

ಪಿರಿಯಾಪಟ್ಟಣ: ಅಧಿಕಾರಕ್ಕಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಕದತಟ್ಟುವ ಅವಕಾಶವಾದಿ ಜೆಡಿಎಸ್ ಪಕ್ಷವನ್ನು ಅಧಿಕಾರದಿಂದ ದೂರವಿಡಬೇಕು ಎಂದು ಮಾಜಿ ಸಚಿವ ಕೆ. ವೆಂಕಟೇಶ್ ಕರೆ ನೀಡಿದರು.
ತಾಲೂಕಿನ ಪಂಚವಳ್ಳಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಕಿರನಲ್ಲಿ, ಪಂಚವಳ್ಳಿ ಮತ್ತು ಮಾಲಂಗಿ ಗ್ರಾಪಂ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿ, ಜೆಡಿಎಸ್ ಪಕ್ಷಕ್ಕೆ ಯಾವುದೇ ತತ್ವ. ಸಿದ್ಧಾಂತಗಳಿಲ್ಲ. ಕುಟುಂಬದ ಅಧಿಕಾರ ಮುಖ್ಯವೇ ಹೊರತು ಜನರ ಹಿತವಲ್ಲ ಎಂದು ಟೀಕಿಸಿದರು.
ಸರ್ವಾಧಿಕಾರಿ ಧೋರಣೆ ಆಡಳಿತ ನಡೆಸುತ್ತಿರುವ ಕೇಂದ್ರ ಹಾಗೂ ರಾಜ್ಯದಲ್ಲಿನ ಜನವಿರೋಧಿ ಬಿಜೆಪಿ ಸರ್ಕಾರ ಕಿತ್ತೊಗೆದು ಸರ್ವ ಜನಾಂಗದ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವಲ್ಲಿ ಮತದಾರರು ಎಚ್ಚರಿಕೆ ವಹಿಸಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಮಾತನಾಡಿ, ಅಗತ್ಯ ವಸ್ತುಗಳ ಬೆಲೆ ಹೆಚ್ಚು ಮಾಡಿದ್ದೆ ಸಾಧನೆ ಎನ್ನುವ ಬಿಜೆಪಿ ಹಾಗೂ ಕುಟುಂಬ ರಾಜಕಾರಣದ ಜೆಡಿಎಸ್ ಪಕ್ಷವನ್ನು ಮತದಾರರು ತಿರಸ್ಕರಿಸಿ ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವಿಗೆ ಸಹಕರಿಸುವಂತೆ ಕೋರಿದರು.
ಕುರುಬ ಸಮಾಜದ ತಾಲೂಕು ಅಧ್ಯಕ್ಷ ಎಚ್.ಡಿ.ಗಣೇಶ್ ಮಾತನಾಡಿ, ಜನಪ್ರತಿನಿಧಿಯಾದವರಿಗೆ ತಾಲೂಕಿನ ಸಮಸ್ಯೆ ಮೂಲ ಸೌಕರ್ಯದ ಬಗ್ಗೆ ಸರಿಯಾದ ತಿಳಿವಳಿಕೆ ಇರಬೇಕು. ಆದರೆ ಈ ಶಾಸಕನಿಗೆ ತಾಲೂಕಿನ ಬಗ್ಗೆ ಯಾವುದೇ ಮಾಹಿತಿ ಹಾಗೂ ಅರಿವು ಇಲ್ಲದೆ ಪಂಚಾಯಿತಿಗಳು ಮಾಡುವ ಕೆಲಸಕ್ಕೆ ಗುದ್ದಲಿ, ಹಾರೆ ಹಿಡಿಯುವುದೇ ಶಾಸಕನ ಜವಾಬ್ದಾರಿ ಎಂದು ತಿಳಿದು ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ ಎಂದರು.
ತಾಪಂ ಮಾಜಿ ಸದಸ್ಯ ಟಿ.ಈರಯ್ಯ, ಮುಖಂಡರಾದ ವಕೀಲ ಬಿ.ವಿ. ಜವರೇಗೌಡ, ಬೆಕ್ಕರೆ ನಂಜುಂಡಸ್ವಾಮಿ, ಸೀಗೂರು ವಿಜಯ್‌ಕುಮಾರ್ ಮಾತನಾಡಿದರು.
ಅದ್ದೂರಿ ಸ್ವಾಗತ: ತಾತನಹಳ್ಳಿ ಗೇಟ್ ಬಳಿಯಿಂದ ಸತ್ಯಗಾಲ ಮೂಲಕ ಪಂಚವಳ್ಳಿ ಗ್ರಾಮಕ್ಕೆ ಬೈಕ್ ಮೆರವಣಿಗೆ ಮೂಲಕ ಆಗಮಿಸಿದ ಮಾಜಿ ಸಚಿವರು ಹಾಗೂ ಪಕ್ಷದ ಮುಖಂಡರನ್ನು ಪಟಾಕಿ ಸಿಡಿಸಿ ಜೈಕಾರ ಕೂಗಿ ಹೂಮಳೆ ಸುರಿಸುವ ಮೂಲಕ ಅದ್ದೂರಿಯಾಗಿ ಸ್ವಾಗತಿಸಿ ತೆರೆದ ವಾಹನದಲ್ಲಿ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಇದೇ ವೇಳೆ ಹಲವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದರು.
ಕೆಪಿಸಿಸಿ ಸದಸ್ಯ ನಿತಿನ್ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ. ಸ್ವಾಮಿ, ಎಸ್‌ಸಿ ಘಟಕದ ಅಧ್ಯಕ್ಷ ಪಿ. ಮಹದೇವ್, ಗ್ರಾಪಂ ಅಧ್ಯಕ್ಷರಾದ ಗೋವಿಂದರಾಜ್, ರವಿ, ಮಂಜುನಾಥ್, ಮುಖಂಡರಾದ ಲಕ್ಷ್ಮಣೇಗೌಡ, ಈ.ಪಿ. ಲೋಕೇಶ್, ಕರಿಗೌಡ, ಆರ್.ಎಸ್. ಮಹದೇವ್, ಪಿ.ಡಿ. ಮೋಹನ್, ತಮ್ಮಣ್ಣಯ್ಯ, ಗಿರೀಶ್, ಲೋಹಿತ್, ಪುರುಷೋತ್ತಮ್ ಸೇರಿದಂತೆ ಕಾಂಗ್ರೆಸ್ ಪಕ್ಷದ ವಿವಿಧ ಮೋರ್ಚಾ ಪದಾಧಿಕಾರಿಗಳು ಕಾರ್ಯಕರ್ತರು ಇದ್ದರು.