

ಹಾಸನ: ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಗೊಂದಲ ಸದ್ಯಕ್ಕೆ ಬಗೆಹರಿಯುವಂತೆ ಕಾಣುತ್ತಿಲ್ಲ. ಜಿಲ್ಲೆಯ ಮಣ್ಣಿನ ಮಗ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮತ್ತೊಬ್ಬ ಸೊಸೆ ಭವಾನಿ ರೇವಣ್ಣ ಅವರ ರಂಗ ಪ್ರವೇಶದಿಂದಾಗಿ ಟಿಕೆಟ್ ಬಿಕ್ಕಟ್ಟು ದಿನದಿಂದ ದಿನಕ್ಕೆ ಜಟಿಲಗೊಳ್ಳತೊಡಗಿದೆ.
ನಾಲ್ಕು ದಿನಗಳ ಹಿಂದೆ ಹಾಸನ ಕ್ಷೇತ್ರಕ್ಕೆ ನಾನೇ ಜೆಡಿಎಸ್ ಅಭ್ಯರ್ಥಿ ಎಂಬುದಾಗಿ ಸ್ವಯಂಘೋಷಿಸಿಕೊಂಡಿರುವ ಭವಾನಿ ರೇವಣ್ಣ ಅವರು ರಾಜ್ಯದಾದ್ಯಂತ ಸುದ್ದಿ ಆಗಿದ್ದಾರೆ. ಇದರಿಂದ ವಿಚಲಿತರಾದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ‘ಭವಾನಿ ಅವರು ಸ್ಪರ್ಧಿಸುವ ಅಗತ್ಯ ಇಲ್ಲ, ಹಾಸನ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಸಮರ್ಥ ಅಭ್ಯರ್ಥಿ ಇದ್ದಾರೆ’ ಎಂಬುದಾಗಿ ಹಲವು ಬಾರಿ ಬಹಿರಂಗ ಸ್ಪಷ್ಟನೆ ನೀಡಿದ್ದರೂ ಗೊಂದಲಕ್ಕೆ ತೆರೆ ಬಿದ್ದಿಲ್ಲ, ಬದಲಿಗೆ ಸಾರ್ವಜನಿಕರಲ್ಲಿ ಈ ಕುರಿತ ಕುತೂಹಲ ಇಮ್ಮಡಿ ಆಗಿದೆ.
ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆದ್ದು ಶಾಸಕಿ ಆಗಬೇಕೆಂದು ಕಳೆದ ಎರಡು ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ಪ್ರಯತ್ನಿಸಿ ವಿಫಲರಾಗಿರುವ ಭವಾನಿ ಅವರು ಈ ಬಾರಿ ತಮ್ಮ ಪ್ರಯತ್ನದಲ್ಲಿ ‘ಮಾಡು ಇಲ್ಲವೇ ಮಡಿ’ ಎಂಬ ನಿರ್ಧಾರಕ್ಕೆ ಬಂದಿರುವಂತೆ ಕಾಣುತ್ತಿದೆ. ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ಕುರಿತಂತೆ ಎಚ್.ಡಿ. ಕುಮಾರಸ್ವಾಮಿ ಅವರ ನಿರಾಕರಣೆಯ ಹೇಳಿಕೆಯಿಂದ ಮುಖಭಂಗಕ್ಕೊಳಗಾದ ಭವಾನಿ ಅವರು ತಕ್ಷಣ ಬೆಂಗಳೂರಿಗೆ ತೆರಳಿ ತಮ್ಮ ಮಾವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮನವೊಲಿಕೆ ಯತ್ನ ನಡೆಸಿ ಬಂದಿದ್ದಾರೆ ಎನ್ನಲಾಗಿದೆ.
ದೇಗುಲ ಭೇಟಿ, ವಿಶೇಷ ಪೂಜೆ:
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತಮ್ಮ ಸೊಸೆಗೆ ಯಾವ ಭರವಸೆ ನೀಡಿದರೋ ಏನೋ ಗೊತ್ತಿಲ್ಲ, ಆದರೆ ಶುಕ್ರವಾರ ಮತ್ತೆ ಹಾಸನ ಕ್ಷೇತ್ರದಲ್ಲಿ ಕಾಣಿಸಿಕೊಂಡ ಭವಾನಿ ಅವರು ಹಾಸನ ತಾಲೂಕು ದೊಡ್ಡಗೇಣಿಗೆರೆ ಪಂಚಾಯಿತಿ ವ್ಯಾಪ್ತಿಯ ಬುಸ್ತೇನಹಳ್ಳಿ ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡಿರುವ ಮಾಸ್ತಿಯಮ್ಮ ದೇವಸ್ಥಾನದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು. ಪತಿ ಎಚ್.ಡಿ. ರೇವಣ್ಣ, ಪುತ್ರರಾದ ಸೂರಜ್ ಮತ್ತು ಪ್ರಜ್ವಲ್ ಹಾಗು ಮೈದುನ ಎಚ್.ಡಿ. ಕುಮಾರಸ್ವಾಮಿ ಹೆಸರಲ್ಲಿ ಅರ್ಚನೆ ಮಾಡಿಸಿದರು. ಆದರೆ ಅಪ್ಪಿತಪ್ಪಿಯೂ ತಮ್ಮ ಓರಗಿತ್ತಿ ಆಗಿರುವ ಅನಿತಾ ಕುಮಾರಸ್ವಾಮಿ ಮತ್ತು ಅವರ ಪುತ್ರ ನಿಖಿಲ್ ಹೆಸರನ್ನು ಹೇಳಲಿಲ್ಲ.
ಭಾವಿ ಎಂಎಲ್‌ಎ ಕೈಯಿಂದ ಪ್ರಸಾದ ಸ್ವೀಕರಿಸಿ:
ಭವಾನಿ ಅವರು ವಿಶೇಷ ಪೂಜೆ ಸಲ್ಲಿಸಿದ ನಂತರ ಭಕ್ತರಿಗೆ ಪ್ರಸಾದ ಬಡಿಸಲು ಹೋದರು. ಈ ಸಂದರ್ಭದಲ್ಲಿ ಕಾರ್ಯಕ್ರಮ ಆಯೋಜಕರು, ‘ಭಾವಿ ಎಂಎಲ್‌ಎ ಭವಾನಿ ರೇವಣ್ಣ ಅವರು ಪ್ರಸಾದ ವಿತರಿಸುತ್ತಿದ್ದಾರೆ, ದಯಮಾಡಿ ಸ್ವೀಕರಿಸಬೇಕಾಗಿ ವಿನಂತಿ’ ಎಂಬುದಾಗಿ ಮೈಕ್ ಮೂಲಕ ಪ್ರಚಾರ ಮಾಡುತ್ತಿದ್ದುದು ವಿಶೇಷವಾಗಿತ್ತು. ಈ ದೇವಸ್ಥಾನದ ಕಾರ್ಯಕ್ರಮದ ನಂತರ ಮುತ್ತೈದೆಯರು ಭವಾನಿ ಅವರ ಮಡಿಲ ತುಂಬುವ ಶಾಸ್ತ್ರ ಮಾಡಿ ಬೀಳ್ಕೊಟ್ಟರು. ಬಳಿಕ ಭವಾನಿ ಅವರು ಗಾಡೇನಹಳ್ಳಿ, ದೊಡ್ಡಮತಿಘಟ್ಟ ಮತ್ತಿತರ ಗ್ರಾಮಗಳಿಗೆ ತೆರಳಿ, ಅಲ್ಲಿನ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ, ಜನರ ಕಷ್ಟ-ಸುಖ ವಿಚಾರಿಸಿದರು.
ಪುತ್ರ, ಸಂಸದ ಪ್ರಜ್ವಲ್ ಬೆಂಬಲ:
ಶುಕ್ರವಾರ ತಮ್ಮ ತಾಯಿ ಭವಾನಿ ಅವರು ಭೇಟಿ ನೀಡಿದ ಗ್ರಾಮಗಳಿಗೆಲ್ಲಾ ಸಂಸದ ಪ್ರಜ್ವಲ್ ರೇವಣ್ಣ ಸಹ ತಮ್ಮ ಬೆಂಬಲಿಗರೊಂದಿಗೆ ಭೇಟಿ ನೀಡುವ ಮೂಲಕ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದಾರೆ. ‘ಹಾಸನದ ಬಿಜೆಪಿ ಶಾಸಕ ಪ್ರೀತಮ್‌ಗೌಡ ಹಾಕಿರುವ ಸವಾಲನ್ನು ನಮ್ಮ ಕುಟುಂಬ ಸ್ವೀಕರಿಸಿದೆ’ ಎಂಬುದಾಗಿ ಹಲವು ಬಾರಿ ಹೇಳಿರುವ ಸಂಸದ ಪ್ರಜ್ವಲ್ ರೇವಣ್ಣ ಸಹ ತಮ್ಮ ತಾಯಿಯನ್ನು ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯನ್ನಾಗಿಸಲು ಪ್ರಯತ್ನ ನಡೆಸುತ್ತಿರುವುದರ ಜೊತೆಗೆ ತಾಯಿಗೆ ಬೆಂಬಲವಾಗಿ ನಿಂತಿರುವುದು ಇಂದಿನ ಬೆಳವಣಿಗೆಗಳಿಂದ ಜನರಿಗೆ ಸ್ಪಷ್ಟವಾಗಿದೆ.
ರಾಜಕೀಯ ಮಾತನಾಡಲು ನಕಾರ:
ಶುಕ್ರವಾರ ಹಾಸನ ಕ್ಷೇತ್ರದಲ್ಲಿ ಸಂಚಾರ ನಡೆಸಿದ ಭವಾನಿ ರೇವಣ್ಣ ಮತ್ತು ಸಂಸದ ಪ್ರಜ್ವಲ್ ರೇವಣ್ಣ ಅವರು ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರು. ದೇವರ ಕಾರ್ಯಕ್ಕೆ ಬಂದಿದ್ದೇವೆ, ರಾಜಕೀಯ ಮಾತನಾಡುವುದಿಲ್ಲ ಎಂದು ಹೇಳಿ ಮೌನಕ್ಕೆ ಶರಣಾದರು. ನಿತ್ಯ ಸುದ್ದಿಗೋಷ್ಠಿ ಕರೆಯುತ್ತಿದ್ದ ಹೊಳೆನರಸೀಪುರ ಶಾಸಕ ಎಚ್.ಡಿ. ರೇವಣ್ಣ ಸಹ ಹಾಸನ ಕ್ಷೇತ್ರದ ಟಿಕೆಟ್ ಬಿಕ್ಕಟ್ಟು ತಾರಕಕ್ಕೇರಿದ ನಂತರ ಮಾಧ್ಯಮಗಳಿಂದ ದೂರ ಉಳಿದಿದ್ದಾರೆ.
ಭವಾನಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಅವರ ಜೊತೆ ಹಾಸನ ತಾಲೂಕು ಜೆಡಿಎಸ್ ಅಧ್ಯಕ್ಷ ಎಸ್. ದ್ಯಾವೇಗೌಡ ಮತ್ತಿತರ ಮುಖಂಡರು ಕಂಡುಬಂದರು. ಆದರೆ ಹಾಸನ ಕ್ಷೇತ್ರದ ಮತ್ತೊಬ್ಬ ಪ್ರಬಲ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಜಿಪಂ ಮಾಜಿ ಉಪಾಧ್ಯಕ್ಷ ಎಚ್.ಪಿ. ಸ್ವರೂಪ್ ಹಾಜರಿರಲಿಲ್ಲ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಸ್ವರೂಪ್ ಪರ ಒಲವು ತೋರುತ್ತಿರುವುದರಿಂದ ಸಹಜವಾಗಿಯೇ ಎಚ್.ಡಿ. ರೇವಣ್ಣ ಕುಟುಂಬ ಸ್ವರೂಪ್ ವಿರುದ್ಧ ಸಿಟ್ಟಾಗಿದೆ.
‘‘ಯಾರು ಏನೇ ಹೇಳಿದರೂ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ದೇವರ ಕಾರ್ಯಕ್ಕೆ ಬಂದಿದ್ದೇನೆ. ದೇವರು ಮತ್ತು ಹಿರಿಯರ ಆಶೀರ್ವಾದ ಏನಿದೆ ಎಂಬುದನ್ನು ಕಾದು ನೋಡೋಣ.’’
ಭವಾನಿ ರೇವಣ್ಣ, ಜಿಪಂ ಮಾಜಿ ಸದಸ್ಯೆ.
‘‘ನಾನು ಪ್ರೆಸ್‌ನ ಮೀಟ್ ಮಾಡುವುದಿಲ್ಲ, ಸದ್ಯಕ್ಕೆ ಏನನ್ನೂ ಚರ್ಚಿಸುವುದಿಲ್ಲ. ಶೀಘ್ರದಲ್ಲೇ ಎಲ್ಲವೂ ಸ್ಪಷ್ಟವಾಗಲಿದೆ, ಆನಂತರ ಪ್ರತಿಕ್ರಿಯೆ ನೀಡುತ್ತೇನೆ.’’
ಪ್ರಜ್ವಲ್ ರೇವಣ್ಣ, ಸಂಸದ, ಹಾಸನ.
‘‘ಹೈಕಮಾಂಡ್ ತೀರ್ಮಾನವೇ ಅಂತಿಮ, ದೇವೇಗೌಡರು, ರೇವಣ್ಣ ಅವರ ಋಣ ನಮ್ಮ ಕುಟುಂಬದ ಮೇಲಿದೆ. ನಮ್ಮ ತಂದೆಗೆ 6 ಬಾರಿ ಟಿಕೆಟ್ ಕೊಟ್ಟಿದ್ದಾರೆ, 4 ಬಾರಿ ಎಂಎಲ್‌ಎ ಮಾಡಿದ್ದಾರೆ. ನನ್ನದು ಯಾವುದೇ ಡಿಮ್ಯಾಂಡ್ ಇಲ್ಲ. ನಮ್ಮದು ತಾಯಿ-ಮಗನ ಸಂಬಂಧ. ಯಾರಿಗೆ ಟಿಕೆಟ್ ಕೊಟ್ಟರೂ ಎಲ್ಲರೂ ಒಟ್ಟಿಗೆ ಸೇರಿ ಗೆಲುವಿಗೆ ಶ್ರಮಿಸುತ್ತೇವೆ.’’ಎಚ್.ಪಿ. ಸ್ವರೂಪ್, ಜಿಪಂ ಮಾಜಿ ಉಪಾಧ್ಯಕ್ಷ.