

ಶ್ರೀನಿವಾಸಪುರ: ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳಿಂದ ನೀರಾವರಿ ವಿಚಾರದಲ್ಲಿ ಅನ್ಯಾಯವಾಗಿದ್ದು, ಜಲಸಂಪನ್ಮೂಲಗಳ ಸದ್ಬಳಕೆಗೆ ಜನತೆ ಜೆಡಿಎಸ್ಗೆ ಪೂರ್ಣ ಬಹುಮತ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಪಟ್ಟಣದಲ್ಲಿ ಜನತಾ ಜಲಧಾರೆ ಯಾತ್ರೆ ಪ್ರಯುಕ್ತ ಸೋಮವಾರ ಆಯೋಜಿಸಿದ್ದ ಬೃಹತ್ ಮೆರವಣಿಗೆ ನಂತರ ನಡೆದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಯಥೇಚ್ಛ ಜಲಸಂಪನ್ಮೂಲವಿದ್ದು ಅದರ ಸದ್ಬಳಕೆ ಮಾಡುವಲ್ಲಿ ರಾಷ್ಟ್ರೀಯ ಪಕ್ಷಗಳು ವಿಫಲವಾಗಿವೆ. ಸಂಸತ್ನಲ್ಲಿ ನಮ್ಮ ನೆಲ, ಜಲದ ವಿಚಾರ ಬಂದಾಗ ಸಂಸದರು ಸಮರ್ಥವಾಗಿ ಎದುರಿಸುತ್ತಿಲ್ಲ. 90ರ ಇಳಿವಯಸ್ಸಿನಲ್ಲೂ ದೇವೇಗೌಡರು ರಾಜ್ಯ ಸಭೆಯಲ್ಲಿ ತಮಿಳುನಾಡಿನವರ ವಿರೋಧದ ನಡುವೆಯೂ ನಮಗಾಗಿರುವ ಅನ್ಯಾಯ ಬಿಡಿಸಿ ಹೇಳಿದ್ದಾರೆ. ನಮ್ಮ ನೀರಿನ ಪ್ರತಿ ಹನಿ ಬಳಸಿಕೊಳ್ಳಬೇಕೆಂಬ ಗೌಡರ ಮನದಿಚ್ಛೆ ಈಡೇರಿಸಿ, ಪ್ರತಿ ಮನೆಗೆ ಕುಡಿಯಲು ನದಿ ಮೂಲದ ಜಲ ಒದಗಿಸಬೇಕೆಂಬ ಮಹತ್ವಾಕಾಂಕ್ಷೆ ಹೊಂದಿ ಜಲಧಾರೆ ಯಾತ್ರೆ ಆಯೋಜಿಸಲಾಗಿದೆ ಎಂದರು.
ನೆರೆಯ ತೆಲಂಗಾಣದಲ್ಲಿ ಕೇವಲ ಮೂರು ವರ್ಷದಲ್ಲಿ 1 ಲಕ್ಷ 20 ಸಾವಿರ ಕೋಟಿ ರೂ.ವೆಚ್ಚದಲ್ಲಿ ಕಾಳೇಶ್ವರ ನೀರಾವರಿ ಯೋಜನೆ ಜಾರಿಗೊಳಿಸಿ 240 ಟಿಎಂಸಿ ನೀರು ಸದ್ಬಳಸಿಕೊಂಡಿದ್ದಾರೆ. ಇದನ್ನು ನೋಡಿ ಸ್ಫೂರ್ತಿಗೊಂಡು, ಜಲ ಸಂಪನ್ಮೂಲಗಳ ಸದ್ಬಳಕೆಗೆ ಸಂಕಲ್ಪ ಮಾಡಿದ್ದೇವೆ ಎಂದರು.
ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ಮಾತನಾಡಿ, ಕಾಂಗ್ರೆಸ್ನ ಮುನಿಯಪ್ಪಗೆ ಕೈ ಕೊಟ್ಟು ಸಂಸದ ಮುನಿಸ್ವಾಮಿ ಅವರನ್ನು ಗೆಲ್ಲಿಸಿದ ನೀವು ಬಿಜೆಪಿ ಬಿ ಟೀಂ ಅಲ್ಲದೆ ಇನ್ನೇನು? ಯಾವುದಾದರೂ ಒಂದು ಕಡೆ ಇರದವರನ್ನು ಏನನ್ನಬೇಕು ಎಂದು ನಪುಂಸಕನ ಕಥೆ ಹೇಳಿ ರಮೇಶ್ಕುಮಾರ್ ಅವರನ್ನು ಛೇಡಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ, ಎಸ್ಸಿ, ಎಸ್ಟಿ, ಮುಸ್ಲಿಮರ ಪರ ಎನ್ನುತ್ತೀಯಾ, ಆ ಸಮುದಾಯ ಹೆಚ್ಚಿಗೆ ಇರುವ ಹಳ್ಳಿಗಳಿಗೆ ನೀರು ಕೊಟ್ಟಿದ್ದೀಯಾ? ಒಂದು ಕೊಳವೆಬಾವಿ ಕೊರಿಸಿದ್ದೀಯಾ? ಹೈಟೆಕ್ ಹಾಸ್ಪಿಟಲ್, ಮೆಡಿಕಲ್ ಕಾಲೇಜು ಸ್ಥಾಪನೆ ಎಲ್ಲಿವರೆಗೆ ಬಂತು? ಡಿಸಿಸಿ ಬ್ಯಾಂಕ್ ಸಾಲ ಕೊಟ್ರೆ ನೀನೇ ಕೊಟ್ಟಂತೆ ೋಟೋ ಹಾಕಿಸ್ಕೋತಿಯಾ? ದಿ.ಡಿ.ಕೆ.ರವಿ ಮಾಡಿದ ಕೆ.ಸಿ.ವ್ಯಾಲಿ ಯೋಜನೆ ನಿನ್ನದೇ ಕೊಡುಗೆ ಅಂತ ಹೇಳ್ತೀಯಾ ನಾಚಿಕೆಯಾಗೋಲ್ವೆ ಎಂದು ರಮೇಶ್ ಕುಮಾರ್ ವಿರುದ್ಧ ಏಕವಚನದಲ್ಲೇ ಪ್ರಹಾರ ನಡೆಸಿದರು.
ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ಎಂಎಲ್ಸಿ ಇಂಚರ ಗೋವಿಂದರಾಜು, ಪಕ್ಷದ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಮುನೇಗೌಡ, ಮುಖಂಡರಾದ ಸಿಎಂಸಿ ಶ್ರೀನಾಥ್, ಮಲ್ಲೇಶ್ ಬಾಬು, ಜಿ.ಇ.ರಾಮೇಗೌಡ, ಒಕ್ಕಲಿಗರ ಸಂಘ ನಿರ್ದೇಶಕರಾದ ವಕ್ಕಲೇರಿ ಇ.ರಾಮಚಂದ್ರ, ಡಾ.ರಮೇಶ್, ಪಕ್ಷದ ಕೋಲಾರ ತಾಲೂಕು ಅಧ್ಯಕ್ಷೆ ಕುರ್ಕಿ ರಾಜರಾಜೇಶ್ವರಿ ಇತರರು ಇದ್ದರು.
ರಾಜ್ಯದಲ್ಲಿ ಮುಸ್ಲಿಮರಿಂದ ಬಂಗಾರ ಖರೀದಿಸಬಾರದು ಎಂದು ಕೆಲ ಹಿಂದುಪರ ಸಂಘಟನೆಗಳು ಕರೆ ಕೊಟ್ಟಿರುವ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀನಿವಾಸಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ಎಲ್ಲ ಮುಗಿದ ಮೇಲೆ ಈಗ ಬಂಗಾರದ ವಿಷಯಕ್ಕೆ ಬಂದಿದ್ದಾರೆ. ನಮ್ಮದು ಬಸವಾದಿ ಶರಣರು, ಕುವೆಂಪು ಹುಟ್ಟಿದ ನಾಡು. ಇದೆಲ್ಲ ಇಲ್ಲಿ ನಡೆಯೋಲ್ಲ. ರಾಜ್ಯದಲ್ಲಿ ಜಾತ್ಯತಿತ ಸಿದ್ಧಾಂತ ಉಳಿಯಲು ಜೆಡಿಎಸ್ ಬೀದರ್ನಿಂದ ಪಾದಯಾತ್ರೆ ಮಾಡಲು ಮುಂದಾಗಿದ್ದು, ಸರ್ಕಾರಕ್ಕೆ ತಿಂಗಳ ಗಡುವು ನೀಡಿದ್ದೇವೆ ಎಂದರು. ಮೈತ್ರಿ ಸರ್ಕಾರ ಹೋಗಲಿಕ್ಕೆ ಕೈ ಪಿತೂರಿ: ಮೈತ್ರಿ ಸರ್ಕಾರ ಹೋಗಲಿಕ್ಕೆ ಯಾರು ಕಾರಣ? ಕುಮಾರಸ್ವಾಮಿ ಸರ್ಕಾರ ಕೆಡವಿದ್ರೆ ಯಡಿಯೂರಪ್ಪ ಸರ್ಕಾರ ಬಂದು 6 ತಿಂಗಳಲ್ಲಿ ಕೆಟ್ಟಹೆಸರು ಬಂದು ಹೋಗುತ್ತೆ. ನಂತರ ಕಾಂಗ್ರೆಸ್ ಸರ್ಕಾರ ಬರುತ್ತೆ ಎಂದು ಸಿದ್ದರಾಮಯ್ಯ ಮತ್ತು ನೀವು ಹೇಗೆಲ್ಲ ಪಿತೂರಿ ಮಾಡಿದ್ರಿ ಎಂದು ಜನರಿಗೆ ಗೊತ್ತಿದೆ ಬಿಡಿ ಎಂದು ಶಾಸಕ ರಮೇಶ್ ಕುಮಾರ್ ವಿರುದ್ಧ ಕುಮಾರಸ್ವಾಮಿ ವಾಗ್ಧಾಳಿ ನಡೆಸಿದರು. ಇನ್ನು ಮುಂದೆ ನಿಮ್ಮ ಡ್ರಾಮ ನಡೆಯೋಲ್ಲ, ಗೋಸುಂಬೆ ರಾಜಕಾರಣಕ್ಕೆ ಜನ ಇತಿಶ್ರೀ ಹಾಡಲಿದ್ದಾರೆ ಎಂದು ಎಚ್ಡಿಕೆ ಎಚ್ಚರಿಕೆ ನೀಡಿದರು.
ಮುಸ್ಲಿಮರ ಬಳಿ ಬಂಗಾರ ಖರೀದಿಸುವುದರ ವಿರುದ್ಧದ ಅಭಿಯಾನ ಸರಿಯಲ್ಲ. ಇಂತಹ ವಿಚಾರಗಳ ಬಗ್ಗೆ ನಾಡಿನ ಜನ ಎಚ್ಚರಿಕೆಯಿಂದ ಇರಬೇಕು. ಕೋಮು ಸಾಮರಸ್ಯ ಕದಡಲು ಬಿಜೆಪಿ ಬೆಂಕಿ ಹಚ್ಚುತ್ತಿದ್ದರೆ ಕಾಂಗ್ರೆಸ್ಸಿಗರು ತುಪ್ಪ ಸುರಿಯುತ್ತಿದ್ದಾರೆ. ಲವ್ ಜಿಹಾದ್ಗೆ ವಿರುದ್ಧವಾಗಿ ಲವ್ಕೇಸರಿ ಮಾಡಿದ್ರೆ ಮಾಡಲಿ, ಅಡುಗೆ ಭಟ್ರು, ಪುರೋಹಿತರನ್ನು ನಾವೇ ಕಳುಹಿಸೋಣ ಎಂದರು. ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ.