

ಅರಕಲಗೂಡು: ಮಾಜಿ ಸಚಿವ ಎ. ಮಂಜು ಜೆಡಿಎಸ್ ಸೇರ್ಪಡೆಯಾದ ನಂತರ ಮಾ.16ರಂದು ಪಟ್ಟಣದಲ್ಲಿ ಪಂಚರತ್ನ ರಥಯಾತ್ರೆ ಪ್ರಯುಕ್ತ ಹಮ್ಮಿಕೊಂಡಿರುವ ಬೃಹತ್ ಸಮಾವೇಶ ರಾಜಕೀಯ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಲಿದೆ.
ಕಾಂಗ್ರೆಸ್ ಮತ್ತು ಬಿಜೆಪಿಯಿಂದ ದೂರ ಉಳಿದಿದ್ದ ಎ. ಮಂಜು ಅವರಿಗೆ ಚುನಾವಣೆ ಹೊಸ್ತಿಲಲ್ಲಿ ಜೆಡಿಎಸ್ ಶ್ರೀರಕ್ಷೆಯಾಗಿದ್ದು, ಈಗಾಗಲೇ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಸಮ್ಮುಖದಲ್ಲಿ ಪಕ್ಷ ಸೇರಿದ್ದಾರೆ. ಜೆಡಿಎಸ್ ಸೇರಿದ ನಂತರ ಮೊದಲ ಬಾರಿಗೆ ನಡೆಯುತ್ತಿರುವ ಪಕ್ಷದ ಸಮಾವೇಶ ಯಶಸ್ವಿಗೊಳಿಸಲು ಸ್ವತಃ ಎ. ಮಂಜು ಅವರು ಕಾರ್ಯಕರ್ತರು ಹಾಗೂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಕ್ತಿಮೀರಿ ಶ್ರಮಿಸುತ್ತಿದ್ದಾರೆ.
ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿದ್ದ ಕೆಲವು ಮುಖಂಡರು ಎ. ಮಂಜು ಅವರಿಗೆ ಸಾಥ್ ನೀಡಿದ್ದಾರೆ. ಎ. ಮಂಜು ಅವರು ಪ್ರಮುಖ ಹೋಬಳಿ ಕೇಂದ್ರಗಳಲ್ಲಿ ಆಯಾ ಹೋಬಳಿ ಮಟ್ಟದ ಸಭೆ ಕರೆದು ಕಾರ್ಯಕರ್ತರನ್ನು ಸಂಘಟಿಸಿ ಸಮಾವೇಶಕ್ಕೆ ಕರೆತರಲು ಅಗತ್ಯ ತಯಾರಿ ನಡೆಸಿದ್ದಾರೆ. ಖುದ್ದು ಹಳ್ಳಿ ಹಳ್ಳಿಗೆ ತೆರಳಿ ಮತದಾರರ ಬೆಂಬಲ ಕೋರಿದ್ದಾರೆ.
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಳ್ಳಿಮೈಸೂರು ಹೋಬಳಿ ಶ್ರವಣೂರಿನಿಂದ ಆರಂಭವಾಗುವ ಪಂಚರತ್ನ ರಥಯಾತ್ರೆ ಹಳ್ಳಿಮೈಸೂರು, ಕೇರಳಾಪುರ, ಬಸವಾಪಟ್ಟಣ, ಕೊಣನೂರು ಮಾರ್ಗವಾಗಿ ಅರಕಲಗೂಡು ಪಟ್ಟಣಕ್ಕೆ ಆಗಮಿಸಲಿದೆ. ರಥಯಾತ್ರೆ ಸಂಚರಿಸುವ ಮಾರ್ಗದಲ್ಲಿ ಕಾರ್ಯಕರ್ತರು ಎಚ್.ಡಿ. ಕುಮಾರಸ್ವಾಮಿಗೆ ಅದ್ದೂರಿ ಸ್ವಾಗತ ಕೋರುವ ಮೂಲಕ ಶ್ರವಣೂರಿನಲ್ಲಿ ಕಂಬಳಿ ಹಾರ, ಕೇರಳಾಪುರದಲ್ಲಿ ಬೃಹತ್ ಹೂವಿನ ಹಾರ, ರಾಮನಾಥಪುರದಲ್ಲಿ ಹೊಗೆಸೊಪ್ಪು ಹಾರ, ಕೊಣನೂರಿನಲಿ ಅಡಕೆ ಹಾರ, ಮಲ್ಲಿಪಟ್ಟಣದಲ್ಲಿ ಅತೀ ಉದ್ದದ ಕಾಳುಮೆಣಸು ಹಾರ ಹಾಗೂ ಪಟ್ಟಣದಲ್ಲಿ ಆಲೂಗಡ್ಡೆ ಹಾರ ಹಾಕಿ ಅಭಿಮಾನ ಮೆರೆಯಲು ಸಜ್ಜುಗೊಂಡಿದ್ದಾರೆ.
ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪೂರ್, ಎಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಮುಂತಾದ ಪ್ರಮುಖರು ಭಾಗವಹಿಸಲಿದ್ದಾರೆ. ಪಟ್ಟಣದಲ್ಲಿ ಸಮಾವೇಶ ಮುಗಿದ ನಂತರ ಎಚ್.ಡಿ. ಕುಮಾರಸ್ವಾಮಿ ಅವರು ಗುರುವಾರ ಸಂಜೆ ಹುಲಿಕಲ್ ಗ್ರಾಮದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಜನರೊಂದಿಗೆ ಚರ್ಚೆ ನಡೆಸಿ ಕಾರ್ಯಕರ್ತರ ಆಹವಾಲು ಆಲಿಸುವರು. ಮಾ. 17ರಂದು ಬೆಳಗ್ಗೆ ಮಲ್ಲಿಪಟ್ಟಣ ಮಾರ್ಗವಾಗಿ ರಥಯಾತ್ರೆ ಸಕಲೇಶಪುರ ತಾಲೂಕಿಗೆ ತೆರಳಲಿದೆ.