ಜೆಡಿಎಸ್, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಕಾರ್ಯಕರ್ತರು

IMG-20230408-WA0088
Published on

ಆಲೂರು: ಸಕಲೇಶಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೊಡ್ಡಕಣಗಾಲು ಗ್ರಾಮದಲ್ಲಿ 100ಕ್ಕೂ ಹೆಚ್ಚು ಕಾರ್ಯಕರ್ತರು ಜೆಡಿಎಸ್ ಹಾಗೂ ಕಾಂಗ್ರೆಸ್ ತೊರೆದು ಬಿಜೆಪಿ ಮುಖಂಡ ಸಿಮೆಂಟ್ ಮಂಜುನಾಥ್ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು.


ತಾಲೂಕಿನ ದೊಡ್ಡಕಣಗಾಲು ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಸೇರ್ಪಡೆಯಾದ ಕಾರ್ಯಕರ್ತರಿಗೆ ಬಿಜೆಪಿ ಪಕ್ಷದ ಶಾಲು ಹೊದಿಸಿ ಪಕ್ಷಕ್ಕೆ ಸ್ವಾಗತಿಸಲಾಯಿತು.


ಬಿಜೆಪಿ ಮುಖಂಡ ಸಿಮೆಂಟ್ ಮಂಜುನಾಥ್ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವ ಭಾರತೀಯ ಜನತಾ ಪಕ್ಷ ದೇಶಕ್ಕೆ ನೀಡಿದ ಕೊಡುಗೆಯನ್ನು ಜನರಲ್ಲಿ ಮನವರಿಕೆ ಮಾಡಿಕೊಟ್ಟು, ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷ ಸಂಘಟನೆ ಮಾಡಬೇಕು ಎಂದ ಅವರು, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಲೂರು-ಸಕಲೇಶಪುರ ಕ್ಷೇತ್ರದ ಅಭಿವೃದ್ಧಿಗೆ ಹಲವು ಯೋಜನೆಯಡಿಯಲ್ಲಿ ಸಾಕಷ್ಟು ಹಣ ಬಿಡುಗಡೆ ಮಾಡಿದರೂ ಕ್ಷೇತ್ರದ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ. ಸರ್ಕಾರದ ಹಣ ಶಾಸಕರ ಬೆಂಬಲಿಗರ ಪಾಲಾಗಿದೆಯೇ ವಿನಃ ಅಭಿವೃದ್ಧಿ ಕಂಡಿಲ್ಲ, ಇದನ್ನರಿತ ಅವರ ಪಕ್ಷದ ಕಾರ್ಯಕರ್ತರು ಹಾಗೂ ಯುವ ಸಮುದಾಯಗಳು ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಕಡೆ ಮುಖ ಮಾಡುತ್ತಿದ್ದಾರೆ. ಇದರಿಂದ ಆಲೂರು ಸಕಲೇಶಪುರ ಕ್ಷೇತ್ರ ಸೇರಿದಂತೆ ರಾಜ್ಯದಲ್ಲಿ 150ಕ್ಕೂ ಅಧಿಕ ಸ್ಥಾನಗಳಲ್ಲಿ ಬಿಜೆಪಿ ಗೆದ್ದು ಮತ್ತೆ ಅಧಿಕಾರ ಹಿಡಿಯಲಿದೆ ಎಂದರು.


ಆಲೂರು ಕಟ್ಟಾಯ ಮಂಡಲದ ಬಿಜೆಪಿ ಅಧ್ಯಕ್ಷ ಹುಲ್ಲಳ್ಳಿ ನಾಗರಾಜ್ ಮಾತನಾಡಿ, ಎಲ್ಲ ಕಾರ್ಯಕರ್ತರು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ದೊಡ್ಡಕಣಗಾಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರುದ್ರೇಗೌಡ, ಬಿಜೆಪಿ ಕಸಬಾ ಅಧ್ಯಕ್ಷ ನಟರಾಜ್, ಶಕ್ತಿ ಕೇಂದ್ರ ಅಧ್ಯಕ್ಷ ಧ್ರುವ, ಯೂತ್ ಉಪಾಧ್ಯಕ್ಷ ಕಿರಣ್, ಹಿರಿಯ ಮುಖಂಡ ದೊಡ್ಡಕಣಗಾಲು ಲೋಕೇಶ್, ಬೈರಾಪುರ ಗ್ರಾಮ ಪಂಚಾಯಿತಿ ಸದಸ್ಯ ಗಣೇಶ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net