ಜೆಡಿಎಸ್ ಶಾಸಕರು ಕಾಂಗ್ರೆಸ್‌ಗೆ ಹೋಗಲ್ಲ

23KOTTUR 01
Published on

ಕೊಟ್ಟೂರು: ನಾನು ಜೆಡಿಎಸ್ ತ್ಯಜಿಸಲಾರೆ. ಪಕ್ಷ ತ್ಯಜಿಸಿದರೆ ಕ್ಷೇತ್ರದ ಜನತೆ ವಂಚನೆ ಮಾಡಿದಂತೆ ಆಗುತ್ತದೆ ಎಂದು ಶಾಸಕ ನೇಮಿರಾಜ್ ನಾಯ್ಕ ಹೇಳಿದರು.

ಪಟ್ಟಣದಲ್ಲಿ ಗಜಾಪುರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದರು. ನಾನು ಕಾಂಗ್ರೆಸ್ ಸೇರುತ್ತೇನೆ ಎಂಬುದು ಹಸಿ ಸುಳ್ಳು. ಕಾಂಗ್ರೆಸ್‌ಗೆ ಹೋಗುವ ಅಗತ್ಯ ನನಗಿಲ್ಲ. ಕಾಂಗ್ರೆಸ್‌ನ ಕೆಲ ಸಚಿವರು ಬಾಯಿ ಚಪಲಕ್ಕೆ ನಾನು ಜೆಡಿಎಸ್ ತ್ಯಜಿಸುತ್ತೇನೆ ಎಂದು ಹೇಳುತ್ತಿದ್ದಾರೆ. ಜಿ.ಟಿ.ದೇವೇಗೌಡ ಸೇರಿದಂತೆ ಯಾವುದೇ ಜೆಡಿಎಸ್ ಶಾಸಕ ಕಾಂಗ್ರೆಸ್‌ಗೆ ಹೋಗುವ ಮಾತೇ ಇಲ್ಲ ಎಂದು ಹೇಳಿದರು.

ಕೊಟ್ಟೂರು-ಗಜಾಪುರ ರಸ್ತೆಯನ್ನು ಲೋಕೋಪಯೋಗಿ ಇಲಾಖೆಯ 6 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ಕೊಟ್ಟೂರು- ಹರಪನಹಳ್ಳಿ ರಸ್ತೆ ಅಭಿವೃದ್ಧಿಗೆ 3 ಕೋಟಿ ರೂ. ಮತ್ತು ಕೊಟ್ಟೂರು-ಹ.ಬೊ.ಹಳ್ಳಿ ರಸ್ತೆ ಅಭಿವೃದ್ಧಿಗೆ 7 ಕೋಟಿ ರೂ. ಮಂಜೂರಾಗಿದ್ದು, ಕಾಮಗಾರಿಯನ್ನು ಶೀಘ್ರ ಆರಂಭಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಕೊಟ್ಟೂರುದಿಂದ ಹಗರಿ ಮಾರ್ಗವಾಗಿ ಗಜಾಪುರದ 3 ಕಿಮೀ ರಸ್ತೆ ಅಭಿವೃದ್ಧಿಗೂ ಜಿಪಂ ಇಂಜಿನಿಯರಿಂಗ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕ್ಷೇತ್ರದ ಪ್ರತಿ ಗ್ರಾಮದಲ್ಲಿ ಅಭಿವೃದ್ಧಿಗಾಗಿ 50 ಲಕ್ಷ ರೂ. ಮಂಜೂರು ಮಾಡಿಸಲಾಗಿದೆ. ಕೊಟ್ಟೂರೇಶ್ವರ ರಥೋತ್ಸವ ಪೂರ್ಣಗೊಂಡ ನಂತರ ಈಗಿನ ಬಸ್ ನಿಲ್ದಾಣ ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸಲಾಗುವುದು. ತೇರು ಬಯಲು ಪ್ರದೇಶದಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ಸಿಸಿ ಕಾಮಗಾರಿ ನಡೆಸಲಾಗುವುದು. ಸುಸಜ್ಜಿತ ಆಸ್ಪತ್ರೆ ಕಟ್ಟಡಕ್ಕಾಗಿ ಕೆರೆ ಪ್ರದೇಶ ಬಳಿ ಜಾಗ ಗುರುತಿಸಲಾಗಿದೆ ಎಂದು ನೇಮಿರಾಜ್ ನಾಯ್ಕ ತಿಳಿಸಿದರು.

ಪ್ರಮುಖರಾದ ಬೂದಿ ಶಿವಕುಮಾರ್, ಗುರುಬಸವರಾಜ, ತಿಪ್ಪೇಸ್ವಾಮಿ, ಕೊಟ್ರೇಶ, ವಿಜಯನಗರ ಕೊಟ್ರೇಶ, ಮೂಗಣ್ಣ, ಗುತ್ತಿಗೆದಾರ ಒಬಳಾಪುರ ವೀರೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net