

ಹಾಸನ: ಕಾಂಗ್ರೆಸ್ ಪಕ್ಷಕ್ಕೆ ನಿಜಕ್ಕೂ ರಾಜ್ಯದಲ್ಲಿ ಕೋಮವಾದಿ ಪಕ್ಷ ವಿರೋಧಿಸುವ ಬದ್ಧತೆ ಇದ್ದರೆ ಪ್ರಾದೇಶಿಕ ಪಕ್ಷವಾದ ಜಾತ್ಯತೀತ ಜನತಾದಳವನ್ನು ವಿನಾಕಾರಣ ಟೀಕಿಸುವುದನ್ನು ಬಿಡಲಿ ಎಂದು ಜೆಡಿಎಸ್ ನಾಯಕರಾದ ಹೊಳೆನರಸೀಪುರ ಶಾಸಕ ಎಚ್.ಡಿ. ರೇವಣ್ಣ ಆಗ್ರಹಿಸಿದರು.
ಜಾತ್ಯತೀತ ಜನತಾದಳವನ್ನು ಬಿಜೆಪಿಯ ಬಿ ಟೀಮ್ ಎಂಬುದಾಗಿ ಕಾಂಗ್ರೆಸ್ ಟೀಕಿಸುತ್ತಿದೆ. ಆದರೆ ವಾಸ್ತವವಾಗಿ ಪ್ರಾದೇಶಿಕ ಪಕ್ಷವನ್ನು ಮುಗಿಸಲು ಎರಡೂ ರಾಷ್ಟ್ರೀಯ ಪಕ್ಷಗಳು ಒಂದಾಗಿವೆ ಎಂದು ನಗರದ ಸಂಸದರ ಭವನದಲ್ಲಿ ಸೋಮವಾರ ಸುದ್ದಿಗೋಷ್ಟಿ ನಡೆಸಿ ಆಪಾದಿಸಿದರು.
ಮೊನ್ನೆ ಹಾಸನದಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯಲ್ಲಿ ‘ಜೆಡಿಎಸ್‌ಗೆ ಮತ ಹಾಕಿದರೆ ಬಿಜೆಪಿಗೆ ಮತ ಹಾಕಿದಂತೆ ಎಂಬುದಾಗಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕೆ ಮಾಡಿ ಹೋಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿಯೂ ಇದೇ ರೀತಿ ಹಾಸನದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ‘ಜೆಡಿಎಸ್ ಬಿಜೆಪಿಯ ಬಿ ಟೀಮ್’ ಎಂಬುದಾಗಿ ರಾಹುಲ್ ಗಾಂಧಿ ಬಾಯಲ್ಲಿ ಹೇಳಿಸಿ ಹೋದರು. ಅಲ್ಪಸಂಖ್ಯಾತ ಮತದಾರರನ್ನು ದಾರಿತಪ್ಪಿಸುವ ದುರುದ್ದೇಶದಿಂದ ಈ ರೀತಿ ಟೀಕೆ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ಜೆಡಿಎಸ್ ಕಂಡರೆ ಭಯ:
ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ಕಂಡರೆ ಭಯ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಪಂಚರತ್ನ ಯಾತ್ರೆಯ ಯಶಸ್ಸನ್ನು ನೋಡಿ ಈ ಎರಡೂ ಪಕ್ಷಗಳು ಆತಂಕಗೊಂಡಿವೆ. ಹಾಗಾಗಿ ಜೆಡಿಎಸ್ ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿವೆ. ಎರಡೂ ಪಕ್ಷಗಳು ಜನರ ವಿಶ್ವಾಸ ಕಳೆದುಕೊಂಡಿದ್ದು, ಸುಳ್ಳು ಭರವಸೆಗಳನ್ನು ನೀಡಿ ಮತ ಸೆಳೆಯಲು ಪ್ರಯತ್ನಿಸುತ್ತಿವೆ. ಪ್ರತಿ ಮನೆಗೆ ತಿಂಗಳಿಗೆ 200 ಯುನಿಟ್ ಉಚಿತ ವಿದ್ಯುತ್ ನೀಡಲು 9 ಸಾವಿರ ಕೋಟಿ ರೂ. ಬೇಕಾಗುತ್ತದೆ ಎಂಬುದಾಗ ಈಗಿನ ಇಂಧನ ಸಚಿವರೇ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷವು ಈಡೇರಿಸಲು ಆಗದ ಭರವಸೆಗಳನ್ನು ನೀಡಿ ಜನರನ್ನು ವಂಚಿಸಲು ಮುಂದಾಗಿದೆ.
ಕರ್ನಾಟಕ ಕಾಂಗ್ರೆಸ್ ವಿಸರ್ಜನೆ ಮಾಡಲಿ:
ಜೆೆಡಿಎಸ್ ಪಕ್ಷವನ್ನು ಚುನಾವಣೆಗೆ ಮುನ್ನವೇ ವಿಸರ್ಜನೆ ಮಾಡಲಿ ಎಂಬುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಯಾವುದೇ ಸೈದ್ಧಾಂತಿಕ ಬದ್ಧತೆ ಇಲ್ಲದ ಸಿದ್ದರಾಮಯ್ಯನವರಿಗೆ ಜೆಡಿಎಸ್ ವಿರುದ್ಧ ಮಾತನಾಡುವ ನೈತಿಕ ಹಕ್ಕಿಲ್ಲ. ಕೋಲಾರದಲ್ಲಿ ಮುನಿಯಪ್ಪ ಅವರನ್ನು, ತುಮಕೂರಿನಲ್ಲಿ ದೇವೇಗೌಡರನ್ನು ಸೋಲಿಸಿದ್ದು ಯಾರು ಎಂಬುದನ್ನು ಅವರು ಮೊದಲು ಹೇಳಲಿ. ಕರ್ನಾಟಕ ಕಾಂಗ್ರೆಸ್‌ಗೆ ಯಾವುದೇ ಸೈದ್ಧಾಂತಿಕ ಬದ್ಧತೆ ಇಲ್ಲ. ಜೆಡಿಎಸ್ ಅಭ್ಯರ್ಥಿಗಳನ್ನು ಸೋಲಿಸಲು ಕೋಮುವಾದಿ ಪಕ್ಷಕ್ಕೆ ಬೆಂಬಲ ನೀಡಿರುವ ಹಲವು ಉದಾಹರಣೆಗಳಿವೆ. ಭಾರತವನ್ನು ಒಗ್ಗೂಡಿಸಲು ಪಾದಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿಯವರಿಗೆ ನಿಜಕ್ಕೂ ಕೋಮುವಾದಿ ಶಕ್ತಿಗಳನ್ನು ಸೋಲಿಸಬೇಕೆಂಬ ಬದ್ಧತೆ ಇದ್ದರೆ ಮೊದಲು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆ ಮಾಡಲಿ ಎಂದು ಆಗ್ರಹಿಸಿದರು.
ಬಿಜೆಪಿ ಜೊತೆ ಹೋಗಿದ್ದರೆ ಐದು ವರ್ಷ ನಮ್ಮದೇ ಸರ್ಕಾರ ಇರ್ತ್ತಿತ್ತು:
ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರ ಇಡಲು ಕೊಟ್ಟ ಅವಕಾಶವನ್ನು ಜೆಡಿಎಸ್ ಉಳಿಸಿಕೊಳ್ಳಲಿಲ್ಲ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾಡಿದ್ದ ಟೀಕೆಗೆ ಪ್ರತಿಕ್ರಿಯಿಸಿದ ಎಚ್.ಡಿ. ರೇವಣ್ಣ, ‘ಅಧಿಕಾರಕ್ಕಾಗಿ ನಾವೇನು ಅವರ ಮನೆಬಾಗಿಲಿಗೆ ಹೋಗಿರಲಿಲ್ಲ. ಅವರೇ ನಮ್ಮ ಬಳಿಗೆ ಬಂದು ಕೇಳಿದರು. ನಾವು ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಲು ಒಪ್ಪಿದ್ದೆವು. ಆದರೆ ಕುಮಾರಸ್ವಾಮಿಯೇ ಸಿಎಂ ಅಗಲಿ ಎಂದು ಒತ್ತಾಯಿಸಿದರು. ಅದಾದ ನಂತರ ಸರ್ಕಾರ ಉರುಳಿಸಲು 17 ಜನರನ್ನು ಕಳುಹಿಸಿಕೊಟ್ಟವರು ಯಾರು ಎಂಬುದು ಜನರಿಗೆ ಗೊತ್ತಿದೆ. ಈಗ ಸುಮ್ಮನೇ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ’ ಎಂದು ಕಿಡಿಕಾರಿದರು.
ಕಳೆದ ಚುನಾವಣೆ ಫಲಿತಾಂಶ ಬಂದ ನಂತರ ‘ಐದು ವರ್ಷಗಳ ಕಾಲ ನೀವೇ ಮುಖ್ಯಮಂತ್ರಿ ಆಗಿರಿ’ ಎಂಬುದಾಗಿ ಭರವಸೆ ನೀಡಿ ಜೆಡಿಎಸ್‌ಗೆ ಬೆಂಬಲ ನೀಡಲು ಬಿಜೆಪಿ ಮುಂದೆ ಬಂದಿತ್ತು. ಹಾಗೇನಾದರೂ ಮಾಡಿದ್ದರೆ ಇಂದಿಗೂ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಆಗಿರುತ್ತಿದ್ದರು. ಆದರೆ ಸೈದ್ಧಾಂತಿಕ ಬದ್ಧತೆಯಿಂದ ನಾವು ಒಪ್ಪಲಿಲ್ಲ ಎಂದರು.
ಫೆ.3 ಅರಸೀಕೆರೆಯಲ್ಲಿ ಕಾರ್ಯಕರ್ತರ ಸಭೆ:
ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಜೆಡಿಎಸ್ ಅಧ್ಯಕ್ಷ, ಬೇಲೂರು ಶಾಸಕ ಕೆ.ಎಸ್. ಲಿಂಗೇಶ್ ಮಾತನಾಡಿ, ಈಗಾಗಲೇ ಬೇಲೂರು, ಸಕಲೇಶಪುರ, ಆಲೂರು ಮತ್ತು ಹೊಳೆನರಸೀಪುರ ತಾಲೂಕುಗಳಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಸಲಾಗಿದೆ. ಅದೇ ರೀತಿ ಫೆ.3 ರಂದು ಅರಸೀಕೆರೆಯಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ಕರೆಯಲಾಗಿದೆ. ಆ ಸಭೆಯಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರೂ ಭಾಗವಹಿಸಲಿದ್ದಾರೆ. ಶಾಸಕ ಕೆ.ಎಂ. ಶಿವಲಿಂಗೇಗೌಡರನ್ನೂ ಆಹ್ವಾನಿಸಲಾಗಿದೆ ಎಂದು ತಿಳಿಸಿದರು.
ಪಕ್ಷದಲ್ಲಿರುವ ಗೊಂದಲವನ್ನು ಅಂದಿನ ಸಭೆಯಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳಲಾಗುವುದು. ಅರಕಲಗೂಡು ಕ್ಷೇತ್ರದಲ್ಲೂ ಕೆಲ ಕಾರ್ಯಕರ್ತರು ಶಾಸಕ ಎ.ಟಿ. ರಾಮಸ್ವಾಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅರಸೀಕೆರೆ ಸಭೆಯ ನಂತರ ಉಳಿದ ತಾಲೂಕುಗಳಲ್ಲೂ ಕಾರ್ಯಕರ್ತರ ಸಭೆಗೆ ದಿನ ನಿಗದಿಪಡಿಸಿ, ಗೊಂದಲಗಳನ್ನು ಪರಿಹರಿಸಿಕೊಳ್ಲಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ ಮತ್ತು ಸಕಲೇಶಪುರ ಶಾಸಕ ಎಚ್.ಕೆ. ಕುಮಾರಸ್ವಾಮಿ ಉಪಸ್ಥಿತರಿದ್ದರು. ಪಕ್ಷದೊಂದಿಗೆ ಅಂತರ ಕಾಯ್ದುಕೊಂಡಿರುವ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಮತ್ತು ಅರಕಲಗೂಡು ಶಾಸಕ ಎ.ಟಿ. ರಾಮಸ್ವಾಮಿ ಗೈರಾಗಿದ್ದರು.