

ಹಾಸನ: ಜೆಡಿಎಸ್-ಬಿಜೆಪಿ ಸದಸ್ಯರ ಪರಸ್ಪರ ಆರೋಪ, ಕೂಗಾಟಗಳ ನಡುವೆ ಗೊಂದಲದ ಗೂಡಾದ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣಾ ಸಭೆಯಲ್ಲಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಗುರುವಾರ ಪೂರ್ಣಗೊಂಡರೂ, ಉಪಾಧ್ಯಕ್ಷರ ಚುನಾವಣೆಯನ್ನು ದಿನಾಂಕ ನಿಗದಿ ಮಾಡದೆ ಚುನಾವಣಾಧಿಕಾರಿ ಬಿ.ಎ.ಜಗದೀಶ್ ಮುಂದೂಡಿದರು.
ಗುರುವಾರ ಮಧ್ಯಾಹ್ನ ಚುನಾವಣೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಜೆಡಿಎಸ್ ಸದಸ್ಯರ ಪರವಾಗಿ ಹಾಜರಾದ ವಕೀಲರಾದ ಎಸ್.ದ್ಯಾವೇಗೌಡ ಹಾಗೂ ಚನ್ನಂಗಿಹಳ್ಳಿ ಶ್ರೀಕಾಂತ್, ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವ ಮೋಹನ್, ಸುಳ್ಳು ಜಾತಿ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಅವರು ಪರಿಶಿಷ್ಟ ಪಂಗಡಕ್ಕೆ ಸೇರಿದವರಲ್ಲ ಆದ್ದರಿಂದ ಅವರ ನಾಮಪತ್ರ ತಿರಸ್ಕರಿಸಬೇಕು ಎಂದು ಮನವಿ ಸಲ್ಲಿಸಿದರು.
ನಂತರ ಪ್ರಕ್ರಿಯೆ ಮುಂದುವರಿಸಿದ ಚುನಾವಣಾಧಿಕಾರಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ 34ನೇ ವಾರ್ಡ್ ಸದಸ್ಯ ಮೋಹನ್ 2ಸೆಟ್ ನಾಮಪತ್ರ ಸಲ್ಲಿಸಿದ್ದು, ಅದನ್ನು ಅಂಗೀಕರಿಸಲಾಗಿದೆ ಎಂದು ಪ್ರಕಟಿಸಿದರು.
ನಂತರ ಉಪಾಧ್ಯಕ್ಷ ಸ್ಥಾನಕ್ಕೆ 29ನೇ ವಾರ್ಡ್ ಸದಸ್ಯೆ ಮಂಗಳಾ ಪ್ರದೀಪ್ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಜಗದೀಶ್ ತಿಳಿಸಿದಾಗ ಅದನ್ನು ನಿರೀಕ್ಷಿಸದ ಜೆಡಿಎಸ್ ಸದಸ್ಯರು ಗಲಿಬಿಲಿಗೊಳಗಾದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು, ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಹೋದಾಗ ಕಚೇರಿಯಲ್ಲಿ ಯಾರೂ ಇರಲಿಲ್ಲ. ದಯವಿಟ್ಟು ನಾಮಪತ್ರ ಸಲ್ಲಿಸಲು ಮತ್ತೊಮ್ಮೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಬಿ.ಎ.ಜಗದೀಶ್, ಬೆಳಗ್ಗೆ 9 ರಿಂದ 11.05 ರವರೆಗೂ ನಗರಸಭೆ ಕಚೇರಿಯಲ್ಲಿದ್ದೆ.ನಾಮಪತ್ರ ಸಲ್ಲಿಕೆಗೆ ಯಾರೂ ಬಂದಿಲ್ಲ ಎಂದು ಚುನಾವಣಾಧಿಕಾರಿ ಸ್ಪಷ್ಪಪಡಿಸಿದರು. ಒಂದು ಪಕ್ಷಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ ಎಂದು ಜೆಡಿಎಸ್ ಸದಸ್ಯರು ಆರೋಪಿಸಿ ಚುನಾವಣಾಧಿಕಾರಿ ವಿರುದ್ಧವೇ ಪ್ರತಿಭಟನೆ ನಡೆಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಸದಸ್ಯೆ ಯಾರ ಗಮನಕ್ಕೂ ಬಾರದಂತೆ ನಾಮಪತ್ರ ಸಲ್ಲಿಸಲು ಹೇಗೆ ಸಾಧ್ಯ? ನಿಮ್ಮ ನಡೆಯಿಂದ ಉಪಾಧ್ಯಕ್ಷ ಸ್ಥಾನ ಪಡೆಯಲು ಅರ್ಹರಾಗಿರುವ ಅಲ್ಪಸಂಖ್ಯಾತ ಸಮುದಾಯದ ಮಹಿಳಾ ಸದಸ್ಯೆಗೆ ಅನ್ಯಾಯವಾಗುತ್ತದೆ. ಬಿಜೆಪಿಯವರು ನಾಮಪತ್ರ ಸಲ್ಲಿಸಿರುವುದಕ್ಕೆ ವಿಡಿಯೋ ದಾಖಲೆ ನೀಡಿ ಎಂದು ಪಟ್ಟು ಹಿಡಿದರು. ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಎರಡೂ ಪಕ್ಷಗಳ ಸದಸ್ಯರು ಪರಸ್ಪರ ಆರೋಪ, ಪ್ರತ್ಯಾರೋಪದಲ್ಲಿ ತೊಡಗಿದರು.
ಕಡೆಗೆ 2ನೇ ಬಾರಿಗೆ ಆಕ್ಷೇಪಣಾ ಅರ್ಜಿ ಸಲ್ಲಿಸಿದ ಜೆಡಿಎಸ್ ಸದಸ್ಯರು, ಚುನಾವಣಾ ನೋಟಿಸ್‌ನ ಕೆಳಭಾಗದಲ್ಲಿ ಮಧ್ಯಾಹ್ನ 3 ಗಂಟೆವರೆಗೆ ಉಪಾಧ್ಯಕ್ಷ ಸ್ಥಾನಕ್ಕೆ ನಾಮತಪ್ರ ಸ್ವೀಕರಿಸುವುದಾಗಿ ತಿಳಿಸಲಾಗಿತ್ತು. ನೋಟಿಸ್‌ನಲ್ಲಿನ ಅಂಶಗಳು ಗೊಂದಲದಿಂದ ಕೂಡಿವೆ. ಹೀಗಾಗಿ ಉಪಾಧ್ಯಕ್ಷ ಸ್ಥಾನದ ಚುನಾವಣೆಯನ್ನು ಮುಂದೂಡಬೇಕು ಎಂದು ಮನವಿ ಸಲ್ಲಿಸಿದರು.
ಅದನ್ನು ಪರಿಶೀಲಿಸಿದ ಚುನಾವಣಾಧಿಕಾರಿ, ಶುಕ್ರವಾರ ಸಂಜೆ 4 ಗಂಟೆಗೆ ಉಪಾಧ್ಯಕ್ಷ ಸ್ಥಾನದ ಚುನಾವಣೆಯನ್ನು ಮುಂದೂಡುವುದಾಗಿ ಹೇಳಿದರು. ಇದರಿಂದ ಆಕ್ರೋಶಗೊಂಡ ಶಾಸಕ ಪ್ರೀತಂ ಜೆ.ಗೌಡ, ಚುನಾವಣೆ ಮುಂದೂಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಇಂದೇ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು. ಬಿಜೆಪಿ ಸದಸ್ಯರು ಶಾಸಕರ ಮಾತಿಗೆ ಧ್ವನಿಗೂಡಿಸಿದರು. ಅಷ್ಟರಲ್ಲಿ ಜೆಡಿಎಸ್ ಸದಸ್ಯರು ಸಭಾಂಗಣದಿಂದ ಒಟ್ಟಾಗಿ ಹೊರನಡೆದರು.