ಜೆಡಿಎಸ್ ಶಕ್ತಿಕೇಂದ್ರದಲ್ಲಿ ‘ಕೈ’ ಬಲ ಪ್ರದರ್ಶನ : ಪ್ರಜಾಧ್ವನಿ ಯಾತ್ರೆ

ಜೆಡಿಎಸ್ ಶಕ್ತಿಕೇಂದ್ರದಲ್ಲಿ ‘ಕೈ’ ಬಲ ಪ್ರದರ್ಶನ : ಪ್ರಜಾಧ್ವನಿ ಯಾತ್ರೆ
Published on

ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಬಡಕುಟುಂಬಗಳ ಪ್ರತಿಯೊಬ್ಬ ಸದಸ್ಯರಿಗೆ ಹತ್ತು ಕೆಜಿ ಅಕ್ಕಿ ಉಚಿತ ಕೊಡುವುದಾಗಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಘೋಷಿಸಿದರು.


ನಗರದ ಹೊರವಲಯ ತಣ್ಣೀರುಹಳ್ಳ ಸಮೀಪ ದೊಡ್ಡಮಂಡಿಗನಹಳ್ಳಿಯಲ್ಲಿ ಶನಿವಾರ ಮಧ್ಯಾಹ್ನ ನಡೆದ ‘ಪ್ರಜಾಧ್ವನಿ’ ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, 2013 ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಬಡವರ ಮನೆಯ ಪ್ರತಿ ಸದಸ್ಯರಿಗೆ ಉಚಿತವಾಗಿ 7 ಕೆಜಿ ಅಕ್ಕಿ ವಿತರಿಸುವ ಯೋಜನೆ ಜಾರಿಗೆ ತರಲಾಯಿತು. ಆದರೆ ಬಿಜೆಪಿ ಸರ್ಕಾರ ಅದನ್ನು 5 ಕೆಜಿಗೆ ಇಳಿಸಿತು. ಮತ್ತೆ ನಾವು ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ಉಚಿತವಾಗಿ ವಿತರಿಸಲಾಗುವುದು ಎಂದು ಪುನರುಚ್ಚರಿಸಿದರು.


ಈಗಾಗಲೇ ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ಮತ್ತು ಗೃಹಿಣಿಯರಿಗೆ ಮಾಸಿಕ 2 ಸಾವಿರ ರೂ.ಗಳಂತೆ ವರ್ಷಕ್ಕೆ 24,000 ರೂ.ಗಳನ್ನು ನೀಡುವ ಯೋಜನೆ ಘೋಷಿಸಲಾಗಿದೆ. ನಮ್ಮದು ನುಡಿದಂತೆ ನಡೆಯುವ ಸರ್ಕಾರ. ಹಿಂದೆ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ವಿದ್ಯಾಸಿರಿ, ಶಾದಿ ಭಾಗ್ಯ, ಕೃಷಿ ಭಾಗ್ಯ, ಶೂ ಭಾಗ್ಯ, ಮೈತ್ರಿ, ಮನಸ್ವಿನಿ ಮತ್ತಿತರ ಜನಪರ ಯೋಜನೆಗಳನ್ನು ಬಿಜೆಪಿ ಸರ್ಕಾರ ನಿಲ್ಲಿಸಿದೆ. ಇಂತಹ ಜನ ವಿರೋಧಿ ಸರ್ಕಾರವನ್ನು ಕಿತ್ತೊಗೆದು ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.

ಗೆದ್ದೆತ್ತಿನ ಬಾಲ ಹಿಡಿಯುವ ಪಕ್ಷ:
‘ಜೆಡಿಎಸ್ ಗೆದ್ದೆತ್ತಿನ ಬಾಲ ಹಿಡಿಯುವ ಪಕ್ಷ, ಅದಕ್ಕೆ ಯಾವುದೇ ಬದ್ಧತೆ ಇಲ್ಲ. ಅವರಿಗೆ ನೆಲ ಇರುವುದೇ ಐದಾರು ಜಿಲ್ಲೆಗಳಲ್ಲಿ ಮಾತ್ರ. ಜೆಡಿಎಸ್‌ಗೆ ಮತ ಹಾಕಿದರೆ ಜನವಿರೋಧಿ ಬಿಜೆಪಿಗೆ ಮತ ಹಾಕಿದಂತಾಗುತ್ತದೆ. ಕುಮಾರಸ್ವಾಮಿ ಈಗ ಪಂಚರತ್ನ ಅಂತ ತಮಟೆ ಹೊಡ್ಕೊಂಡು ಓಡಾಡ್ತಾ ಅವ್ನೆ, ಬಹುಮತ ಬರಲಿಲ್ಲ ಅಂದ್ರೆ ಪಕ್ಷ ವಿಸರ್ಜನೆ ಮಾಡ್ತೀನಿ ಅಂತ ಹೇಳ್ತಿದ್ದಾನೆ. ಯಾವತ್ತೂ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲದ ಜೆಡಿಎಸ್ ಪಕ್ಷವನ್ನು ಈಗಲೇ ವಿಸರ್ಜನೆ ಮಾಡುವುದು ಒಳ್ಳೆಯದು’ ಎಂದು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮೈಚಳಿ ಬಿಟ್ಟು ಧೈರ್ಯವಾಗಿ ಜೆಡಿಎಸ್ ಮತ್ತು ಬಿಜೆಪಿ ವಿರುದ್ಧ ಮಾತನಾಡಬೇಕು. ಆಗ ಜನ ತನ್ನಿಂತಾನೇ ನಿಮ್ಮ ಹಿಂದೆ ಬರುತ್ತಾರೆ. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಐದು ಕ್ಷೇತ್ರಗಳನ್ನು ಗೆಲ್ಲುವ ಶಕ್ತಿ ಕಾಂಗ್ರೆಸ್‌ಗಿದೆ. ಕಾರ್ಯಕರ್ತರು ಈಗನಿಂದಲೇ ಈ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಹುರಿದುಂಬಿಸಿದರು.

ಇಬ್ಬರು ಜೆಡಿಎಸ್ ಶಾಸಕರು ಕಾಂಗ್ರೆಸ್‌ಗೆ:
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಈಗಾಗಲೇ ಕಡೂರಿನ ವೈ.ಎಸ್.ವಿ. ದತ್ತ, ಚಿಕ್ಕಮಗಳೂರಿನ ಮಂಜುನಾಥ್, ಗುಬ್ಬಿ ವಾಸು, ಕೋಲಾರದ ಶ್ರೀನಿವಾಸಗೌಡ, ಹೊನ್ನಾಳಿಯ ದೇವೇಂದ್ರಪ್ಪ ಮತ್ತು ರಾಜಣ್ಣ ಶೆಟ್ಟಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಹಾಸನ ಜಿಲ್ಲೆಯ ಇಬ್ಬರು ಜೆಡಿಎಸ್ ಶಾಸಕರು ಸಹ ಕಾಂಗ್ರೆಸ್ ಸೇರಲು ಮಾತುಕತೆ ನಡೆಸಿದ್ದಾರೆ. ಇಲ್ಲಿ ಅವರ ಹೆಸರು ಹೇಳುವುದಿಲ್ಲ, ಮುಂದೆ ನಿಮಗೇ ತಿಳಿಯಲಿದೆ. ಹಾಸನ ಜಿಲ್ಲೆಯ ಏಳೂ ವಿಧಾನಸಭಾ ಕ್ಷೇತ್ರಗಳಲ್ಲಿ ಜಯಸಾಧಿಸುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕಿದೆ ಎಂದು ತಿಳಿಸಿದರು.
‘2018ರ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಾರದ ಕಾರಣ ಜನವಿರೋಧಿ ಬಿಜೆಪಿಗೆ ಅಧಿಕಾರ ಸಿಗಬಾರದು ಎಂಬ ಉದ್ದೇಶದಿಂದ ಜೆಡಿಎಸ್‌ಗೆ ಅಧಿಕಾರ ಕೊಟ್ಟೆವು, ನಾವು ಮುಖ್ಯಮಂತ್ರಿ ಸ್ಥಾನ ತೆಗೆದುಕೊಂಡು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಡಬಹುದಿತ್ತು. ಆದರೆ ಸರ್ಕಾರ ದೀರ್ಘಕಾಲ ಉಳಿಯಲಿ ಎಂಬ ಸದುದ್ದೇಶದಿಂದ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಿದೆವು. ಅದರೆ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಕೆಲಸವನ್ನು ಅವರು ಮಾಡಲಿಲ್ಲ. ಆಪರೇಷನ್ ಕಮಲಕ್ಕೆ ಸರ್ಕಾರ ಬಲಿ ಆಯಿತು. ಆದ್ದರಿಂದ ದಯಮಾಡಿ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಸುಭದ್ರ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.
ವೇದಿಕೆ ಕಾರ್ಯಕ್ರಮದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಂದೀಪ್ ಸುರ್ಜೆವಾಲಾ, ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಸಂಸದರಾದ ಡಿ.ಕೆ. ಸುರೇಶ್ ಮತ್ತು ಜಿ.ಸಿ. ಚಂದ್ರಶೇಖರ್, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ, ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್, ಮಾಜಿ ಸಚಿವರಾದ ಎಚ್.ಎಂ. ರೇವಣ್ಣ ಮತ್ತು ಬಿ. ಶಿವರಾಮು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಇ.ಎಚ್. ಲಕ್ಷ್ಮಣ್, ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ, ಮಾಜಿ ಶಾಸಕರಾದ ಸಿ.ಎಸ್. ಪುಟ್ಟೇಗೌಡ ಮತ್ತು ಎಂ.ಎ. ಗೋಪಾಲಸ್ವಾಮಿ, ಎಚ್.ಕೆ. ಮಹೇಶ್ ಇತರರು ಉಪಸ್ಥಿತರಿದ್ದರು.

ಸಿದ್ದು ಗುಣಗಾನಕ್ಕೆ ತಡೆ:
ವೇದಿಕೆ ಕಾರ್ಯಕ್ರಮ ಆರಂಭಕ್ಕೂ ಮುನ್ನ ಕಾರ್ಯಕರ್ತರನ್ನು ಹಿಡಿದಿಡಲು ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿವಿಧ ಹಾಡುಗಳನ್ನು ಹಾಡುತ್ತಿದ್ದ ಗಾಯಕ, ‘ಸಿದ್ದರಾಮಯ್ಯ… ಹಿಡಿದಾ…. ಬಡವರ ಕೈಯಾ….’ ಎಂಬು ಹಾಡು ಹೇಳಲು ಪ್ರಾರಂಭಿಸುತ್ತಿದ್ದಂತೆ ವೇದಿಕೆಯ ಮೇಲಿದ್ದ ಸಂಸದ ಡಿ.ಕೆ. ಸುರೇಶ್ ಎದ್ದು ಹೋಗಿ ಹಾಡು ನಿಲ್ಲಿಸಿದರು. ಒಬ್ಬ ವ್ಯಕ್ತಿಯ ಗುಣಗಾನ ಮಾಡುವ ಹಾಡು ಬೇಡ ಎಂದು ತಾಕೀತು ಮಾಡಿದರು. ಗಾಯಕ ತಕ್ಷಣ ಆ ಹಾಡು ಕೈ ಬಿಟ್ಟು, ‘ಹಲವು ಧರ್ಮದ ನಾಡೂ… ಸುಂದರ ನಮ್ಮಯ ಬೀಡು’ ಎಂಬ ಹಾಡು ಪ್ರಾರಂಭಿಸಿದರು. ಡಿ.ಕೆ. ಸುರೇಶ್ ಅವರ ನಡೆ ಸಿದ್ದರಾಮಯ್ಯ ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದ್ದಲ್ಲದೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಡುವೆ ಸಾಮರಸ್ಯ ಎಂಬುದನ್ನು ಸಾರಿತು.

ರೋಡ್ ಶೋ:
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಹಾಸನಕ್ಕೆ ಆಗಮಿಸಿದ ‘ಪ್ರಜಾಧ್ವನಿ’ ಬಸ್‌ಯಾತ್ರೆಯನ್ನು ನಗರದ ಡೇರಿ ವೃತ್ತದಲ್ಲಿ ಸ್ವಾಗತಿಸಿದ ಕಾಂಗ್ರೆಸ್ ಕಾರ್ಯಕರ್ತರು, ಅಲ್ಲಿಂದ ಬೈಕ್ ರ‌್ಯಾಲಿ ಮೂಲಕ ವೇದಿಕೆ ಕಾರ್ಯಕ್ರಮ ಆಯೋಜನೆಗೊಂಡಿದ್ದ ದೊಡ್ಡಮಂಡಿಗನಹಳ್ಳಿವರೆಗೆ ಮೆರವಣಿಗೆ ಮೂಲಕ ಕರೆತಂದರು. ವಿವಿಧ ಕಲಾತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು. ವಿವಿಧ ಕ್ಷೇತ್ರಗಳ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ತಮ್ಮ ಅಭಿಮಾನಿಗಳೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net