ಜೆಡಿಎಸ್‌ಮುಖಂಡರಿಂದ ಪಕ್ಷಾಂತರ ಪರ್ವ

ಜೆಡಿಎಸ್‌ಮುಖಂಡರಿಂದ ಪಕ್ಷಾಂತರ ಪರ್ವ
Published on

ಹೊಳೆನರಸೀಪುರ: ಹಿಂದೆ ಎಚ್.ಡಿ. ದೇವೇಗೌಡರು ಜನತಾದಳದ ನಾಯಕರಾಗಿದ್ದಾಗ ರಾಜ್ಯದಾದ್ಯಂತ ಅವರ ಪಕ್ಷ ಅಸ್ತಿತ್ವದಲ್ಲಿತ್ತು. ಎಲ್ಲ ಸಮುದಾಯಗಳ ನಾಯಕರು ಅವರ ಪಕ್ಷದಲ್ಲಿದ್ದರು. ದೇವೇಗೌಡರ ಮಕ್ಕಳಾದ ಎಚ್.ಡಿ. ರೇವಣ್ಣ ಮತ್ತು ಎಚ್.ಡಿ. ಕುಮಾರಸ್ವಾಮಿ ಪ್ರವರ್ಧಮಾನಕ್ಕೆ ಬರಲಾರಂಭಿಸಿದಂತೆ ಪಕ್ಷಲ್ಲಿದ್ದ ವಿವಿಧ ನಾಯಕರು ದೂರವಾಗಲಾರಂಭಿಸಿದರು. ಪಕ್ಷವೂ ಒಡೆದು ದೇವೇಗೌಡರು ಜಾತ್ಯತೀತ ಜನತಾದಳ ಕಟ್ಟಿಕೊಂಡರು. ಪಕ್ಷ ಹಳೇ ಮೈಸೂರು ಪ್ರಾಂತ್ಯದಲ್ಲಿ ಪ್ರಾಬಲ್ಯ ಉಳಿಸಿಕೊಂಡಿತ್ತು. ಈಗ ಎಚ್.ಡಿ. ರೇವಣ್ಣ ಮಕ್ಕಳು ಮತ್ತು ಎಚ್.ಡಿ. ಕುಮಾರಸ್ವಾಮಿ ಮಗ ಪಕ್ಷದಲ್ಲಿ ಮುಂಚೂಣಿಗೆ ಬರಲಾರಂಭಿಸಿದ್ದಾರೆ. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪಕ್ಷ ತೊರೆಯುವ ಮತ್ತೊಂದು ಹಂತ ಪ್ರಾರಂಭವಾಗಿದೆ.


ಹಾಸನ ಜಿಲ್ಲೆಯ ವಿಷಯಕ್ಕೆ ಸೀಮಿತವಾಗಿ ಹೇಳುವುದಾದರೆ ಹಿಂದೆ ಎಚ್.ಡಿ. ರೇವಣ್ಣ ಪಕ್ಷದ ಮೇಲೆ ಹಿಡಿತ ಹೊಂದಲಾರಂಭಿಸಿದ ಸಂದರ್ಭದಲ್ಲಿ ಮಾಜಿ ಶಾಸಕರಾದ ಸಿ.ಎಸ್. ಪುಟ್ಟೇಗೌಡ ಮತ್ತು ಎಚ್.ಎಂ. ವಿಶ್ವನಾಥ್ ಪಕ್ಷದ ತೊರೆದರು. ನಂತರ ರಾಜ್ಯಸಭೆ ಮಾಜಿ ಸದಸ್ಯ ಎಚ್.ಕೆ. ಜವರೇಗೌಡ ಸಹ ದೂರವಾದರು. ಕಾಲಚಕ್ರ ಉರುಳಿದಂತೆ ಜಿಲ್ಲೆಯಲ್ಲಿ ಜೆಡಿಎಸ್ ಈಗ ಮತ್ತೆ ಅದೇ ಪರಿಸ್ಥಿತಿಗೆ ಬಂದು ನಿಂತಿದೆ.
ರೇವಣ್ಣನವರ ಒಬ್ಬ ಪುತ್ರ ಪ್ರಜ್ವಲ್ ಸಂಸದ, ಮತ್ತೊಬ್ಬ ಪುತ್ರ ಸೂರಜ್ ವಿಧಾನ ಪರಿಷತ್ ಸದಸ್ಯರಾದ ನಂತರ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಮತ್ತು ಅರಕಲೂಡು ಶಾಸಕ ಎ.ಟಿ. ರಾಮಸ್ವಾಮಿ ಜೆಡಿಎಸ್‌ನಿಂದ ಮಾನಸಿಕವಾಗಿ ದೂರವಾಗಿ ಈಗ ದೈಹಿಕವಾಗಿಯೂ ಪಕ್ಷ ತೊರೆಯುವುದು ಖಚಿತವಾಗಿದೆ. ಹಿಂದೆ ಗ್ರಾಮ ಪಂಚಾಯಿತಿಯಿಂದ ಹಿಡಿದು ವಿಧಾನಸಭೆ ಚುನಾವಣೆವರೆಗೆ ಜೆಡಿಎಸ್ ಅಭ್ಯರ್ಥಿಗಳನ್ನು ನಿರ್ಧರಿಸುತ್ತಿದ್ದ ಎಚ್.ಡಿ. ರೇವಣ್ಣನವರಿಗೆ ಈಗ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಷಯದಲ್ಲಿ ಉದ್ಭವಿಸಿರುವ ಬಿಕ್ಕಟ್ಟು ಶಮನಗೊಳಿಸುವಷ್ಟು ಶಕ್ತಿಯೂ ಇಲ್ಲದಂತಾಗಿದೆ.
ಪಕ್ಷದಲ್ಲಿ ತಮ್ಮ ಪತ್ನಿ ಭವಾನಿ ಮತ್ತು ಪುತ್ರರಾದ ಸೂರಜ್ ಮತ್ತು ಪ್ರಜ್ವಲ್ ಅವರನ್ನು ಮುಂಚೂಣಿಗೆ ತಂದ ನಂತರ ಎಚ್.ಡಿ. ರೇವಣ್ಣ ದುರ್ಬಲರಾಗುತ್ತಿರುವರೇ ಎಂಬ ಪ್ರಶ್ನೆ ಪಕ್ಷದ ಕಾರ್ಯಕರ್ತರಲ್ಲಿ ಮತ್ತು ಸಾರ್ವಜನಿಕರಲ್ಲಿ ಹುಟ್ಟಿಕೊಂಡಿದೆ.

ತವರಿನಲ್ಲೇ ಬಂಡಾಯ:
ಕಳೆದ ಎರಡೂವರೆ ದಶಕಗಳಿಂದ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಅನಭಿಷಿಕ್ತ ರಾಜನಂತೆ ಮರೆಯುತ್ತಿದ್ದ ಎಚ್.ಡಿ. ರೇವಣ್ಣ ಈಗ ಬಂಡಾಯದ ಬಿಸಿ ಕಾಣುವಂತಾಗಿದೆ. ಕಳೆದ 35 ವರ್ಷಗಳಿಂದ ಎಚ್.ಡಿ. ರೇವಣ್ಣನವರ ಬೆನ್ನೆಲುಬಾಗಿ ನಿಂತು ಪಟ್ಟಣದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ಹೊಳೆನರಸೀಪುರ ಪುರಸಭೆ ಮಾಜಿ ಅಧ್ಯಕ್ಷ ಎಚ್.ವಿ. ಪುಟ್ಟರಾಜು ಮತ್ತು ಕಳೆದ 40 ವರ್ಷಗಳಿಂದ ರೇವಣ್ಣನವರ ಬಲಗೈ ಬಂಟನಾಗಿದ್ದ ಪುರಸಭೆ ಮಾಜಿ ಸದಸ್ಯ ಕುಮಾರ್ ಅವರು ಅಪಾರ ಬೆಂಬಲಿಗರು ಮತ್ತು ಕಾರ್ಯಕರ್ತರೊಂದಿಗೆ ಬುಧವಾರ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿರುವುದು ರೇವಣ್ಣನವರಿಗೆ ಆಘಾತ ಉಂಟು ಮಾಡಿರುವುದರಲ್ಲಿ ಎರಡು ಮಾತಿಲ್ಲ.


ಈ ಬೆಳವಣಿಗೆಗಳು ಚುನಾವಣೆ ಸಮಯದಲ್ಲಿ ಸಾಮಾನ್ಯ ಎಂಬಂತೆ ಕಂಡರೂ ರೇವಣ್ಣನವರ ಕುಟುಂಬ ಇಡೀ ಜಿಲ್ಲೆಯಲ್ಲಿ ಪಕ್ಷದ ಮೇಲೆ ಹಿಡಿತ ಹೊಂದಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಅವರ ಕಾಲಡಿಯೇ ಪಕ್ಷಾಂತರದ ಬೆಂಕಿ ಬಿದ್ದಿರುವುದು ನುಂಗಲಾರದ ತುತ್ತಾಗಿದೆ. ಇಷ್ಟು ವರ್ಷಗಳ ಕಾಲ ಇಲ್ಲದ ಅಸಮಾಧಾನ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಈಗ ಹುಟ್ಟಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಹೊರಟರೆ ಸುಳಿವುಗಳು ರೇವಣ್ಣ ಕುಟುಂಬದತ್ತಲೇ ಬೊಟ್ಟು ಮಾಡುತ್ತವೆ.

ಪತ್ನಿ, ಪುತ್ರರ ಪಾರುಪತ್ಯ:
ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ರಾಜಕೀಯ ಮತ್ತು ಅಭಿವೃದ್ಧಿ ವಿಷಯದಲ್ಲಿ ಎಚ್.ಡಿ. ರೇವಣ್ಣ ತೀರ್ಮಾನ ತೆಗೆದುಕೊಳ್ಳುವುದು ಬಿಟ್ಟು ಬಹಳ ವರ್ಷಗಳಾಗಿವೆ ಎಂಬುದಾಗಿ ಪಕ್ಷದ ಮೂಲಗಳೇ ಹೇಳುತ್ತವೆ. ಇಲ್ಲಿ ಎಲ್ಲವೂ ಪತ್ನಿ ಭವಾನಿ ಹಾಗೂ ಪುತ್ರರಾದ ಸೂರಜ್ ಮತ್ತು ಪ್ರಜ್ವಲ್ ಆಣತಿಯಂತೆಯೇ ನಡೆಯುತ್ತಿವೆ. ಸರ್ಕಾರಿ ಕಾರ್ಯಕ್ರಮಗಳಲ್ಲೂ ರೇವಣ್ಣನವರ ಜೊತೆ ಭವಾನಿ ಸಹ ಭಾಗವಹಿಸಿ ಅವರೇ ಮುಖ್ಯ ಭಾಷಣ ಮಾಡುವುದು ಇತ್ತೀಚಿಗೆ ಸಾಮಾನ್ಯವಾಗಿದೆ. ಈ ಬೆಳವಣಿಗೆಗಳು ಪಕ್ಷದ ನಿಷ್ಟಾವಂತ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಸೂರಜ್ ಮತ್ತು ಪ್ರಜ್ವಲ್ ತಮ್ಮ ತಂದೆಗಿಂತಲೂ ವಯಸ್ಸಾದ ಮುಖಂಡರನ್ನು ಕೀಳಾಗಿ ಕಂಡಿರುವ ಉದಾಹರಣೆಗಳು ಸಾಕಷ್ಟಿವೆ ಎಂದು ಹೇಳಲಾಗುತ್ತಿದೆ.

ವಿರುದ್ಧ ಮತಗಳ ಕ್ರೋಡೀಕರಣಕ್ಕೆ ಇಂಬು:
ಜೆಡಿಎಸ್‌ನ ಕೆಲ ಮುಖಂಡರು ಮತ್ತು ಕಾರ್ಯಕರ್ತರು ಪಕ್ಷ ತೊರೆದು ಕಾಂಗ್ರೆಸ್ ಸೇರಿರುವುದರಿಂದ ಸದ್ಯಕ್ಕೆ ಎಚ್.ಡಿ. ರೇವಣ್ಣನವರಿಗೆ ಯಾವುದೇ ಹಿನ್ನಡೆ ಆಗದಿರಬಹುದು. ಆದರೆ ಚುನಾವಣೆ ಸಂದರ್ಭದಲ್ಲಿ ರೇವಣ್ಣ ವಿರೋಧಿ ಮತಗಳ ಕ್ರೊಡೀಕರಣಕ್ಕೆ ಇದರಿಂದ ಇಂಬು ದೊರೆಯುವುದಂತೂ ಸತ್ಯ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಚ್.ಡಿ. ರೇವಣ್ಣ 1,08,541 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಬಿ.ಪಿ. ಮಂಜೇಗೌಡ 64,709 ಮತ ಗಳಿಸಿದ್ದರು. ನೋಡುವುದಕ್ಕೆ ಇದು ಕಡಿಮೆ ಎನಿಸಬಹುದು. ಆದರೆ ಕ್ಷೇತ್ರದ ಪರಿಚಯವೇ ಇಲ್ಲದ, ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ಅದೇ ತಾನೆ ಚುನಾವಣಾ ಕಣಕ್ಕೆ ಧುಮುಕಿದ್ದ ಬಿ.ಪಿ. ಮಂಜೇಗೌಡರಿಗೆ ಈ ಪ್ರಮಾಣದಲ್ಲಿ ಮತ ಬಿದ್ದಿದ್ದು ಅಚ್ಚರಿ ತಂದಿತ್ತು. ಅವೆಲ್ಲವೂ ರೇವಣ್ಣ ವಿರೋಧಿ ಮತಗಳು ಎಂಬುದರಲ್ಲಿ ಎರಡು ಮಾತಿಲ್ಲ.


ಈ ಬಾರಿ ಎಚ್.ಡಿ. ದೇವೇಗೌಡರ ಬದ್ಧ ರಾಜಕೀಯ ವೈರಿ ಆಗಿದ್ದ ದಿವಂಗತ ಸಂಸದ ಜಿ.ಪುಟ್ಟಸ್ವಾಮಿಗೌಡರ ಮೊಮ್ಮಗ ಜಿಪಂ ಮಾಜಿ ಸದಸ್ಯ ಶ್ರೇಯಸ್ ಪಟೇಲ್ ಅವರೇ ಕಾಂಗ್ರೆಸ್ ಅಭ್ಯರ್ಥಿ ಅಗುವ ಸಾಧ್ಯತೆ ಇರುವುದರಿಂದ ರೇವಣ್ಣ ವಿರೋಧಿ ಮತಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ನತ್ತ ವಾಲುವ ಸಾಧ್ಯತೆ ಇದೆ. ಆದರೆ ಹಾಸನ ತಾಲೂಕಿನ ದುದ್ದ ಮತ್ತು ಶಾಂತಿಗ್ರಾಮ ಹಾಗೂ ಚನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿ ಹೋಬಳಿಗಳು ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಭಾಗವಾಗಿರುವುದರಿಂದ ಎಚ್.ಡಿ. ರೇವಣ್ಣನವರ ಗೆಲುವಿನ ಓಟಕ್ಕೆ ಧಕ್ಕೆ ಆಗುವ ಸಾಧ್ಯತೆಗಳು ಸಧ್ಯಕ್ಕೆ ಕಡಿಮೆ ಇವೆ.

‘‘40 ವರ್ಷಗಳಿಂದ ಜೆಡಿಎಸ್ ಕಟ್ಟಾ ಬೆಂಬಲಿಗನಾಗಿ ದುಡಿದಿದ್ದೇನೆ. ಶಾಸಕರ ಕುಟುಂಬ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಮನಸ್ಸಿಗೆ ನೋವುಂಟು ಮಾಡಿದೆ. ವಯಸ್ಸಿನ ಅರಿವಿಲ್ಲದೆ ಅವರಾಡಿದ ಏಕವಚನದ ನಿಂದನೆ ಮಾತುಗಳು ಬೇಸರ ತರಿಸಿದವು. ನನಗೆ ಗೌರವವಿಲ್ಲದ ಪಕ್ಷದಲ್ಲಿ ಇರಬಾರದೆಂದು ನಿರ್ಧರಿಸಿ ಕಾಂಗ್ರೆಸ್ ಸೇರಿದ್ದೇನೆ.’’ಕುಮಾರ್, ಪುರಸಭೆ ಮಾಜಿ ಸದಸ್ಯ, ಹೊಳೆನರಸೀಪುರ.

‘‘ಜೆಡಿಎಸ್ ಪಕ್ಷದಲ್ಲಿ ನಿಷ್ಠಾವಂತನಾಗಿ ಶಾಸಕರ ಆಣತಿಯಂತೆ ನಡೆದುಕೊಂಡು ಬರುತ್ತಿದ್ದೆ. ಆದರೂ ನನ್ನನ್ನು ರಾಜಕೀಯವಾಗಿ ತುಳಿಯಲು ಶಾಸಕರ ಕುಟುಂಬ ಮುಂದಾಯಿತು. ನಮಗೆ ಗೌರವ, ಬೆಂಬಲ ಇಲ್ಲದ ಪಕ್ಷದಲ್ಲಿ ಇರಬಾರದು ಎಂದು ನಿರ್ಧರಿಸಿ ಜನಸೇವೆ ಮುಂದುವರೆಸುವ ಅಭಿಲಾಷೆಯಿಂದ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದೇನೆ. ನನ್ನ ಶಕ್ತಿ ಏನೆಂಬುದನ್ನು ತೋರಿಸಲು ನಿಶ್ಚಯಿಸಿದ್ದೇನೆ.’’

ಎಚ್.ವಿ. ಪುಟ್ಟರಾಜು, ಪುರಸಭೆ ಮಾಜಿ ಅಧ್ಯಕ್ಷ, ಹೊಳೆನರಸೀಪುರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net