

ಮೈಸೂರು: ಶಾಸಕ ಜಿ.ಟಿ. ದೇವೇಗೌಡ ಅವರ ವಿರೋಧಿ ಬಣ ಜೆಡಿಎಸ್ ತೊರೆಯುವ ನಿರ್ಧಾರ ಮಾಡಿದೆ. ಆ ಮೂಲಕ ಪಕ್ಷ ಹಾಗೂ ಜಿಟಿಡಿಗೆ ಸೆಡ್ಡು ಹೊಡೆದಿದೆ.
ಮೈಸೂರು ತಾಲೂಕಿನ ಕೇರ್ಗಳ್ಳಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಸ್ವಾಭಿಮಾನ ಕಾರ್ಯಕರ್ತರ ಸಭೆಯಲ್ಲಿ ವಿರೋಧಿ ಬಣ ಈ ತೀರ್ಮಾನವನ್ನು ಪ್ರಕಟಿಸಿದ್ದು, ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿಯೂ ಘೋಷಣೆ ಮಾಡಿದೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಬಂಡಾಯ ನಾಯಕರು ಶಾಸಕ ಜಿ.ಟಿ. ದೇವೇಗೌಡ ವಿರುದ್ಧ ಶಕ್ತಿ ಪ್ರದರ್ಶನ ಮಾಡಿದರು. ಇದರೊಂದಿಗೆ ಪಕ್ಷ, ಜಿಟಿಡಿಗೆ ಸೆಡ್ಡು ಹೊಡೆದರು. ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಿದ್ದರು. ಈ ವೇಳೆ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಮಾಡಲಾಯಿತು.
ಮುಖಂಡ ಮಾವಿನಹಳ್ಳಿ ಸಿದ್ದೇಗೌಡ ಮಾತನಾಡಿ, ‘ನಾವು ಜೆಡಿಎಸ್‌ನಲ್ಲಿ ಇರಬೇಕೇ? ಬೇಡವೇ?’ ಎಂದು ನೆರೆದಿದ್ದ ಕಾರ್ಯಕರ್ತರನ್ನು ಪ್ರಶ್ನಿಸಿದರು. ಈ ವೇಳೆ ‘ರಾಜೀನಾಮೆ ಕೊಡಿ’ ಎಂದು ಕಾರ್ಯಕರ್ತರು ಹೇಳಿದರು.
ಜೆಡಿಎಸ್ ಕಾರ್ಯಕರ್ತರನ್ನು ಮಾತ್ರ ಕರೆದಿದ್ದೇವೆ. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಬರುತ್ತಾರೆಂದು ನಿರೀಕ್ಷೆ ಮಾಡಿರಲಿಲ್ಲ. ನಿಮ್ಮ ಆಣತಿಯಂತೆ ರಾಜೀನಾಮೆ ನೀಡುತ್ತೇವೆ. ಮುಂದಿನ ನಮ್ಮ ರಾಜಕೀಯ ನಿರ್ಧಾರದ ಬಗ್ಗೆ ಮತ್ತೆ ಸ್ವಾಭಿಮಾನಿ ಸಮಾವೇಶ ಮಾಡುತ್ತೇವೆ. ನಿಮ್ಮ ತೀರ್ಮಾನದಂತೆ ನಡೆಯುತ್ತೇವೆ ಎಂದು ಪ್ರಕಟಿಸಿದರು.
ಚಾಮುಂಡೇಶ್ವರಿ ಕ್ಷೇತ್ರದ ಶಾಸಕರ ಬಗ್ಗೆ ಮಾತನಾಡುವುದಕ್ಕೆ ಅಸಹ್ಯ ಅನಿಸುತ್ತದೆ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನು ಸೋಲಿಸಿ ತಪ್ಪು ಮಾಡಿದ್ದೇವೆ. ಮುಂದಿನ ಚುನಾವಣೆಯಲ್ಲಿ ಜಿಟಿಡಿಗೆ ಪಾಠ ಕಲಿಸುತ್ತೇವೆ ಎಂದು ಗುಡುಗಿದರು.
ಹುಷಾರಿಲ್ಲದ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ತಮ್ಮ ಮನೆಗೆ ಕರೆಸಿ, ಮೊಸಳೆ ಕಣ್ಣೀರು ಹಾಕ್ತೀರಿ. ನಿಮ್ಮ ಸ್ವಾರ್ಥಕ್ಕೆ ಚಾಮುಂಡೇಶ್ವರಿ ಕ್ಷೇತ್ರದ ಜನರನ್ನು ಬಲಿ ಕೊಡುತ್ತಿದ್ದೀರಾ ಎಂದು ಪ್ರಶ್ನಿಸಿದರು.
ಜೆಡಿಎಸ್ ವಿರುದ್ಧ ಬಂಡಾಯ ಎದ್ದಿರುವ ಮುಖಂಡರಾದ ಬೀರಿಹುಂಡಿ ಬಸವಣ್ಣ, ಕೆಂಪನಾಯಕ, ಬೆಳವಾಡಿ ಶಿವಮೂರ್ತಿ, ಮಾದೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜು ಇನ್ನಿತರರು ಸಭೆಯಲ್ಲಿದ್ದರು.
ಕೈ ಸೇರ್ಪಡೆ ಸಾಧ್ಯತೆ:
ಜಿಟಿಡಿ ವಿರೋಧಿ ಬಣ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುವ ನಿರೀಕ್ಷೆ ಇದ್ದು, ಕಾಂಗ್ರೆಸ್ ಸೇರ್ಪಡೆಯ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಅಪ್ಪ-ಮಗನನ್ನು ಸೋಲಿಸ್ತೀವಿ
ಅಪ್ಪ-ಮಗ ಇಬ್ಬರನ್ನೂ ಸೋಲಿಸ್ತೀವಿ ಎಂದು ಸಭೆಯಲ್ಲಿ ಜೆಡಿಎಸ್ ಅತೃಪ್ತರು ಶಪಥ ಮಾಡಿದರು.
ಜೆಡಿಎಸ್ ವಿರುದ್ಧ ಕೆಲಸ ಮಾಡಿದ್ದ ಜಿಟಿಡಿಗೆ ಮತ್ತು ಅವರ ಪುತ್ರನಿಗೆ ಟಿಕೆಟ್ ಕೊಡಲು ಮುಂದಾಗಿದ್ದು, ಇದು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರಿಗೆ ಮಾಡಿದ ಅನ್ಯಾಯ. ಜಿಟಿಡಿಗಾಗಿ ನಾವು ಸಾಕಷ್ಟು ದುಡಿದಿದ್ದೇವೆ. ಆದರೆ ಅವರು ನಮಗೆ ಅನ್ಯಾಯ ಮಾಡಿದ್ದಾರೆ. ಇಂತಹವರಿಗೆ ತಕ್ಕ ಪಾಠ ಕಲಿಸ್ತೀವಿ ಎಂದು ಗುಡುಗಿದರು.
ನಮ್ಮ ಉದ್ದೇಶ ಒಂದೇ. ಹುಣಸೂರಿನಲ್ಲಿ ಹರೀಶ್‌ಗೌಡನನ್ನು ಸೋಲಿಸೋದು, ಚಾಮುಂಡೇಶ್ವರಿಯಲ್ಲಿ ಜಿಟಿಡಿಯನ್ನು ಸೋಲಿಸೋದು ಎಂದರು.
ನಿಮಗೆ ಶಕ್ತಿ ತುಂಬಿದ್ದು ಚಾಮುಂಡೇಶ್ವರಿ ಕ್ಷೇತ್ರದ ಜನರು. ನಮ್ಮನ್ನು ನೀವು ಗೆದ್ದ ದಿನದಿಂದ ಟಾರ್ಗೆಟ್ ಮಾಡಿದ್ದೀರಿ. ದೇವರ ಮುಂದೆ ಪ್ರಮಾಣ ಮಾಡಿ, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ನಮ್ಮನ್ನು ಸೋಲಿಸಲು ಪ್ರಯತ್ನ ಮಾಡಿದ್ದೀರಿ. ಆದರೆ ಈ ಕ್ಷೇತ್ರದ ಜನರು ಬೆಂಬಲ ನೀಡಿದರು ಎಂದು ಜಿಟಿಡಿ ವಿರುದ್ಧ ಜಿಪಂ ಮಾಜಿ ಸದಸ್ಯ ಬೀರಿಹುಂಡಿ ಬಸವಣ್ಣ ಕಿಡಿಕಾರಿದರು.
ಹುಣಸೂರಿನ ಉಪಚುನಾವಣೆಯಲ್ಲಿ ಏನು ಮಾಡಿದಿರಿ? ಜೆಡಿಎಸ್ ಅಭ್ಯರ್ಥಿ ಸೋಮಶೇಖರ್‌ಗೆ ಸಹಾಯ ಮಾಡುತ್ತೇನೆಂದು ಹೇಳಿ ಕಾಂಗ್ರೆಸ್ ಅಭ್ಯರ್ಥಿಗೆ ಸಹಕಾರ ನೀಡಿದಿರಿ. ಅದೇ ರೀತಿ ವಿಧಾನ ಪರಿಷತ್ ಚುನಾವಣೆಯಲ್ಲೂ ಪಕ್ಷಕ್ಕೆ ದ್ರೋಹ ಮಾಡುತ್ತೀರಿ ಎಂದು ಆರೋಪಿಸಿದರು.
ನಾವೆಲ್ಲರೂ ಸ್ವಾಭಿಮಾನಿಗಳು. ನಿಮಗೆ ಸ್ವಾಭಿಮಾನ ಇದೆಯಾ? ನಿಮ್ಮ ಕುಟುಂಬವನ್ನು ಬೆಳೆಸುವುದಕ್ಕೆ ಜಾತಿಯನ್ನು ಬಳಸಿಕೊಳ್ಳುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿದ್ದೇವೆ. ಯಾವುದೇ ಮನವೊಲಿಕೆಗೂ ನಾವು ಬಗ್ಗುವುದಿಲ್ಲ. ಜತೆಗೆ, ನಮ್ಮ ನಿಲುವು ಬದಲಾಗಲ್ಲ ಎಂದರು.
ಜಿಟಿಡಿಯಿಂದ ಜೆಡಿಎಸ್‌ಗೆ ದ್ರೋಹ
ಜಿಟಿಡಿ ಅವರು ಚುನಾವಣೆಗಳಲ್ಲಿ ಜೆಡಿಎಸ್‌ಗೆ ದ್ರೋಹ ಬಗೆದರು. ಆ ವೇಳೆ ಕುಮಾರಣ್ಣ ನಮ್ಮನ್ನೆಲ್ಲ ಕರೆದು ಪಕ್ಷ ಸಂಘಟನೆ ಮಾಡಿ ಎಂದಿದ್ದರು. ನಿಮ್ಮಲ್ಲಿ ಒಬ್ಬರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಕೊಡುತ್ತೇನೆ ಎಂದೂ ಭರವಸೆ ನೀಡಿದ್ದರು. ಜಿಟಿಡಿ ಮತ್ತೆ ಪಕ್ಷಕ್ಕೆ ಬಂದಿದ್ದನ್ನು ಪ್ರಶ್ನೆ ಮಾಡಿದಾಗ ‘ನನ್ನದೇನೂ ಇಲ್ಲ ಬ್ರದರ್, ಐ ಆ್ಯಮ್ ಹೆಲ್ಪ್‌ಲೆಸ್’ ಎಂದು ಎಚ್‌ಡಿಕೆ ಕೈಬಿಟ್ಟರು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಾದೇಗೌಡ ಕಿಡಿಕಾರಿದರು.
ಮೇಯರ್ ಚುನಾವಣೆ ವೇಳೆ ನನ್ನ ಬೆನ್ನಿಗೆ ಜಿಟಿಡಿ ಚೂರಿ ಹಾಕಿದರು. ನಾನು ಅವರಿಗಾಗಿ ದುಡಿದಿರುವೆ. ಆದರೆ, ನನ್ನ ಹೆಂಡತಿಯನ್ನು ಮೇಯರ್ ಸ್ಥಾನದಿಂದ ಕೆಳಗಿಳಿಸಿದರು. ನನ್ನ ನಾದಿನಿಯನ್ನು ಚುನಾವಣೆಯಲ್ಲಿ ನಿಲ್ಲಿಸಿದಾಗ ಅಪ್ಪ-ಮಗ ಎದುರಾಳಿಗಳಿಗೆ ಸಹಾಯ ಮಾಡಿ ಸೋಲಿಸಿದರು. ಮುಂದಿನ ಚುನಾವಣೆಯಲ್ಲಿ ನಿಮಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಗುಡುಗಿದರು.
ರಾಜಕೀಯದ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆ ಮಾಡುತ್ತೇವೆ. ಯಾವ ಮನವೊಲಿಕೆಗೂ ಬಗ್ಗುವ ಪ್ರಶ್ನೆಯೇ ಇಲ್ಲ. ಆ ಹಂತ ದಾಟಿ ಇಂದು ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ತೀರ್ಮಾನ ಮಾಡಿದ್ದೇವೆ.ಮಾವಿನಹಳ್ಳಿ ಸಿದ್ದೇಗೌಡ