

ಕೆ.ಆರ್.ಪೇಟೆ: ನನಗೆ ಪಕ್ಷ ಕಟ್ಟುವ ಶಕ್ತಿಯೂ ಇದೆ, ಉಳಿಸಿಕೊಳ್ಳುವ ಶಕ್ತಿಯೂ ಇದೆ. ತಾಲೂಕಿನ ಜೆಡಿಎಸ್ ಕಾರ್ಯಕರ್ತರು ಆ ಶಕ್ತಿಯನ್ನು ನನಗೆ ನೀಡಿದ್ದಾರೆ. ಜೆಡಿಎಸ್ ಕಾರ್ಯಕರ್ತರ ಆಶೀರ್ವಾದ ನನ್ನ ಮೇಲೆ ಇರುವವರೆಗೂ ಪ್ರಾಮಾಣಿಕವಾಗಿ ಪಕ್ಷ ಸಂಘಟಿಸುತ್ತೇನೆ ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದರು.
ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಮನ್‌ಮುಲ್ ಚುನಾವಣೆ ಹಿನ್ನೆಲೆ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಮನ್‌ಮುಲ್ ನಿರ್ದೇಶಕ ಡಾಲು ರವಿ ಜೆಡಿಎಸ್ ಸೇರಿದ ಸಂದರ್ಭದಲ್ಲಿ ಮುಂದಿನ ಮನ್ ಮುಲ್ ಚುನಾವಣೆಗೆ ರವಿ ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡಬೇಕು ಎಂದು ವರಿಷ್ಠರಲ್ಲಿ ಮನವಿ ಮಾಡಿದ್ದೆ. ಜತೆಗೆ ಮನ್‌ಮುಲ್ ಅಧ್ಯಕ್ಷ ಸ್ಥಾನಕ್ಕೆ ರಾಮಚಂದ್ರ ರಾಜೀನಾಮೆ ನೀಡಿದ ಸಂದರ್ಭದಲ್ಲೂ ಡಾಲುರವಿ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬಳಿ ಬೇಡಿಕೆ ಇಟ್ಟಿದ್ದೆ. ಆದರೆ ನೆರವೇರಲಿಲ್ಲ. ಆದರೂ ಜೆಡಿಎಸ್‌ನಲ್ಲಿದ್ದುಕೊಂಡು ಈ ಹಿಂದೆ ಮನ್‌ಮುಲ್ ಚುನಾವಣೆ ವೇಳೆ ಡಾಲುರವಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿದರು.
ಆದರೂ ಇದ್ಯಾವುದನ್ನು ಪರಿಗಣಿಸದೆ ರವಿಯ ಅವರನ್ನು ಜತೆಯಲ್ಲಿ ಕರೆದುಕೊಂಡು ಪಕ್ಷದ ಚಟುವಟಿಕೆಗಳು ಸೇರಿದಂತೆ ಎಲ್ಲ ಕಾರ್ಯಕ್ರಮಗಳಿಗೂ ಸಕ್ರಿಯವಾಗಿ ಭಾಗವಹಿಸಿದ್ದೆ. ಆದರೆ ದಿನಕಳೆದಂತೆ ಡಾಲುರವಿ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿಕೊಂಡು ಸಾರ್ವಜನಿಕವಾಗಿ ಅವಾಚ್ಯ ಶಬ್ದ ಬಳಸಿ ನನ್ನ ವಿರುದ್ಧ ಮಾತನಾಡಿದಾಗ ಅವರ ಸಂಪರ್ಕ ಕಡಿತಗೊಂಡಿತು ಎಂದು ಡಾಲುರವಿ ವಿರುದ್ಧ ಕಿಡಿಕಾರಿದರು.
ಇನ್ನು ಎರಡನೇ ಅಭ್ಯರ್ಥಿಯನ್ನಾಗಿ ಮನ್ ಮುಲ್ ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್ ಅವರನ್ನು ಆಯ್ಕೆ ಮಾಡಲಾಗಿತ್ತು. ಒಂದು ವಾರ ಸಮಯ ಕೇಳಿ ಹೋದ ಹರೀಶ್ ಎರಡು ತಿಂಗಳಾದರೂ ಹತ್ತಿರಕ್ಕೆ ಸುಳಿಯಲಿಲ್ಲ ಇವರೆಲ್ಲರೂ ಯಾರ ಸಂಪರ್ಕದಲ್ಲಿದ್ದಾರೆ ಎಂಬುದು ನನಗೆ ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಮಂಜು, ಈ ಎಲ್ಲ ಬೆಳವಣಿಗೆಗಳಿಂದ ಮನನೊಂದು ಅಂತಿಮವಾಗಿ ನಾನೇ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಘೋಷಿಸಿದರು.
ನನ್ನ ವಿರುದ್ಧ ಆರೋಪಗಳು, ಟೀಕೆಗಳು ಕೇಳಿ ಬಂದಿವೆ ಆದರೆ ನಾನು ಕೂಡ ಎಲ್ಲ ಹಂತವನ್ನು ದಾಟಿ ಬಂದಿದ್ದೇನೆ. ಇದನ್ನು ಪಕ್ಷ ವಿರೋಧಿಗಳು ತಿಳಿದುಕೊಳ್ಳಬೇಕು ಎಂದು ತಮ್ಮ ವಿರೋಧಿಗಳಿಗೆ ಟಾಂಗ್ ನೀಡಿದರು.
ಇದಕ್ಕೂ ಮುನ್ನ ಸಭೆಯಲ್ಲಿ ಸೇರಿದ್ದ ಮುಖಂಡರು, ಕಾರ್ಯಕರ್ತರು ಶಾಸಕರನ್ನು ನೀವೇ ಮನ್‌ಮುಲ್ ಅಭ್ಯರ್ಥಿಯಾಗಬೇಕೆಂದು ಒತ್ತಡ ಹಾಕಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ನಾನೇ ಅಭ್ಯರ್ಥಿಯಾಗಬೇಕೆಂಬ ಆಸೆ ನನಗಿಲ್ಲ. ನಮ್ಮ ಕಾರ್ಯಕರ್ತರು ಯಾರೇ ಸ್ಪರ್ಧೆ ಮಾಡಿದರೂ ನಾನೇ ಅಭ್ಯರ್ಥಿ ಎಂಬ ರೀತಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು.
ಸಭೆಯಲ್ಲಿದ್ದ ಮುಖಂಡರು ಮತ್ತು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅಂತಿಮವಾಗಿ ಶಾಸಕ ಎೆಚ್.ಟಿ.ಮಂಜು ಹಾಗೂ ನಾಟನಹಳ್ಳಿ ಮಹೇಶ್ ಅವರನ್ನು ಮನ್ ಮುಲ್ ಚುನಾವಣೆಗೆ ಅಭ್ಯರ್ಥಿಗಳನ್ನಾಗಿ ಘೋಷಣೆ ಮಾಡಲಾಯಿತು.
ಸಭೆಯಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಮ್, ಜಿಲ್ಲಾ ಉಪಾಧ್ಯಕ್ಷ ನಾಗೇಶ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಆಶೋಕ್, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ರೇಖಾ, ಹೋಬಳಿ ಅಧ್ಯಕ್ಷರಾದ ವಸಂತಕುಮಾರ್, ರವಿ, ಸ್ವಾಮಿಗೌಡ, ಬಸವಲಿಂಗಪ್ಪ, ನಂದೀಶ್, ಮುಖಂಡರಾದ ಹುಲ್ಲೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್, ಟಿಎಪಿಸಿಎಂಎಸ್ ನಿರ್ದೇಶಕ ಬಲದೇವ್ ಹಾಜರಿದ್ದರು.