ಜೆಡಿಎಸ್-ಬಿಜೆಪಿ ಮೈತ್ರಿ ಕಾಂಗ್ರೆಸ್‌ಗೆ ಲಾಭ: ಮಾಜಿ ಸಚಿವ ಬಿ. ಶಿವರಾಮ್

ಜೆಡಿಎಸ್-ಬಿಜೆಪಿ ಮೈತ್ರಿ ಕಾಂಗ್ರೆಸ್‌ಗೆ ಲಾಭ: ಮಾಜಿ ಸಚಿವ ಬಿ. ಶಿವರಾಮ್
Published on

ಹಾಸನ: ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಿಂದ ಮುಸ್ಲಿಂ ಸಮುದಾಯದ ಅನೇಕ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ ಎಂದು ಮಾಜಿ ಸಚಿವ ಬಿ. ಶಿವರಾಮ್ ಹೇಳಿದರು.

ನಗರದ ಬಿ.ಎಂ. ರಸ್ತೆ ಬಳಿ ಇರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಗರ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಕಾರ್ಯಕರ್ತರ ಸಭೆಯಲ್ಲಿ 20ಕ್ಕೂ ಹೆಚ್ಚು ಜನ ಮುಸ್ಲಿಂ ಸಮುದಾಯದ ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿ ಜೊತೆ ಹೊಂದಾಣಿಕೆ ಆದ ಮೇಲೆ ಇಲ್ಲಿಯವರೆಗೂ ಯಾರಿಂದ ರಾಜಕೀಯ ನೆಲೆಯನ್ನು ಕಂಡುಕೊಂಡಿದ್ದರೂ ಅದನ್ನು ಮರೆತು ಮಾತನಾಡಿರುವುದು ಗೊತ್ತಾಗುತ್ತದೆ ಎಂದರು.

ಅಲ್ಪಸಂಖ್ಯಾತರ ಮತದಿಂದಲೇ ಜೆಡಿಎಸ್ ಇಲ್ಲವೇ ಕಾಂಗ್ರೆಸ್ ಗೆಲುವು ಪಡೆಯುತಿತ್ತು. ಸಿದ್ದರಾಮಯ್ಯ ಇಂದು ಮುಖ್ಯಮಂತ್ರಿ ಆಗಿರುವುದು ಅಲ್ಪಸಂಖ್ಯಾತರ ಮತದಿಂದ. ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಅಲ್ಪಸಂಖ್ಯಾತರಿಗೆ ಅನೇಕ ಯೋಜನೆಗಳನ್ನು ಕೊಟ್ಟಿದ್ದರು. ಈಗ ಮುಖ್ಯಮಂತ್ರಿಯಾದಾಗಲೂ ಅದನ್ನು ಮುಂದುವರಿಸಿಕೊಂಡು ಹೋಗುವ ವಿಶ್ವಾಸ ಇದೆ ಎಂದು ಹೇಳಿದರು.

ಕೆಪಿಸಿಸಿ ಸದಸ್ಯ ಎಚ್.ಕೆ. ಮಹೇಶ್ ಮಾತನಾಡಿ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಅಲ್ಪಸಂಖ್ಯಾತರನ್ನು ಕಾಪಾಡುವುದು ಕಾಂಗ್ರೆಸ್. ಹಿಂದಿನ ಸರ್ಕಾರದಲ್ಲಿ ಅಲ್ಪಸಂಖ್ಯಾತರು ಯಾರಾದರೂ ಮಂತ್ರಿಗಳು ಇದ್ದರಾ? ಕಾಂಗ್ರೆಸ್ ಆಡಳಿತದಲ್ಲಿ ಅಲ್ಪಸಂಖ್ಯಾತರನ್ನು ಸಭಾಧ್ಯಕ್ಷರು, ಸಚಿವರನ್ನಾಗಿ ಮಾಡಲಾಗಿದೆ. ಕಳೆದ ಬಾರಿ ಅಲ್ಪಸಂಖ್ಯಾತರು ಜೆಡಿಎಸ್‌ಗೆ ಮತ ಹಾಕಿದಂತೆ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಹಾಕಿ ಗೆಲ್ಲಿಸುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಸರ್ದಾರ್ ಪಾಷ, ಕಾಂಗ್ರೆಸ್ ಮುಖಂಡರಾದ ತಾರಚಂದನ್, ಅಬ್ದುಲ್ ಆದಿ, ಕರೀಂ, ಕೆ.ಕೆ. ಖಾನ್, ಫರ್ಮಾನ್, ನವೀದ್ ಅಹಮದ್, ಸೂಫಿ ಇಬ್ರಾಹಿಂ, ಶಿವಕುಮಾರ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net