

ಹಾಸನ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡಿ, ಅವರಿಗೆ ಮತ ಹಾಕಿದ್ದೇವೆ ಎಂದು ಡೇರಿಯಲ್ಲಿ ನಾವು ತಂದ ಹಾಲು ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿ ಹಾಸನ ತಾಲೂಕಿನ, ದುದ್ದ ಹೋಬಳಿಯ ಸೋಮನಹಳ್ಳಿ ಗ್ರಾಮಸ್ಥರು ಹಾಲು ತುಂಬಿದ ಕ್ಯಾನ್‌ಗಳನ್ನು ಹಿಡಿದು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ, ತಮಗೆ ನ್ಯಾಯ ದೊರಕಿಸುವಂತೆ ಆಗ್ರಹಿಸಿದರು.
ದುದ್ದ ಹೋಬಳಿ, ಸೋಮನಹಳ್ಳಿಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಮತ ಬಂದಿದೆ. ಜೆಡಿಎಸ್‌ಗೆ ಮತ ಹಾಕದ ನಿಮ್ಮ ಹಾಲನ್ನು ಡೇರಿಗೆ ಹಾಕಿಸಿಕೊಳ್ಳುವುದಿಲ್ಲ ಎಂದು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಹೇಳುತ್ತಿದ್ದಾರೆ. ಬುಧವಾರ ಬೆಳಗ್ಗೆ ನಾವು ಡೇರಿ ತೆಗೆದುಕೊಂಡ ಹೋದ ಹಾಲನ್ನು ಸ್ವೀಕರಿಸದೇ ವಾಪಸ್ ಕಳಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಜೆಡಿಎಸ್ ಮುಖಂಡ ಸೋಮನಹಳ್ಳಿ ನಾಗರಾಜು, ಜೆಡಿಎಸ್ ಮುಖಂಡರಾದ ಯೋಗಣ್ಣ, ಪರಮೇಶ ಹಾಗೂ ಇತರರು ಒತ್ತಡ ಹೇರಿ ನಮ್ಮಿಂದ ಹಾಲು ಪಡೆಯದಂತೆ ಮಾಡುತ್ತಿದ್ದಾರೆ. ಜಿಲ್ಲಾಡಳಿತ ಕೂಡಲೇ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯನ್ನು ಸೂಪರ್‌ಸೀಡ್ ಮಾಡಿ ಆಡಳಿತಾಧಿಕಾರಿಯನ್ನು ನೇಮಿಸಬೇಕು ಎಂದು ಆಗ್ರಹಿಸಿ ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸೋಮನಹಳ್ಳಿ ಗ್ರಾಮದ ಮುಖಂಡರಾದ ಶಿವಣ್ಣ, ರಾಮಚಂದ್ರ ಕಬ್ಬಳ್ಳಿ, ಗೋಪಾಲ್, ಕರೀಗೌಡ, ರಾಜಣ್ಣ ಇತರರು ಉಪಸ್ಥಿತರಿದ್ದರು.