

ರಾಮನಗರ: ರಾಜ್ಯದ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮೇಕೆದಾಟು ಪಾದಯಾತ್ರೆ ಮೂಲಕ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಯತ್ನ ಮಾಡಿರುವುದು ಬಯಲಾಗಿದೆ.
ಪಾದಯಾತ್ರೆ ಡಿ.ಕೆ.ಶಿವಕುಮಾರ್ ಅವರ ಪ್ರತಿಷ್ಠೆಯ ವಿಷಯ. ಒಂದೆಡೆ ಯೋಜನೆ ಜಾರಿಗೆ ಆಗ್ರಹಿಸುವ ಉದ್ದೇಶವಿದ್ದರೂ, ಪಾದಯಾತ್ರೆ ಸಾಗುವ ಮಾರ್ಗವನ್ನು ಆಯ್ಕೆ ಮಾಡಿಕೊಂಡಿರುವುದರ ಹಿಂದೆ ಜೆಡಿಎಸ್ ಭದ್ರಕೋಟೆಯನ್ನು ಅಲುಗಾಡಿಸುವ ಯೋಜನೆ ಇರುವುದು ಖಾತ್ರಿ ಆಗಿದೆ.
ಹಾರೋಹಳ್ಳಿ ಮಾರ್ಗವೇ ಹತ್ತಿರವಿತ್ತು
ಮೇಕೆದಾಟಿನಿಂದ ಕನಕಪುರ-ರಾಮನಗರ-ಬಿಡದಿ, ನಾಯಂಡಹಳ್ಳಿ-ಸಾರಕ್ಕಿ-ಮಾರತ್ತಹಳ್ಳಿ ಮೂಲಕ ಸಾಗಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಪಾದಯಾತ್ರೆ ಸಮಾವೇಶಗೊಳ್ಳಲಿದೆ. ಇದಕ್ಕಾಗಿ 11 ದಿನ ಪಾದಯಾತ್ರೆ ಸಾಗಲಿದೆ. ಆದರೆ ಡಿ.ಕೆ.ಶಿವಕುಮಾರ್ ಕನಕಪುರದಿಂದ ಹಾರೋಹಳ್ಳಿ ಮಾರ್ಗವಾಗಿ ಸಾರಕ್ಕಿ ತಲುಪಿ ಅಲ್ಲಿಂದ ಪಾದಯಾತ್ರೆ ಮುಂದುವರಿಸಬಹುದಿತ್ತು. ಆದರೆ, ಈ ಮಾರ್ಗದಲ್ಲಿ ಸಾಗಿದರೆ ಜೆಡಿಎಸ್ ಭದ್ರಕೋಟೆಗೆ ಲಗ್ಗೆ ಇಡಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕಾಗಿಯೇ ರಾಮನಗರ-ಬಿಡದಿ ಮಾರ್ಗ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುವ ಮಾತುಗಳು ಕಾಂಗ್ರೆಸ್ ವಲಯದಲ್ಲಿಯೇ ಕೇಳಿ ಬಂದಿವೆ. ಕನಕಪುರದಿಂದ ರಾಮನಗರ ಮಾರ್ಗವಾಗಿ ಸಾರಕ್ಕಿ ಸಿಗ್ನಲ್‌ವರಗೆ ತಲುಪಲು ಸುಮಾರು 72 ಕಿಮೀ ಆಗಲಿದೆ. ಆದರೆ, ಕನಕಪುರದಿಂದ ಹಾರೋಹಳ್ಳಿ ಮಾರ್ಗವಾಗಿ ಸಾಗಿದರೆ 46 ಕಿ.ಮೀ. ಸಾಗಿ ತಲುಪಬಹುದಾಗಿತ್ತು.
ಕೋಟೆಗೆ ಪ್ರವೇಶ
ರಾಜಕೀಯದಲ್ಲಿ ಯಾರೂ ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ ಎನ್ನುವುದು ಡಿ.ಕೆ.ಶಿವಕುಮಾರ್ ಮತ್ತು ಎಚ್‌ಡಿ ಕುಮಾರಸ್ವಾಮಿ ಅವರ ಜೋಡಿ ಮತ್ತೊಮ್ಮೆ ಸಾಬೀತುಪಡಿಸಿದೆ. ಸಮ್ಮಿಶ್ರ ಸರ್ಕಾರದ ವೇಳೆಯಲ್ಲಿ ಜೋಡೆತ್ತುಗಳಾಗಿದ್ದ ಇವರು ಈಗ ಮತ್ತೆ ಬದ್ಧ ವೈರಿಗಳಾಗಿದ್ದಾರೆ. ಈ ನಡುವೆ ಪಾದಯಾತ್ರೆಯನ್ನು ಎಚ್‌ಡಿಕೆ ಟೀಕಿಸುತ್ತಲೇ ಬಂದಿದ್ದು, ಇದಕ್ಕೆ ಸೆಡ್ಡು ಹೊಡೆದವರಂತೆ ಸಾವಿರಾರು ಕಾರ್ಯಕರ್ತರ ಪಡೆಯೊಂದಿಗೆ ರಾಮನಗರಕ್ಕೆ ಪ್ರವೇಶ ಪಡೆಯುವ ಮೂಲಕ ಎಚ್‌ಡಿಕೆಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ ಎಂದರೂ ತಪ್ಪಾಗಲಾರದು. ಇದು ಮುಂಬರುವ ಜಿಪಂ ಮತ್ತು ತಾಪಂ ಚುನಾವಣೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಡಿಕೆಶಿ ಸ್ಪರ್ಧೆ ಮತ್ತೆ ಮುನ್ನೆಲೆಗೆ?
ಈ ನಡುವೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ರಾಮನಗರ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವ ಮಾತುಗಳು ಹಲವು ದಿನಗಳಿಂದಲೂ ಕೇಳಿ ಬರುತ್ತಲೇ ಇವೆ. ಪಾದಯಾತ್ರೆ ಸಂದರ್ಭದಲ್ಲಿಯೂ ಇದೇ ಮಾತು ಮತ್ತೆ ಮುನ್ನೆಲೆಗೆ ಬಂದಿದೆ. ಕೆಂಗಲ್ ಹನುಮಂತಯ್ಯ, ಎಚ್.ಡಿ.ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ಅವರು ರಾಮನಗರದಿಂದಲೇ ಸ್ಪರ್ಧಿಸಿ ಗೆಲುವು ಸಾಧಿಸಿ ಮುಖ್ಯಮಂತ್ರಿಗಳಾಗಿದ್ದಾರೆ. ಅದೃಷ್ಟದ ಕ್ಷೇತ್ರವಾಗಿರುವ ರಾಮನಗರದಿಂದ ಸ್ಪರ್ಧೆ ಮಾಡಿದರೆ ಖಂಡಿತವಾಗಿ ಮುಖ್ಯಮಂತ್ರಿ ಆಗುವ ಅವಕಾಶ ಇದೆ ಎಂದು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾರೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿಯೇ ಡಿಕೆಶಿ ರಾಮನಗರದಿಂದ ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿ ಮತ್ತೆ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಶಕ್ತಿ ಪ್ರದರ್ಶನ ಮಾಡಲು ಡಿ.ಕೆ.ಶಿವಕುಮಾರ್ ಅವರು ಪಾದಯಾತ್ರೆ ರಾಮನಗರ ಮಾರ್ಗವಾಗಿ ಸಾಗುವಂತೆ ಯೋಜನೆ ಮಾಡಿಕೊಂಡು ಹೊರಟಿದ್ದಾರೆ ಎನ್ನಲಾಗುತ್ತಿದೆ.