

ಹಾಸನ: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ರಾಜ್ಯದ 28 ಸ್ಥಾನಗಳಲ್ಲಿಯೂ ಗೆಲ್ಲುತ್ತದೆ. ನನ್ನನ್ನು ತಾರಾ ಪ್ರಚಾರಕರ ಪಟ್ಟಿಗೆ ಸೇರಿಸಿದ್ದು ಅವಶ್ಯ ಇರುವ ಕಡೆ ತೆರಳಿ ಪ್ರಚಾರ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು.
ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾರ್ಯಕರ್ತರು ಮತ್ತು ಮುಖಂಡರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು. ಆ ನಿಟ್ಟಿನಲ್ಲಿ ನಾನು ಅವಶ್ಯಕತೆ ಇದ್ದರೆ ಬಿಜೆಪಿ ಅಭ್ಯರ್ಥಿಗಳಾದ ಬಿ.ವೈ.ರಾಘವೇಂದ್ರ, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ ಸೇರಿದಂತೆ ನಮ್ಮ ಪಕ್ಷದ ಅಭ್ಯರ್ಥಿಗಳು ಹಾಗೂ ಅವಶ್ಯಕತೆ ಇದ್ದರೆ ಉಳಿದ ಅಭ್ಯರ್ಥಿಗಳ ಕಡೆಯೂ ಕೂಡ ಪ್ರಚಾರ ಮಾಡುತ್ತೇನೆ ಎಂದರು.
ದಲಿತ ಮುಖಂಡರು ಮತ್ತು ಕಾರ್ಯಕರ್ತರು ಹಾಗೂ ಮತದಾರರು ಯಾವುದೇ ರೀತಿ ಅಪಪ್ರಚಾರಗಳಿಗೆ ಕಿವಿಗೊಡದೆ ನನ್ನ ಮೊಮ್ಮಗನನ್ನ ಗೆಲ್ಲಿಸಿಕೊಡಬೇಕು. ನನ್ನ ಅವಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಹಾಗೂ ಮುಸ್ಲಿಂ ಬಾಂಧವರಿಗೆ ಮೀಸಲಾತಿಯನ್ನು ತಂದು ಕೊಟ್ಟಿದ್ದು ಈ ದೇವೇಗೌಡ. ಆದರೆ ಕಾಂಗ್ರೆಸ್ ಪಕ್ಷ ಕೇವಲ ವೋಟಿಗಾಗಿ ನಿಮ್ಮನ್ನ ಬಳಸಿಕೊಳ್ಳುತ್ತಾರೆ. ನಿಮಗೆ ಯಾವುದೇ ಅಧಿಕಾರ ಮತ್ತು ಸೌಲಭ್ಯಗಳನ್ನ ಕಲ್ಪಿಸಿ ಕೊಡುವುದಿಲ್ಲ ಎಂದು ಹೇಳಿದರು
ನನ್ನ ರಾಜಕೀಯದ ಜೀವನದ 60 ವರ್ಷದ ಸುದೀರ್ಘ ರಾಜಕಾರಣದಲ್ಲಿ ಹಲವರು ನಾನಾ ರೀತಿ ಮಾತನಾಡಿದ್ದಾರೆ. ದಲಿತ ಸಮುದಾಯಕ್ಕೆ ಇನ್ನು ಶಕ್ತಿ ನೀಡುವ ಕೆಲಸವಾಗಿಲ್ಲ. ಅವರ ಪರಿಸ್ಥಿತಿ ಮತ್ತು ಅವರು ಬದುಕುತ್ತಿರುವ ಕಷ್ಟವನ್ನ ನೋಡಿದರೆ ನಿಜಕ್ಕೂ ನೋವು ಉಂಟಾಗುತ್ತದೆ ಎಂದು ಹೇಳಿದರು.
ನನಗೆ ಈಗ 91 ವರ್ಷ, ನನ್ನ ಕಾಲ ಮುಗಿಯಿತು. ನಾನು ಎಷ್ಟು ದಿನ ಬದುಕಿರುತ್ತೆನೋ ಗೊತ್ತಿಲ್ಲ. ಆದರೆ ನನ್ನ ಮೊಮ್ಮಗನನ್ನ ಗೆಲ್ಲಿಸಿ ಕೊಡಿ ಯಾವುದೇ ರೀತಿ ಅಪಪ್ರಚಾರಗಳಿಗೆ ಕಿವಿಗೊಡಬೇಡಿ ಮತ್ತು ನಮ್ಮ ಅಭಿವೃದ್ಧಿ ಕಾರ್ಯಗಳು ನಾವು ಮಾಡಿರುವಂತಹ ಕೆಲಸ ಕಾರ್ಯಗಳನ್ನು ಜನರು ಮರೆಯಬಾರದೆಂದು ಹೇಳಿದರು.
ನಾನು ಲೋಕಸಭೆಗೆ ಹಾಸನದಿಂದ ನಿಲ್ಲುವುದಿಲ್ಲ ಎಂದು ಕಳೆದ ಬಾರಿ ಹೇಳಿದ್ದೆ. ಆ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ಮುಖಂಡರು ್ಾಸಕರನ್ನ ಕರೆದು ಸಭೆ ಮಾಡಿ ಆಗ ಯಾರಾದರೂ ಮುಖಂಡರು ಲೋಕಸಭೆಗೆ ನಿಲ್ಲುವುದಾದರೆ ನಿಲ್ಲಿ ನನ್ನದೇನು ಅಭ್ಯಂತರವಿಲ್ಲ ಎಂದು ಎಲ್ಲರನ್ನ ಕೇಳಿದ್ದೆ. ಆಗ ಎ.ಟಿ. ರಾಮಸ್ವಾಮಿ, ಕೆ.ಎಂ.ಶಿವಲಿಂಗೇಗೌಡ, ದಿ. ಎಚ್.ಎಸ್. ಪ್ರಕಾಶ್ ಹಾಗೂ ಶಾಸಕ ಮಿತ್ರರು ಯಾರು ಕೂಡ ನಾವು ನಿಲ್ಲುವುದಿಲ್ಲ ಎಂದರು. ನಂತರ ಪ್ರಜ್ವಲ್ ರೇವಣ್ಣ ಅವರನ್ನ ಚುನಾವಣೆಗೆ ಕರೆತರಬೇಕಾಯಿತು ಎಂದು ಇತಿಹಾಸ ಸ್ಮರಿಸಿದರು.
ಕಾಂಗ್ರೆಸ್‌ನವರು ಅಂಬೇಡ್ಕರ್ ಹೆಸರೇಳಿ ರಾಜಕಾರಣ ಮಾಡಿದ್ದಾರೆ. ಆದರೆ ಅಂಬೇಡ್ಕರ್ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಿದರು. ಅಲ್ಲದೆ ಅವರಿಗೆ ಸಾಕಷ್ಟು ತೊಂದರೆಗಳನ್ನು ನೀಡಿದರು. ಇದರಿಂದ ಬೇಸತ್ತ ಅವರು ಬೌದ್ಧ ಧರ್ಮವನ್ನು ಸ್ವೀಕರಿಸಬೇಕಾಯಿತು. ಅಲ್ಲದೆ ಕಾಂಗ್ರೆಸ್‌ನಿಂದ ದಲಿತ ಸಮುದಾಯದ ಯಾವೊಬ್ಬ ನಾಯಕರನ್ನ ಮುಖ್ಯಮಂತ್ರಿ ಮಾಡಿದ್ದಾರೆ ಎಂಬುದನ್ನು ತಿಳಿಸಲಿ ಎಂದು ಸವಾಲೆಸೆದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಮಾಡುವಾಗ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು ನನ್ನ ಮನೆಗೆ ಆಗಮಿಸಿ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡುತ್ತೇವೆ ನಾವು ಬೆಂಬಲ ಕೊಡುತ್ತೇವೆ ಎಂದು ಹೇಳಿದರು. ನಾನು ಕಾಂಗ್ರೆಸ್‌ನ ಹಿರಿಯ ನಾಯಕ ದಲಿತ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಿ ನಾವೇ ಬೆಂಬಲ ಕೊಡುತ್ತೇವೆ ಎಂದು ಹೇಳಿದರೂ ಅವರು ಯಾರು ಕೂಡ ಒಪ್ಪಲಿಲ್ಲ. ನಂತರ ಸರ್ಕಾರ ರಚನೆ ಮಾಡಿ ನಮ್ಮ ಪಕ್ಷವನ್ನ ತೆಗೆದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಬರುವಾಗ ಬರಿ ಕೈನಲ್ಲಿ ಬಂದೆ ಹೋಗುವಾಗಲೂ ಕೂಡ ಬರಿ ಕೈಯಲ್ಲಿ ಹೋಗುತ್ತೇನೆ. ನನಗೆ ಯಾವುದೇ ಆಸೆಗಳಿಲ್ಲ. ನಾನು ಅಧಿಕಾರದ ಅನುಭವಿಸಿದ್ದೇನೆ. ನಮ್ಮ ಪಕ್ಷ ಈಗ ಸಂಕಷ್ಟದಲ್ಲಿದೆ. ಮತ್ತೆ ಕಾಲ ಬರುತ್ತದೆ, ನೀವೆಲ್ಲರೂ ನಮಗೆ ಶಕ್ತಿ ನೀಡಬೇಕು ರಾಜ್ಯದ ಅಭಿವೃದ್ಧಿ ಮತ್ತು ಜಿಲ್ಲೆಯ ಅಭಿವೃದ್ಧಿಯನ್ನ ನಾವು ಎಂದೂ ಕೂಡ ಕಡೆಗಣಿಸುವುದಿಲ್ಲ ಎಂದು ಹೇಳಿದರು.
ಕೆಎಂಶಿ ಸೋಲಿಸುವ ಶಪಥ:
ಅರಸೀಕೆರೆಯ ಮಹಾನ್ ನಾಯಕರು ಈಗ ಬೆಳೆದಿದ್ದಾರೆ. ನಮ್ಮ ಬಗ್ಗೆ ಮಾತನಾಡುತ್ತಿದ್ದಾರೆ ಅವರನ್ನ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಿಯೇ ಸೋಲಿಸುತ್ತೇನೆ. ಇದು ಶತಸಿದ್ಧ ಎಂದು ಶಿವಲಿಂಗೇಗೌಡರ ವಿರುದ್ಧ ದೇವೇಗೌಡರು ವಾಗ್ದಾಳಿ ನಡೆಸಿದರು.
ನಮ್ಮ ಜೊತೆ ಇದ್ದು ಶಾಸಕರಾಗಿ ಈಗ ಕಾಂಗ್ರೆಸ್ಸಿಗೆ ತೆರಳಿರುವ ಅರಸೀಕೆರೆಯ ಮಹಾನ್ ನಾಯಕರು ಗೊರೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಜೊತೆ ಪ್ರಚಾರ ವೇಳೆ ಮಾತನಾಡುತ್ತಿರುವುದನ್ನು ನಾನು ಕೇಳಿಸಕೊಂಡಿದ್ದೇನೆ. ಪ್ರಜ್ವಲ್ ರೇವಣ್ಣ ದಲಿತರ ಮೇಲೆ ದೌರ್ಜನ್ಯ ಮಾಡುತ್ತಿದ್ದು ಅದನ್ನು ಮಟ್ಟ ಹಾಕಬೇಕು ಎಂದು ಹೇಳುತ್ತಿದ್ದಾರೆ. ನಾನು ಬದುಕಿರುತ್ತೇನೆ ಮುಂದಿನ ಬಾರಿ ಅರಸೀಕೆರೆಯಲ್ಲಿ ಎನ್.ಆರ್.ಸಂತೋಷ್ ಎಂಎಲ್‌ಎ ಆಗುವುದನ್ನ ನೋಡುತ್ತೇನೆ ಎಂದು ಗುಡುಗಿದರು.
ಇವರು ಭಾಷಣ ಮಾಡುವ ಸಂದರ್ಭದಲ್ಲಿ ನಾನು ರಾಜ್ಯಸಭಾ ಸದಸ್ಯರಾಗಿ ಮಾಡಿದಂತಹ ವ್ಯಕ್ತಿಯು ಕೂಡ ಇವರ ಜೊತೆ ಇದ್ದರು ದೇವೇಗೌಡ, ಕುಮಾರಸ್ವಾಮಿ, ರೇವಣ್ಣ ಅವರು ಮಾಡಿದಂತಹ ಕೆಲಸ ಕಾರ್ಯಗಳನ್ನು ಇಟ್ಟುಕೊಂಡು ರಾಜಕಾರಣ ಆರಂಭಿಸಿದರು. ರೇವಣ್ಣ ಬೆಳೆಸಿದ ವ್ಯಕ್ತಿ ಇಂದು ನಮ್ಮ ಬಗ್ಗೆಯೇ ಮಾತನಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈಗ ನಮ್ಮ ಬಗ್ಗೆ ಮಾತನಾಡುವವರಿಗೆ ನಂಜು ಬಂದಿದೆ. ನನಗೆ ಮಂಡಿ ನೋವು ಇರಬಹುದು, ಆದರೆ ತಲೆನೋವು ಇಲ್ಲ. ಜಿಲ್ಲೆಯಲ್ಲಿ ಏನೆಲ್ಲ ಬೆಳವಣಿಗೆ ಆಗಿದೆ ಎಂಬುದನ್ನ ಮುಂದಿನ ಬಾರಿ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.
ಜೀವನದ ಮೊದಲ ಅಧ್ಯಾಯ:
ನಾನು 24ನೇ ವರ್ಷದಲ್ಲಿ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದೆ. ಆಗಲೇ ನಮ್ಮೂರಿನ ಹರದನಹಳ್ಳಿಯ ಪಾಪಯ್ಯ ಅವರಿಗೆ ಗೌಡರಿಂದ ಅನ್ಯಾಯವಾಗಿತ್ತು. ಅದನ್ನ ಸರಿಪಡಿಸುವ ಮೂಲಕ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟಿದ್ದೇನೆ. ಹಳ್ಳಿಗಳ ಕಡೆ ತೆರಳಿ ಪರಿಶಿಷ್ಟ ಸಮುದಾಯದ ಸ್ಥಿತಿಗತಿ ತುಲನೆ ಮಾಡಿ ನೊಡಿದ್ದಾಗ ಮಾತ್ರ ವಾಸ್ತವಾಂಶ ಗೊತ್ತಾಗುತ್ತದೆ. ಅವರು ಅನುಭವಿಸುತ್ತಿರುವ ಬಡತನ ನೊವು ತಿಳಿಯುತ್ತದೆ ಎಂದರು.
ನಮ್ಮೂರಿನಲ್ಲಿ ಪ್ರತಿ ಭಾನುವಾರ ಪಂಚಾಯತಿ ಶನಿವಾರ 4 ಗಂಟೆ ಸಮಯದಲ್ಲಿ ಜನ ಸೇರಿರುವುದನ್ನು ಗಮನಿಸಿ ನಾನು ನೋಡಿದ್ದಾಗ ಆತನ ಜಮೀನು ಶುದ್ಧ ಕ್ರಯ ಮಾಡಲಾಯಿತು. ಬರೆಯಿಸಿಕೊಂಡ ಗೌಡ ತಿರಿಹೋದ ನಂತರ ಅತನಿಗೆ ಮಕ್ಕಳು ಇರಲಿಲ್ಲ ಆ ತಮ್ಮನ್ನು ಮಕ್ಕಳು 5 ಜನ ಅವರನ್ನು ಸಾಕಿಕೊಂಡಿದ್ದರು.ನಾನು ಆ ಗೌಡರಿಗೆ ನಿವು ತಿರಿಹೊದ ಮೇಲೆ ನಿಮ್ಮ ತಮ್ಮನ್ನ ಮಕ್ಕಳು ಪಾಪಯ್ಯನಿಗೆ ಜಮೀನು ವಾಪಸು ಬರೆದುಕೊಡುತ್ತಿರಾ ಎಂದು ಗೌಡನಿಗೆ ಪ್ರಶ್ನೆ ಮಾಡಿ ಬರೆದಿರುವ ಕಾಗದ ಹರಿದು ಹಾಕಿ 28 ಗುಂಟೆ ಜಮೀನನ್ನು ಹಣ ನೀಡಿ 1000 ರುಪಾಯಿ ನೀಡಿ ಬರೆಯಿಸಿದೆ. 1000 ರುಪಾಯಿ ಹಣದಲ್ಲಿ 3 ಎಕರೆ ಜಮೀನನ್ನು ಬೋಗ್ಯದಿಂದ ಬಿಡುಗಡೆ ಮಾಡಿ ಪಾಪಯ್ಯನ ಮಕ್ಕಳಿಗೆ ಬರೆಯಿಸಿ ಒಂದು ಜೊತೆ ಎತ್ತುಗಳನ್ನು ತೆಗೆದುಕೊಟ್ಟೆ ಎಂದರು.