ಜೆಡಿಎಸ್ ನಿಷ್ಠಾವಂತರು ಬಿಜೆಪಿಯತ್ತ : ಹಣವಂತರಿಗೆ ಮಣೆ ಹಾಕುವ ಎಚ್‌ಡಿಕೆ ಎಂದು ಆರೋಪ

1
Published on

ಚನ್ನಪಟ್ಟಣ: ತಾಲೂಕು ಜೆಡಿಎಸ್‌ನಲ್ಲಿ ನಿಷ್ಠಾವಂತರಿಗೆ ಬೆಲೆ ಇಲ್ಲ. ಚಿನ್ನಾಭರಣ ತೊಟ್ಟು ಕಾರಿನಲ್ಲಿ ಓಡಾಡುವ ಹಣವಂತರಿಗೆ ಮಾತ್ರ ಬೆಲೆ. ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಕೂಡ ಅಂಥವರಿಗೇ ಮಣೆ ಹಾಕುತ್ತಿದ್ದಾರೆ. ಇದರಿಂದ ಮನನೊಂದು ಎಚ್‌ಡಿಕೆ ಯುವಸೇನೆ ತೊರೆದು ಹಲವು ಕಾರ್ಯಕರ್ತರೊಂದಿಗೆ ಬಿಜೆಪಿ ನಾಯಕ ಸಿ.ಪಿ. ಯೋಗೇಶ್ವರ್ ಸೇನೆ ಸೇರುತ್ತಿದ್ದೇನೆ ಎಂದು ಎಚ್‌ಡಿಕೆ ಯುವಸೇವೆ ಅಧ್ಯಕ್ಷ ಸುಣ್ಣಟ್ಟ ಅಶ್ವಥ್ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2010ರಲ್ಲಿ ಯುವ ಸೇವೆ ಕಟ್ಟುವ ಮೂಲಕ ಜೆಡಿಎಸ್‌ಗೆ ಶಕ್ತಿ ತುಂಬಲು ಆರಂಭಿಸಿದ್ದೆವು. ತಾಲೂಕಿನ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಯುವಸೇನೆಗೆ ಕಾರ್ಯಕರ್ತರನ್ನು ಕರೆತಂದೆವು. ಅಂದಿನಿಂದ ಇಂದಿನವರೆಗೆ ಪಕ್ಷ ಸಂಟನೆಗಾಗಿ ದುಡಿಯುತ್ತಿರುವ ನಮ್ಮನ್ನು ಕಡೆಗಣಿಸಲಾಗುತ್ತಿದೆ. ಚುನಾವಣೆ ಸಮಯದಲ್ಲಿ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿದ್ದೇವೆ. ಆದರೂ ನಮ್ಮನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಲಿಲ್ಲ. ಎಚ್‌ಡಿಕೆ ಕೂಡ ನಿಮ್ಮ ಕಷ್ಟವೇನು ಎಂದು ಕೇಳಲಿಲ್ಲ. ಇದು ನನ್ನೊಬ್ಬನ ಸ್ಥಿತಿಯಲ್ಲ. ಪಕ್ಷದ ಬಹುತೇಕ ಕಾರ್ಯಕರ್ತರು ಫಲಾಪೇಕ್ಷೆ ಇಲ್ಲದೆ ಪಕ್ಷಕ್ಕಾಗಿ ದುಡಿದಿದ್ದಾರೆ. ಆದರೆ, ನಿಷ್ಠಾವಂತರಿಗೆ ಯಾವ ಅನುಕೂಲವೂ ಆಗಿಲ್ಲ ಎಂದು ನೋವು ತೋಡಿಕೊಂಡರು.

ಎಚ್‌ಡಿಕೆ ಯುವಸೇನೆ ಉಪಾಧ್ಯಕ್ಷ ಶಿವರಾಮು, ಮಹಿಳಾ ಟಕದ ಅಧ್ಯಕ್ಷೆ ವಸಂತಮ್ಮ ಮಾತನಾಡಿದರು. ಯುವಸೇನೆ ಮುಖಂಡರಾದ ಚಾಮರಾಜು, ಶಿವು, ರತ್ನಮ್ಮ, ಜಯರಾಮು, ರೋಷನ್ ಮುಂತಾದವರು ಉಪಸ್ಥಿತರಿದ್ದರು.

ದುರಂತ: ಕಳೆದ 20 ವರ್ಷಗಳಿಂದ ಜೆಡಿಎಸ್‌ಗೆ ತಾಲೂಕಿನಲ್ಲಿ ಅಧಿಕಾರ ದಕ್ಕಿರಲಿಲ್ಲ. ಆದರೂ ತಾಲೂಕಿನಲ್ಲಿ ಜೆಡಿಎಸ್ ಬಲಿಷ್ಠವಾಗಿತ್ತು. ಸೂಕ್ತ ನಾಯಕರಿಲ್ಲದ ಸಮಯದಲ್ಲೇ 15 ತಾಪಂ, 5 ಜಿಪಂ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಜಯಗಳಿಸಿದ್ದರು. ಆದರೆ, ಇಂದು ಪಕ್ಷಕ್ಕೆ ಬಲಿಷ್ಠ ನಾಯಕತ್ವ ದೊರೆತಿದ್ದರೂ ನಿಷ್ಠಾವಂತ ಕಾರ್ಯಕರ್ತರು ಪಕ್ಷದಿಂದ ವಿಮುಖರಾಗುತ್ತಿರುವುದು ದುರಂತ ಎನಿಸುತ್ತಿದೆ ಎಂದು ಸುಣ್ಣಟ್ಟ ಅಶ್ವಥ್ ಅಭಿಪ್ರಾಯಪಟ್ಟರು.

ನಿರ್ಧಾರ ಸ್ಪಷ್ಟ: ಯುವಸೇನೆಯ ಬಹುತೇಕ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಜೆಡಿಎಸ್ ತೊರೆಯುವ ನಿರ್ಧಾರ ಒಪ್ಪಿದ್ದಾರೆ. ಕೆಲವರು ತಟಸ್ಥವಾಗಿ ಉಳಿಯಲು ತೀರ್ವಾನಿಸಿದ್ದು, ಬಹುತೇಕರು ನಮ್ಮ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಸಿ.ಪಿ. ಯೋಗೇಶ್ವರ್ ಬಿಜೆಪಿಯಲ್ಲಿ ನಮಗೆ ಸೂಕ್ತ ಸ್ಥಾನವಾನ ಭರವಸೆ ನೀಡಿದ್ದಾರೆ ಎಂದು ಸುಣ್ಣಟ್ಟ ಅಶ್ವಥ್ ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net