ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ

31-pnp 2
ಸಂಸದೆ ಸುಮಲತಾ ಅಂಬರೀಷ್ ಅವರು ಶಾಸಕ ಪುಟ್ಟರಾಜು ಅವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವುದನ್ನು ಬಿಡಬೇಕು ಎಂದು ಆಗ್ರಹಸಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಲ್ಲಹಳ್ಳಿ ಮಹೇಶ್, ಕೊಡಗಳ್ಳಿ ಉಮೇಶ್, ಎಂ.ಸಿ.ಶಂಕರೇಗೌಡ, ಜವರೇಗೌಡ, ದೈತ್ಯಗೌಡ ಇತರರು ಇದ್ದರು.
Published on

ಪಾಂಡವಪುರ: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಶಾಸಕ ಸಿ.ಎಸ್.ಪುಟ್ಟರಾಜು ವಿರುದ್ಧ ಪ್ರಚಾರದ ಗೀಳಿಗಾಗಿ ಸಂಸದೆ ಸುಮಲತಾ ಅಂಬರೀಷ್ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸುಂಕಾತೊಣ್ಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ಗ್ರಾಪಂ ವ್ಯಾಪ್ತಿಯ ಮಾಡರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಮುಂಭಾಗ ಜಮಾವಣೆಗೊಂಡ ಪ್ರತಿಭಟನಾಕಾರರು, ಸಂಸದರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಂಸದೆ ಸುಮಲತಾ ಅಂಬರೀಷ್ ಅವರು ಸುಳ್ಳು ಹೇಳುವುದನ್ನು ಬಿಡಬೇಕು. ಶಾಸಕ ಸಿ.ಎಸ್.ಪುಟ್ಟರಾಜು ಅವರು ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ತಂದಿರುವ ಅನುದಾನದ ಮಾಹಿತಿಯೊಂದಿಗೆ ನಾವು ಬಹಿರಂಗ ಚರ್ಚೆಗೆ ತಯಾರಿದ್ದೇವೆ. ಸಂಸದರು ತಮ್ಮ ನಿಧಿಯಲ್ಲಿ ಈ ಕ್ಷೇತ್ರಕ್ಕೆ ಎಷ್ಟು ಅನುದಾನ ನೀಡಿದ್ದಾರೆ ಎಂಬುದರ ಬಗ್ಗೆ ಚರ್ಚಿಸಲು ಅವರು ಸಿದ್ಧರಿದ್ದಾರೆಯೇ ಎಂದು ಪ್ರತಿಭಟನಾಕಾರರು ಸವಾಲು ಹಾಕಿದರು.

ಸುಂಕತೊಣ್ಣೂರು ಗ್ರಾಪಂ ಅಧ್ಯಕ್ಷ ನಲ್ಲಹಳ್ಳಿ ಮಹೇಶ್ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿಗಾಗಿ ಶಾಸಕರು ಸಾಕಷ್ಟು ಶ್ರಮವಹಿಸಿದ್ದಾರೆ. ಈ ಭಾಗದ ಎಲ್ಲ್ಲ ಗ್ರಾಮಗಳಿಗೂ ನೀರು ಕೊಡುವ ಸಲುವಾಗಿ 30 ಕೋಟಿ ರೂ.ವೆಚ್ಚದಲ್ಲಿ ಏತ ನೀರಾವರಿ ಯೋಜನೆ ಆರಂಭಿಸಿದ್ದಾರೆ. ಅಂಗನವಾಡಿ, ಶಾಲಾ ಕೊಠಡಿ, ದೇವಸ್ಥಾನ ಜೀರ್ಣೊದ್ಧಾರಕ್ಕಾಗಿ ಲಕ್ಷಾಂತರ ರೂ.ಅನುದಾನ ನೀಡಿದ್ದಾರೆ. ರಸ್ತೆ ಅಭಿವೃದ್ಧಿಪಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾಗ ತಕ್ಷಣ ಸ್ಪಂದಿಸಿ ರಸ್ತೆ ಡಾಂಬರೀಕರಣಗೊಳಿಸಿದ್ದಾರೆ. ಶಾಸಕರು ಕ್ಷೇತ್ರದ ಅಭಿವೃದ್ಧಿಗಾಗಿ ಅವಿರತ ಶ್ರಮಿಸುತ್ತಿದ್ದಾರೆ. ಇತ್ತೀಚೆಗೆ ಅಭಿವೃದ್ಧಿ ವಿಚಾರಗಳ ಚರ್ಚೆಗೆಂದು ಮಾಡರಹಳ್ಳಿ ಗ್ರಾಮಕ್ಕೆ ಆಗಮಿಸಿದ್ದ ಸಂಸದರು ರಾಜ್ಯ ಸರ್ಕಾರದ ಅನುದಾನ ಕಾಮಗಾರಿಗೆ ಭೂಮಿಪೂಜೆ ನೆರವೇರಿಸುವ ಮೂಲಕ ಶಿಷ್ಟಾಚಾರ ಉಲ್ಲಂಘಿಸುವ ಜತೆಗೆ ವೇದಿಕೆಯಲ್ಲಿ ಶಾಸಕರ ವಿರುದ್ಧ ಪರೋಕ್ಷವಾಗಿ ಟೀಕಿಸಿದ್ದಾರೆ ಎಂದು ಕಿಡಿಕಾರಿದರು.

ಮಾಜಿ ಅಧ್ಯಕ್ಷ ದೇವೇಗೌಡ ಮಾತನಾಡಿ, ಮಾಡರಹಳ್ಳಿ ಕೆರೆ ಹೂಳು ತೆಗೆಯಲು 50 ಲಕ್ಷ ರೂ., ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ 14 ಲಕ್ಷ ರೂ., ಸಮುದಾಯ ಭವನ ನಿರ್ಮಾಣಕ್ಕೆ 8 ಲಕ್ಷ ರೂ. ಅನುದಾನ ಹೀಗೆ ಒಂದೇ ಗ್ರಾಮಕ್ಕೆ ಸಾಕಷ್ಟು ಅನುದಾನ ನೀಡಿದ್ದಾರೆ. ಆದರೆ, ಗ್ರಾಮದ ಕೆಲವರು ಉದ್ದೇಶಪೂರ್ವಕವಾಗಿ ಶಾಸಕರ ವಿರುದ್ಧ ಆರೋಪಗಳನ್ನು ಮಾಡಿ ಪ್ರತಿಭಟನೆ ಮಾಡಿದ್ದಾರೆ ಎಂದು ದೂರಿದರು.
ಗ್ರಾಪಂ ಮಾಜಿ ಅಧ್ಯಕ್ಷ ಕೊಡಗಳ್ಳಿ ಉಮೇಶ್, ಎಂ.ಸಿ.ಶಂಕರೇಗೌಡ, ಜವರೇಗೌಡ, ದೈತ್ಯಗೌಡ, ಚೇತನ್, ಮಾಯೀಗೌಡ, ಮಂಜುನಾಥ್, ಯೋಗರಾಜು, ಕಾಳೇಗೌಡ, ನಾರಾಯಣಿ, ವಿನೋದ್, ಪ್ರಜ್ವಲ್, ಪಿ.ನಾಗರಾಜು, ರವಿ, ಜವರೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net