ಜೆಡಿಎಸ್‌ನ ಲವ್ ಮಾಡಿ ಬಸ್ ಸ್ಟ್ಯಾಂಡ್‌ನಲ್ಲಿ ಬಿಟ್ಟ ಬಿಜೆಪಿ: ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಲೇವಡಿ

ex min cm ibrahim
Published on

ಮೈಸೂರು: ಜೆಡಿಎಸ್‌ನಿಂದ ಅನೇಕರು ನೋವು ಉಂಡಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಸರಿಯಾಗುತ್ತಾರೆ ಎಂದುಕೊಂಡಿದ್ದೆ. ಅವರು ಸರಿಯಾಗಲಿಲ್ಲ. ಇದೀಗ ಜೆಡಿಎಸ್ ಪಕ್ಷದ ಮನೆಗೆ ಬೆಂಕಿ ಬಿದ್ದಿದೆ ಎಂದು ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ, ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಕುಟುಕಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ, ಶಾಸಕ ಜಿ.ಟಿ.ದೇವೇಗೌಡ ಅವರನ್ನು ಕೇಳದೆ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ರಾಮನಗರ, ಮಂಡ್ಯದಂತಹ ಕ್ಷೇತ್ರದಲ್ಲಿ ಸೋತರೆ ವಿಜಯಪುರ ಗೆಲ್ತಾರಾ? ರಾಮನಗರದಲ್ಲಿ ಗೌಡರ ವೋಟು ನಿಖಿಲ್‌ಗೆ ಹೋಗಿಲ್ಲ. 20 ಸಾವಿರ ಮತಗಳು ಬೇರೆಯವರಿಗೆ ಹೋಯ್ತು ಎಂದರು.

ನಾನು ಇದ್ದಾಗ ಕುಮಾರಸ್ವಾಮಿ 20 ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ದರು. ಈಗ ಕೇಂದ್ರ ಸಚಿವರಾಗಿರುವ ಎಚ್‌ಡಿಕೆ ತನ್ನ ಮಗನನ್ನು ಸೋಲಿಸಿದ್ದಾರೆ ಎಂದರು.

ಈ ಹಿಂದೆ ಎಚ್.ಡಿ.ದೇವೇಗೌಡ ಅವರು ಇದ್ದಂತಹ ಸಿದ್ಧಾಂತಕ್ಕೆ ಬಂದರೆ ರಾಜ್ಯದ ಜನ ಕುಮಾರಸ್ವಾಮಿಯನ್ನು ಕ್ಷಮಿಸುತ್ತಾರೆ. ದೇವೇಗೌಡರಿಗೆ ಈ ವಯಸ್ಸಿನಲ್ಲಿ ಈ ರೀತಿ ಆಗಬಾರದಿತ್ತು. ಮಕ್ಕಳಿಂದ ಈ ರೀತಿಯಾಗಿದೆ. ಸ್ವಂತ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಈಗ ದೇವೇಗೌಡರಗಿಲ್ಲ. ಒಮ್ಮೆ ರಾಜ್ಯದ ಜನರ ಮುಂದೆ ತಪ್ಪಾಗಿದೆ ಅಂತ ಹೇಳಲಿ ಎಂದರು.

ಜೆಡಿಎಸ್ ಪಕ್ಷ ನಮ್ಮದು. ನಾವೇ ಅದರ ನೇತೃತ್ವ ತೆಗೆದುಕೊಳ್ಳುತ್ತೇವೆ. ರಾಜ್ಯಕ್ಕೆ ಮೂರನೇ ಶಕ್ತಿ ಬೇಕಾಗಿದೆ. ಹೀಗಾಗಿ ಜಿಟಿಡಿ, ನಾವೆಲ್ಲ ಮಾತುಕತೆ ಮಾಡ್ತೀವಿ. ಅನೇಕ ಜೆಡಿಎಸ್ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಅವರ ತೀರ್ಮಾನದಂತೆ ಮುಂದುವರಿಯುತ್ತೇವೆ ಎಂದರು.

ಜಿ.ಟಿ.ದೇವೇಗೌಡ ಅವರ ಹುಟ್ಟುಹಬ್ಬ. ಹೀಗಾಗಿ, ಅವರನ್ನು ಭೇಟಿ ಮಾಡಲು ಬಂದಿದ್ದೇನೆ. ಅವರೊಂದಿಗೆ ಈಗಾಗಲೇ ಮಾತನಾಡಿದ್ದು, ಅವರಿಗೆ ಶಕ್ತಿ ಇದೆ. ನಾವು ಯಾವುದೇ ಕಾರಣಕ್ಕೂ ಜೆಡಿಎಸ್ ಬಿಡಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಮತಗಳಿಂದ ಜೆಡಿಎಸ್ 18 ಸ್ಥಾನ ಗೆದ್ದಿದೆ. ಅದನ್ನು ಮರೆಯಬಾರದು ಎಂದರು.

ಮುಡಾ ವಿಚಾರದ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಅಧಿಕಾರಾವಧಿಯಲ್ಲಿ ಸಿಎಂಗೆ ಸೈಟ್ ಕೊಟ್ಟಿದ್ದಾರೆ. ಬಳಿಕ ವಿವಾದವಾಗಿದೆ. ತಕ್ಷಣ ಸಿಎಂ, ‘ಜಾಗ ನನ್ನದಾಗಿದ್ದರೆ ಕೊಡಿ ಇಲ್ಲಾಂದ್ರೆ ತಗೋಳಿ’ ಎಂದು ಹೇಳಬಹುದಿತ್ತು. ಆದರೆ, ಅವರು ಆ ರೀತಿ ಹೇಳಲಿಲ್ಲ. ಬಿಜೆಪಿಗೆ ರಾಜಕೀಯ ಮಾಡಲು ವಿಷಯ ಇಲ್ಲ. ಹೀಗಾಗಿ, ಮುಡಾ, ವಕ್ಫ್ ಅಂತ ಹೊರಟಿದೆ. ಬಿಜೆಪಿ ಜೆಡಿಎಸ್‌ನ ಲವ್ ಮಾಡಿ ಬಸ್ ಸ್ಟ್ಯಾಂಡ್‌ನಲ್ಲಿ ಬಿಟ್ಟಿದೆ ಎಂದು ಲೇವಡಿ ಮಾಡಿದರು.

ಬಿಜೆಪಿಯವರು ನರೇಂದ್ರ ಮೋದಿ ಅವರನ್ನು ಏನೂ ಕೇಳಲ್ಲ. ರಾಜ್ಯದ ಅಭಿವೃದ್ಧಿ ಬಗ್ಗೆ ಕೇಳಿ ಅಂದರೆ, ಸಾಬರ ಸ್ಮಶಾನ, ಜಾಗ ಅಂತಾರೆ. ನಮ್ಮವರು ನಮ್ಮ ನೆಲ ಅಂತಿದ್ದಾರೆ. ಇದೇ ಬಿಜೆಪಿಯವರು ಮೋದಿಯನ್ನು ಮಹದಾಯಿ ಯೋಜನೆ, ಮೇಕೆದಾಟು ಯೋಜನೆ ಜಾರಿ ಮಾಡಿ ಎಂದು ಕೇಳಲಿ ಎಂದು ಸವಾಲು ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net