ಜೆಡಿಎಸ್ ದುರ್ಬಲಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ

Published on

ಅರಸೀಕೆರೆ: ಜೆಡಿಎಸ್ ದುರ್ಬಲಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಣಾವರ ಅಶೋಕ್ ಶಾಸಕ ಕೆ.ಎಂ.ಶಿವಲಿಂಗೇಗೌಡರಿಗೆ ತಿರುಗೇಟು ನೀಡಿದರು.


ಜೆಡಿಎಸ್ ಶಾಸಕರನ್ನು ತಯಾರಿಸುವ ಕಾರ್ಖಾನೆಯಂತಿದೆ. ಇಲ್ಲಿಂದ ಹೋಗಿ ಕಾಂಗ್ರೆಸ್, ಬಿಜೆಪಿಯಲ್ಲಿ ಅಧಿಕಾರ ಅನುಭವಿಸುತ್ತಿರುವ ಹಲವು ನಾಯಕರು ಜನತಾ ಪರಿವಾರದಿಂದ ಬಂದವರು ಎನ್ನುವುದು ಜಗಜ್ಜಾಹೀರಾಗಿದೆ. ಜೆಡಿಎಸ್‌ನಿಂದ ರಾಜಕೀಯ ಸ್ಥಾನಮಾನಗಳ ಅವಕಾಶ ಪಡೆದು ಮೂರು ಬಾರಿ ಶಾಸನಸಭೆ ಪ್ರವೇಶಿಸಿರುವ ಶಾಸಕ ಕೆ.ಎಂ.ಶಿವಲಿಂಗೇಗೌಡ ಕಾಂಗ್ರೆಸ್ ಸೇರಿದರೆ 50 ಸಾವಿರ ಮತಗಳ ಅಂತರದಿಂದ ಗೆದ್ದುಬರುತ್ತೇನೆ ಎಂದು ಹೇಳಿಕೊಂಡಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.


ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಗರಡಿಯಲ್ಲಿ ಪಳಗಿದ ಹಲವರು ಜೆಡಿಎಸ್ ಬಿಟ್ಟು ಹೋಗಿದ್ದರೂ ಪಕ್ಷ ಬಲಿಷ್ಠವಾಗಿದೆ. ಶಾಸಕರಿಂದ ಜೆಡಿಎಸ್ ಅಲ್ಲ, ಆದರೆ, ಅವರಿಗೆ ಪಕ್ಷ ಅನಿವಾರ್ಯವಾಗಿತ್ತು ಎಂಬುದನ್ನು ಮರೆತಿದ್ದಾರೆ. ಕೆ.ಎಂ.ಶಿವಲಿಂಗೇಗೌಡ ಅವರು ಕಾಂಗ್ರೆಸ್‌ಗೆ ಹೋಗಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡುವ ಅಗತ್ಯವಿಲ್ಲ. ಈಗಾಗಲೇ ಒಂದು ಬಾರಿ ಅಧಿಕಾರ ನಡೆಸಿದ್ದಾರೆ. ಈ ಬಾರಿ ಅಹಿಂದ ಮತಗಳು ಜೆಡಿಎಸ್ ಪರ ಚಲಾವಣೆಯಾಗಲಿದ್ದು ಸದ್ಯ ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದೆ ಎಂದರು.


ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷದ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕರ್ತರ ಸಭೆಗೆ ಜನರು ಬಾರದಂತೆ ತಮ್ಮ ಬೆಂಬಲಿಗರ ಮೂಲಕ ಡಾಬಾಗಳಲ್ಲಿ ಹಣ, ಹೆಂಡ, ಬಾಡೂಟ ಹಾಕಿಸುವ ಕೆಲಸ ಮಾಡಿರುವುದು ನಾಚಿಕೆಗೇಡಿನ ಸಂಗತಿ. ಕ್ಷೇತ್ರದ ಎಲ್ಲ ವರ್ಗಗಳ ಮತದಾರರ ಮನಗೆಲ್ಲುವ ಉದ್ದೇಶದಿಂದ ಪಕ್ಷದ ವರಿಷ್ಠರ ಮಾರ್ಗದರ್ಶನದಂತೆ ಹಳ್ಳಿಗಳಲ್ಲಿ ಪ್ರವಾಸ ಆರಂಭಿಸಿದ್ದೇವೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್, ಬಿಜೆಪಿಯ ಹಲವು ಮುಖಂಡರು ಜೆಡಿಎಸ್ ಸೇರ್ಪಡೆಗೊಳ್ಳಲಿದ್ದಾರೆ. ಶೀಘ್ರವೇ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಲಿದ್ದು ಅಂತಿಮವಾಗಿ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿದ್ದೇನೆ ಎಂದರು.


ತಾಲೂಕು ಜೆಡಿಎಸ್ ಅಧ್ಯಕ್ಷ ಕಲ್ಲುಸಾದರಹಳ್ಳಿ ಚಂದ್ರಶೇಖರ್, ವಕ್ಫ್ ಬೋರ್ಡ್ ಜಿಲ್ಲಾಧ್ಯಕ್ಷ ಸಯ್ಯದ್ ಸಿಕಂದರ್, ತಾಪಂ ಮಾಜಿ ಅಧ್ಯಕ್ಷ ಶೇಖರನಾಯ್ಕ, ಎಪಿಎಂಸಿ ಮಾಜಿ ಅಧ್ಯಕ್ಷ ಹರಳಕಟ್ಟ ಶಶಿಕುಮಾರ್, ಮುಖಂಡರಾದ ಹರ್ಷವರ್ಧನ್, ಷಡಕ್ಷರಿ, ಶಶಿವಾಳ ಗಂಗಾಧರ್,ಸತೀಶ್, ರಾಜಾನಾಯ್ಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net