ಜೆಡಿಎಸ್ ಕುಟುಂಬವನ್ನು ಹೋಬಳಿ ಜನ ಕ್ಷಮಿಸಲ್ಲ

IMG_20230220_114206
ಅರಕಲಗೂಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಳ್ಳಿ ಮೈಸೂರು ಹೋಬಳಿಯ ಮಾಕಬಳ್ಳಿ ಗ್ರಾಮದಲ್ಲಿ ಮನೆ ಮನೆಗೆ ಸರ್ಕಾರದ ಸಾಧನೆಯ ಕರಪತ್ರಗಳನ್ನು ನೀಡಲಾಯಿತು. ಎಚ್.ಯೋಗಾರಮೇಶ್, ಶಿವಣ್ಣ,ಕುಮಾರಾಚಾರ್ಯ, ಕೃಷ್ಣ ನಾಯಕ್ ಇತರರಿದ್ದರು.
Published on

ಹೊಳೆನರಸೀಪುರ: ಹೊಳೆನರಸೀಪುರ ತಾಲೂಕಿಗೆ ಸೇರಿದ ಹಳ್ಳಿಮೈಸೂರು ಹೋಬಳಿಯನ್ನು ಸೋಲಿನ ಭಯದಿಂದ ಅರಕಲಗೂಡು ವಿಧಾನಸಭಾ ಕ್ಷೇತ್ರಕ್ಕೆ ಸೇರಿಸಿ ಹಿಂದುಳಿಯಲು ಕಾರಣರಾಗಿರುವ ಜೆಡಿಎಸ್ ಕುಟುಂಬವನ್ನು ಹೋಬಳಿಯ ಜನರು ಎಂದಿಗೂ ಕ್ಷಮಿಸಬಾರದು ಎಂದು ಬಿಜೆಪಿ ಮುಖಂಡ ಎಚ್.ಯೋಗಾರಮೇಶ್ ಹೇಳಿದರು.

ಅರಕಲಗೂಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಳ್ಳಿ ಮೈಸೂರು ಹೋಬಳಿಯ ಮಾಕಬಳ್ಳಿ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಬೂತ್ ವಿಜಯಸಂಕಲ್ಪ ಅಭಿಯಾನ ಕಾರ್ಯಕ್ರಮದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳ ಕರಪತ್ರವನ್ನು ಮನೆ ಮನೆಗಳಿಗೆ ನೀಡಿ ಮಾತನಾಡಿದರು.

ಎ.ಮಂಜು ಅವರು ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧ ಇದ್ದವರು ಇಂದು ಅಧಿಕಾರಕ್ಕಾಗಿ ಅವರಿಗೆ ಶರಣಾಗಿದ್ದಾರೆ. ಮಂಜು ಅವರ ಗೆಲುವಿನಲ್ಲಿ ಅವರ ಸಾಧನೆ ಇರಲಿಲ್ಲ. ದೇವೇಗೌಡರ ಕುಟುಂಬದ ವಿರುದ್ಧ ರಾಜಕಾರಣ ಮಾಡುತ್ತಿದ್ದೇನೆ ಎಂದು ಜನರನ್ನು ನಂಬಿಸಿದ್ದರು. ಜೆಡಿಎಸ್ ಸೇರಿದರೆ ಸುಲಭವಾಗಿ ಗೆಲುವು ಸಾಧಿಸಬಹುದು ಅಂದುಕೊಂಡಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್ ಹಲವು ಭಾಗಗಳಾಗಿವೆ ಎಂದು ಟೀಕಿಸಿದರು.

ಎ.ಮಂಜು ಜೆಡಿಎಸ್ ಸೇರ್ಪಡೆ ಒಂದು ಅಪವಿತ್ರ ಮೈತ್ರಿ. ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಎ.ಮಂಜು ಅವರು ನ್ಯಾಯಾಲಯದಲ್ಲಿ ಹೂಡಿರುವ ಪ್ರಕರಣವನ್ನು ರಾಜಿ ಮಾಡಿಕೊಳ್ಳುವ ಸಲುವಾಗಿ ಶಾಸಕ ರೇವಣ್ಣ ಹಾಗೂ ಕುಟುಂಬ ಮಂಜು ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಈ ಹಿನ್ನೆಲೆ ನೋಡಿದರೆ ಕ್ಷೇತ್ರದಲ್ಲಿ ಜೆಡಿಎಸ್ ದುರ್ಬಲವಾಗಿದೆ ಎನ್ನುವುದು ಸ್ಪಷ್ಟವಾಗಿದೆ ಎಂದು ವ್ಯಂಗ್ಯವಾಡಿದರು.

2004ಕ್ಕಿಂತ ಮೊದಲು ಶಾಸಕ ಎ.ಟಿ.ರಾಮಸ್ವಾಮಿ ಜೆಡಿಎಸ್ ನಾಯಕರನ್ನು ಬೈಯುತ್ತಿದ್ದರು. 2004ರಿಂದ ಶಾಸಕರಾದ ಮೇಲೆ ಒಂದೇ ಒಂದು ದಿನ ದೇವೇಗೌಡರ ಕುಟುಂಬದ ವಿರುದ್ಧ ಮಾತನಾಡಲಿಲ್ಲ. ಈಗ ಮಾತನಾಡಲು ಪ್ರಾರಂಭಿಸಿದ್ದಾರೆ. ಎ.ಮಂಜು ಅವರು ಈ ಮೊದಲು ದೇವೇಗೌಡರ ವಿರುದ್ಧ ಮಾತನಾಡಿ ಈಗ ಜೆಡಿಎಸ್ ಬಾಯಿ ಬಂದ್ ಮಾಡಿದ್ದಾರೆ. ಸೋಲಿನ ಭಯ ಹಾಗೂ ಜೆಡಿಎಸ್ ದುರ್ಬಲಗೊಂಡಿರುವುದರಿಂದ ಮಂಜು ಅವರಿಗೆ ಟಿಕೆಟ್ ನೀಡಲಾಗುತ್ತಿದೆ ಎಂದರು.

ಎ.ಟಿ.ರಾಮಸ್ವಾಮಿ ಅವರನ್ನು ಭೂ ಒತ್ತುವರಿ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿದ್ದು ದೇವೇಗೌಡರು. ಜೆಡಿಎಸ್ ಕಾರ್ಯಕರ್ತರು ರಾಮಸ್ವಾಮಿಗೆ ಟಿಕೆಟ್ ನೀಡಿದರೆ ಈ ಬಾರಿ ಪಕ್ಷವನ್ನು ಸೋಲಿಸುತ್ತೇವೆ ಎಂದು ಹೇಳಿದ ಮೇಲೆ ಟಿಕೆಟ್ ಕೈ ತಪ್ಪಿದ್ದರಿಂದ ಈಗ ರಾಮಸ್ವಾಮಿ ಅವರು ಹಳ್ಳಿಮೈಸೂರು ಹೋಬಳಿಗೆ ಆಗಾಗ್ಗೆ ಬಂದು ಜೆಡಿಎಸ್ ನಾಯಕರ ವಿರುದ್ಧ ಮಾತನಾಡುತ್ತಿದ್ದಾರೆ. ರಾಮಸ್ವಾಮಿ ಅವರು ಎರಡೂ ಪಕ್ಷಗಳಿಂದ ತಿರಸ್ಕಾರಗೊಂಡಿದ್ದಾರೆ. ಅವರು ಸೋಲುವ ಅಭ್ಯರ್ಥಿ ಎಂದರು.

ತಾಲೂಕು ಬಿಜೆಪಿ ಹಿಂದುಳಿದ ವರ್ಗಗಳ ಅಧ್ಯಕ್ಷ ಶಿವಣ್ಣ, ಸಂಚಾಲಕ ಕುಮಾರಾಚಾರ್ಯ, ಎಸ್.ಟಿ.ಮೋರ್ಚಾ ಅಧ್ಯಕ್ಷ ಕೃಷ್ಣ ನಾಯಕ್, ಅರಕಲಗೂಡು ತಾಲೂಕು ಬಿಜೆಪಿ ಉಪಾಧ್ಯಕ್ಷ ಲಿಂಗರಾಜು, ಮಾಂತಪ್ಪ, ರಮೇಶ್, ಶೇಖರ್, ಬಸವರಾಜು, ರಾಜಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net