ಜೆಡಿಎಸ್-ಬಿಜೆಪಿಗೆ ನಾನೇ ಟಾರ್ಗೆಟ್: ಸಿದ್ದರಾಮಯ್ಯ

chamundeshwari_ congrace_ Siddaramaiah EX CM
Published on

ಎಲ್ಲರಿಗೂ ನಾನೇ ಟಾರ್ಗೆಟ್. ನನ್ನ ಮೇಲಿನ ಭಯಕ್ಕೆ ಬಿಜೆಪಿ, ಜೆಡಿಎಸ್ ಸೇರಿಕೊಂಡು ನನ್ನನ್ನು ರಾಜಕೀಯವಾಗಿ ಮುಗಿಸಲು ಹೊರಟಿದ್ದಾರೆ. ಆದರೆ, ರಾಜ್ಯದ ಜನರ ಆಶೀರ್ವಾದ ಇರುವವರೆಗೆ ಯಾರಿಂದಲೂ ನನ್ನನ್ನು ಮುಗಿಸಲು ಸಾಧ್ಯವಿಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದರು.

ಕೇರ್ಗಳ್ಳಿ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಚಾಮುಂಡೇಶ್ವರಿ ಕ್ಷೇತ್ರ ಚುನಾವಣಾ ಪೂರ್ವ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ನನ್ನನ್ನು ರಾಜಕೀಯವಾಗಿ ಮುಗಿಸಲು ಹೊರಟಿದ್ದಾರೆ. ಇವರಿಗೆ ನಾನು ಮಾಡಿರುವ ಅನ್ಯಾಯವಾದರೂ ಏನು ಎಂದು ಪ್ರಶ್ನಿಸಿದರು.

ಬಿಜೆಪಿಯವರು ವರುಣ ಕ್ಷೇತ್ರಕ್ಕೆ ಬೆಂಗಳೂರಿನಿಂದ ಕರೆದುಕೊಂಡು ಬಂದು ನನ್ನ ವಿರುದ್ಧ ನಿಲ್ಲಿಸಿದ್ದಾರೆ. ನನಗೆ ಅವರ ಸ್ಪರ್ಧೆ ಬಗ್ಗೆ ಯಾವ ತಕರಾರು ಇಲ್ಲ. ತೀರ್ಮಾನ ಮಾಡುವುದು ಜನ. ನನಗೆ ವರುಣ ಜನರ ಬೆಂಬಲ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್‌ಗೆ ಬಹುಮತ ಸಿಗುತ್ತಾ?
ಕುಮಾರಸ್ವಾಮಿ ಎಷ್ಟೇ ಪಂಚರತ್ನ ಯಾತ್ರೆ ಮಾಡಿದರೂ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲ್ಲ. ಇನ್ನೊಬ್ಬರ ಹೆಗಲ ಮೇಲೆ ಕೂತುಕೊಂಡು ಅಧಿಕಾರ ಮಾಡಬೇಕು ಎಂದು ಬಯಸುವವರು ಅವರು. ಈ ಸಲ 20ರಿಂದ 22 ಗೆಲ್ಲಬಹುದು. ಹೇಗೆ ಸರ್ಕಾರ ಮಾಡ್ತಾರೆ? ಪಂಚರತ್ನ ಮಾಡಿದ ಕೂಡಲೇ ಬಹುಮತ ಸಿಗುತ್ತಾ? ಎಂದು ವ್ಯಂಗ್ಯವಾಡಿದರು.
ಜೆಡಿಎಸ್‌ನವರಿಗೆ ಯಾವ ಪಕ್ಷವೂ ಪೂರ್ಣ ಬಹುಮತ ಪಡೆಯಬಾರದೆಂಬ ಆಸೆ ಒಳಗಿದೆ. ಆಗ ಕುಮಾರಸ್ವಾಮಿ, ‘ನನಗೆ ಮುಖ್ಯಮಂತ್ರಿ ಸ್ಥಾನ ಕೊಟ್ಟರೆ ನಿಮ್ಮ ಜತೆ ಬರುತ್ತೇನೆ’ ಎಂದು ಷರತ್ತು ಹಾಕುತ್ತಾರೆ ಎಂದು ಕುಟುಕಿದರು.

ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ನಡುವೆ ವೈಮನಸ್ಸು ಇದೆ. ಬೊಮ್ಮಾಯಿ ಒಂದು ತಿಂಗಳು ಬಿಎಸ್‌ವೈ ಜತೆ ಚೆನ್ನಾಗಿದ್ದರು. ನಂತರ ಇಬ್ಬರ ಮಧ್ಯೆ ವೈಮನಸ್ಸು ಶುರುವಾಗಿದೆ. ಬಿ.ವೈ.ವಿಜಯೇಂದ್ರನನ್ನು ಸಚಿವನಾಗಿ ಮಾಡಬೇಕಾಗುತ್ತದೆ ಎಂಬ ಕಾರಣಕ್ಕೆ ಸಚಿವ ಸಂಪುಟ ವಿಸ್ತರಣೆಯನ್ನೇ ಮಾಡಲಿಲ್ಲ. ಒಂದು ಮುಕ್ಕಾಲು ವರ್ಷ ಹಾಗೇ ಸರ್ಕಾರ ತಳ್ಳಿದರು ಎಂದರು.

ಕಾಂಗ್ರೆಸ್‌ಗೆ ಅಧಿಕಾರ ಖಚಿತ
ರಾಜ್ಯದಲ್ಲಿರುವ ವಾತಾವರಣ ನೋಡಿದರೆ ಕಾಂಗ್ರೆಸ್ ಶೇ.200ರಷ್ಟು ಅಧಿಕಾರಕ್ಕೆ ಬಂದೇ ಬರುತ್ತದೆ. ಈ ಬಾರಿ ನಾವು 4 ಪ್ರಮುಖ ಭರವಸೆ ನೀಡಿದ್ದೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿ ಕಾರ್ಡ್ ಅನ್ನು ನಾವು ನೂರಕ್ಕೆ ನೂರು ಜಾರಿ ಮಾಡುತ್ತೇವೆ. ಒಂದು ವೇಳೆ ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಆಗದಿದ್ದರೆ ನಿಮ್ಮ ಬಳಿ ಕ್ಷಮೆ ಕೇಳಿ ಅಧಿಕಾರದಿಂದ ಕೆಳಗಿಳಿಯುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಬಿಜೆಪಿಯವರು ರಾಜ್ಯವನ್ನು ಹಾಳು ಮಾಡಿದ್ದಾರೆ. ಸ್ವಾತಂತ್ರ್ಯ ನಂತರದಿಂದ 2018ರ ಮಾರ್ಚ್‌ವರೆಗೆ ಕರ್ನಾಟಕದ ಮೇಲಿದ್ದ ಒಟ್ಟು ಸಾಲ 2.42 ಲಕ್ಷ ಕೋಟಿ ರೂ.ಗಳು. ಕಳೆದ 5 ವರ್ಷದಲ್ಲಿ ರಾಜ್ಯದ ಸಾಲ 3.22 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ ಎಂದು ಆರೋಪಿಸಿದರು.

ಈ ಬಿಜೆಪಿಯ ದುರಾಡಳಿತದಿಂದಾಗಿ ಪ್ರತಿ ವರ್ಷ 56 ಸಾವಿರ ಕೋಟಿ ರೂ. ಸಾಲ ಮರುಪಾವತಿ ಮಾಡಬೇಕಾಗಿದೆ. ಈ ಸಾಲ ಹೀಗೆ ಮುಂದುವರಿದರೆ ಕುಡಿಯಲು ನೀರು, ಅಕ್ಕಿ, ಸೇತುವೆ, ರಸ್ತೆ, ಮನೆಗಳನ್ನು ಜನರಿಗೆ ಕೊಡಲು ಆಗುತ್ತದೆಯೇ? ಬಿಜೆಪಿ, ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರಬೇಕಾ? ರಾಜ್ಯ ಉಳಿದರೆ ತಾನೇ ನಾವು, ನೀವೆಲ್ಲ ಉಳಿಯೋದು ಎಂದು ಕಾರ್ಯಕರ್ತರಿಗೆ ಹೇಳಿದರು.

ಎಂಎಲ್‌ಸಿ ಡಾ.ಡಿ.ತಿಮ್ಮಯ್ಯ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net