ಜೆಡಿಎಸ್ ಪಂಕ್ಚರ್ ಆಗಿರುವ ಡಕೋಟ ಬಸ್

10ark3
Published on

ಅರಕಲಗೂಡು: ಕ್ಷೇತ್ರದಲ್ಲಿ ಪಕ್ಷದಲ್ಲಿರುವ ಹಾಲಿ ಶಾಸಕರನ್ನು ಉಳಿಸಿಕೊಳ್ಳಲಾಗದೆ ದೇವೇಗೌಡರ ಕುಟುಂಬವನ್ನು ಟೀಕಿಸುತ್ತಿದ್ದ ವ್ಯಕ್ತಿಯನ್ನೇ ಅಭ್ಯರ್ಥಿ ಮಾಡಲು ಹೊರಟಿರುವ ಜೆಡಿಎಸ್ ಪಂಕ್ಚರ್ ಆಗಿರುವ ಡಕೋಟ ಬಸ್ ಇದ್ದಂತೆ ಎಂದು ಬಿಜೆಪಿ ಮುಖಂಡ ಎಚ್. ಯೋಗಾರಮೇಶ್ ಲೇವಡಿ ಮಾಡಿದರು.


ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಪಕ್ಷದ ಕಸಬಾ ಹೋಬಳಿ ಮುಖಂಡರು ಮತ್ತು ಪ್ರಮುಖರ ಸಭೆಯಲ್ಲಿ ಮಾತನಾಡಿ, ಎ. ಮಂಜು ಯಾವತ್ತೂ ತನ್ನ ಸಾಧನೆ ಮೂಲಕ ಚುನಾವಣೆಯಲ್ಲಿ ಗೆದ್ದವರಲ್ಲ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬವನ್ನು ವಿರೋಧಿಸಿಕೊಂಡೇ ಬಂದವರು. ಇದೀಗ ಪಕ್ಷದಲ್ಲಿರುವ ಶಾಸಕರನ್ನು ಸರಿಯಾಗಿ ಇಟ್ಟುಕೊಳ್ಳಲಾಗದೆ ಬೇರೆ ವ್ಯಕ್ತಿಯನ್ನು ಅಭ್ಯರ್ಥಿ ಎಂದು ಬಿಂಬಿಸುತ್ತಿರುವುದು ಜೆಡಿಎಸ್ ಪಕ್ಷದ ನೀತಿಯಾಗಿದೆ. ನಂಬಿದವರಿಗೆ ಮೋಸ ಮಾಡುತ್ತಿದೆ. ಜೆಡಿಎಸ್ ಪಕ್ಷವನ್ನು ಎಲ್ಲರೂ ಬಿಟ್ಟು ಹೋಗುತ್ತಿದ್ದಾರೆ. ಎಚ್.ಡಿ. ಕುಮಾರಸ್ವಾಮಿ 123 ಸ್ಥಾನ ಪಡೆಯುವುದಾಗಿ ಹೇಳುತ್ತಿರುವುದು ಹಾಸ್ಯಾಸ್ಪದ ಎಂದರು.


ರಾಜ್ಯದಲ್ಲಿ ಎಲ್ಲೂ ಒಂದು ಕ್ಷೇತ್ರ ಸಿಗದೆ ಅಲೆಯುತ್ತಿರುವ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಭ್ರಮೆಯಲ್ಲಿದ್ದಾರೆ. ಮುಖ್ಯಮಂತ್ರಿಯಾಗಿದ್ದ ವೇಳೆ ಹಿಂದು ವಿರೋಧಿ ಟಿಪ್ಪುವನ್ನು ಹೊಗಳುವುದು, ಧರ್ಮವನ್ನು ಒಡೆಯುವ ಕೆಲಸ ಮಾಡಿದರು ಎಂದು ಕುಟುಕಿದರು.
ಮುಖಂಡರಾದ ಶಿವಲಿಂಗಶಾಸ್ತ್ರಿ, ನಳಿನಿ ರಾಜೇ ಅರಸ್, ಸೋಮಶೇಖರ ಸೀಬಹಳ್ಳಿ, ಪ್ರಧಾನ ಕಾರ್ಯದರ್ಶಿ ಲೋಕೇಶ್, ಯುವ ಮೋರ್ಚಾ ಅಧ್ಯಕ್ಷ ಚಂದ್ರಶೇಖರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net