

ಹಾಸನ: ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ದೇವರಾಜೇಗೌಡ ಹಾಗೂ ಜೆಡಿಎಸ್- ಬಿಜೆಪಿ ನಾಯಕರು ವಿನಾಃಕಾರಣ ಕಾಂಗ್ರೆಸ್ ನಾಯಕರ ಮೇಲೆ ಆರೋಪ ಮಾಡುವ ಮೂಲಕ ನಮ್ಮ ನಾಯಕರ ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಪೆನ್‌ಡ್ರೈವ್ ಪ್ರಕರಣದ ಪ್ರಮುಖ ರೂವಾರಿ ದೇವರಾಜೇಗೌಡ ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ಗೊಂದಲದ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ. ದೇವರಾಜೇಗೌಡ ಜನರನ್ನು ಬ್ಲಾೃಕ್‌ಮೇಲ್ ಮಾಡಿ ವಂಚನೆ ಮಾಡಿಕೊಂಡು ಬಂದಿದ್ದಾನೆ. ಈಗ ಜಿಲ್ಲೆಯಲ್ಲಿ ನಾನೇ ದೊಡ್ಡ ನಾಯಕ ಎಂಬುದಾಗಿ ಬಿಂಬಿಸಿಕೊಳ್ಳಲು ಸುಳ್ಳಿನ ಸರಮಾಲೆಯನ್ನೇ ಸೃಷ್ಟಿಸಿ ಸಮಾಜದ ಸ್ವಾಸ್ಥೃ ಹಾಳು ಮಾಡುತ್ತಿದ್ದಾನೆ. ತಕ್ಷಣವೇ ಈತನ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡು ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ಸುದ್ದಿಗೋಷ್ಠಿಯಲ್ಲಿ ದೇವರಾಜೇಗೌಡ ‘ನನ್ನ ಹತ್ತಿರ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ವಿಡಿಯೋಗಳ ಪೆನ್ ಡ್ರೈವ್ ಇದೆ,’ ಎಂದು ಹೇಳಿಕೆ ನೀಡಿದ್ದ. ವಿಡಿಯೋಗಳ ಹಂಚಿಕೆಯ ಪ್ರಮುಖ ರೂವಾರಿ ದೇವರಾಜೇಗೌಡ. ಮೊದಲು ಈತನನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿ ತನಿಖೆಗೆ ಒಳಪಡಿಸಿ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಬೇಕು. ಬಂಧನದ ಭೀತಿಯಿಂದಾಗಿ ಈ ರೀತಿ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾನೆ. ಅಲ್ಲದೇ ಬಿಜೆಪಿ ಪಕ್ಷದವರು ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತಲೆಮರೆಸಿಕೊಂಡು ಹೋಗಲು ಪರೋಕ್ಷವಾಗಿ ಕಾರಣವಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಎಚ್.ಕೆ. ಮಹೇಶ್, ಬನವಾಸೆ ರಂಗಸ್ವಾಮಿ, ತಾರಾ ಚಂದನ್, ರಂಜಿತ್ ಗೊರೂರು ಸೇರಿದಂತೆ ಇನ್ನಿತರರು ಹಾಜರಿದ್ದರು.