್ತಿರ ಮಾಂಜ್ರಾ ನದಿಗೆ ಅಡ್ಡಲಾಗಿ ಬಸವೇಶ್ವರ ಏತ ನೀರಾವರಿ ಯೋಜನೆಗೆ ಇತ್ತೀಚೆಗೆ ಅಲ್ಲಿನ ಸಿಎಂ ಕೆ. ಚಂದ್ರಶೇಖರರಾವ ಚಾಲನೆ ನೀಡಿದ್ದಾರೆ.
ಮಾಂಜ್ರಾ ನೀರಿನ ಪೂರ್ಣ ಬಳಕೆಯಾದಲ್ಲಿ ಗಡಿ ಜಿಲ್ಲೆಯ ಹುಲಸೂರು, ಭಾಲ್ಕಿ, ಔರಾದ್, ಬೀದರ್ ತಾಲೂಕಿನ ಒಂದು ಲಕ್ಷಕ್ಕೂ ಅಧಿಕ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಜತೆಗೆ 150ಕ್ಕೂ ಹೆಚ್ಚು ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲಿದೆ. ಆದರೆ ಜಿಲ್ಲೆ ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸದಿರುವುದು ದುರಾದೃಷ್ಟಕರ ಸಂಗತಿ.
ಜಲಾಸ ಪ್ರಯೋಗಕ್ಕೆ ಪ್ರತಿಪಕ್ಷ ಸಜ್ಜು: ಪ್ರತಿ ಚುನಾವಣೆಯಲ್ಲಿ ಕೋಮುವಾದ, ಭ್ರಷ್ಟಾಚಾರ, ಧರ್ಮ ವಾಕ್ಸಮರದ ವಿಷಯಗಳಾಗುತ್ತಿದ್ದವು. ಆದರೆ ಮುಂದಿನ ಚುನಾವಣೆ ನೀರಿನ ಮೇಲೆ ನಡೆಯುವ ಸೂಚನೆಗಳು ಕಾಣುತ್ತಿವೆ. ಏಕೆಂದರೆ ಪ್ರಮುಖ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ಗಳೆರಡೂ ಆಡಳಿತರೂಢ ಬಿಜೆಪಿಯ ವಿರುದ್ಧ ಜಲಾಸ ಪ್ರಯೋಗಕ್ಕೆ ಸಜ್ಜಾಗಿವೆ. ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಮೂಲಕ ಬಿಜೆಪಿ ವಿರುದ್ಧ ಸಮರ ಸಾರಿದರೆ, ಜೆಡಿಎಸ್ ಜಲಧಾರೆ ಯಾತ್ರೆಯೊಂದಿಗೆ ಚುನಾವಣೆ ಕಾವು ಏರಿಸುವಂತೆ ಮಾಡಿದೆ.