

ಪಾಂಡವಪುರ: ಅನುದಾನ ತರಲಾಗದ ಅಸಮರ್ಥರು ಎಂದು ಟೀಕಿಸಿರುವ ಜೆಡಿಎಸ್ ನಾಯಕರು ತಮ್ಮ ಶಾಸಕತ್ವದ ಅವಧಿಯಲ್ಲಿ ಎಷ್ಟೆಷ್ಟು ಅನುದಾನ ತಂದು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ ಎಂದು ಕಿಸಾನ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಸಿ.ಆರ್.ರಮೇಶ್ ಆಗ್ರಹಿಸಿದರು.
ಕಾಂಗ್ರೆಸ್ ಸರ್ಕಾರ ರಚನೆಯಾಗಿ ಇನ್ನೂ ಎರಡು ತಿಂಗಳು ಕಳೆದಿಲ್ಲ. ಆಗಲೇ ಜೆಡಿಎಸ್ ಮಾಜಿ ಶಾಸಕರು ಅನುದಾನದ ವಿಚಾರ ಪ್ರಸ್ತಾಪಿಸಿ ರಾಜಕಾರಣ ಮಾಡಲು ಹೊರಟಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದೊಡನೆ ಮೈಷುಗರ್‌ಗೆ 50 ಕೋಟಿ ರೂ. ಅನುದಾನ ನೀಡಿ ಕಾರ್ಖಾನೆ ಚಾಲನೆಗೆ ಸಹಕಾರ ನೀಡಿದ್ದಾರೆ. ರಾಜ್ಯದ ಜನತೆಗೆ ನೀಡಿದ ಆಶ್ವಾಸನೆಯಂತೆ ಐದು ಗ್ಯಾರಂಟಿಗಳನ್ನು ಈಡೇರಿಸಿದ್ದಾರೆ. ಜೆಡಿಎಸ್ ಶಾಸಕರ ಅವಧಿಯಲ್ಲಿ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳು ಶೂನ್ಯವಾಗಿದೆ. ಆದರೂ ಅನುದಾನದ ವಿಚಾರ ಮುಂದಿಟ್ಟುಕೊಂಡು ಸಚಿವ ಚಲುವರಾಯಸ್ವಾಮಿ ಅವರನ್ನು ಟೀಕಿಸುತ್ತಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಧಿಕಾರದಲ್ಲಿದ್ದಾಗ ಜಿಲ್ಲೆಗೆ ನೀಡಿರುವ ಅನುದಾನ ಬಗ್ಗೆ ಜೆಡಿಎಸ್ ಮುಖಂಡರು ಆತ್ಮವಲೋಕನ ಮಾಡಿಕೊಳ್ಳಬೇಕು. ಜನರಿಗೆ ತಪ್ಪು ಮಾಹಿತಿ ನೀಡಿ ದಿಕ್ಕು ತಪ್ಪಿಸುವುದನ್ನು ಬಿಡಬೇಕು. ತಮ್ಮ ನಾಯಕರ ಓಲೈಸಲು ಈ ರೀತಿಯ ದ್ವೇಷದ ರಾಜಕಾರಣ ಮಾಡಬಾರದು ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಅಂತನಹಳ್ಳಿ ಬಸವರಾಜು, ಕೋ.ಪು. ಗುಣಶೇಖರ್, ಧರ್ಮೇಗೌಡ ಇತರರು ಇದ್ದರು.