ಹುಬ್ಬಳ್ಳಿ : ಗೋವಾ ಹಾಗೂ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ನಮ್ಮ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಮಾಡಲಾಗಿದೆ. ಆದರೆ, ಗೋವಾದಲ್ಲಿ ಯಾವುದೇ ರೀತಿಯ ನಿಷೇಧ ಇಲ್ಲ. ಆ ರಾಜ್ಯದವರಿಗೆ ಗೋವು ತಾಯಿ ಅಲ್ಲವೇ ? ಎಂದು ಜೆಡಿಎಸ್ ರಾಜ್ಯ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ವ್ಯಂಗ್ಯವಾಡಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಗೋಹತ್ಯೆ ನಿಷೇಧ ಕಾಯ್ದೆ ಸೇರಿದಂತೆ ಜನರಿಗೆ ಅನಾನುಕೂಲವಾಗಿರುವ ಎಲ್ಲ ಕಾಯ್ದೆಗಳನ್ನು ಹಿಂಪಡೆಯಲಾಗುವುದು ಎಂದು ಭರವಸೆ ನೀಡಿದರು.
ಚುನಾವಣೆ ಸಮೀಪಿಸಿದಾಗ ಗಡಿ ವಿವಾದ, ಮಹದಾಯಿ ವಿವಾದಗಳು ಏಳುವುದು ಸಹಜ. ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಒಂದೇ ಪಕ್ಷದ ಮೂರು ರಾಜ್ಯಗಳು ಚುನಾವಣೆ ನೆಪದಲ್ಲಿ ನೂರಿ ಕುಸ್ತಿ ಆಡುವುದನ್ನು ಬಿಡಬೇಕು. ಜನರಿಗೆ ಗಡಿ ವಿವಾದ ಬೇಕಾಗಿಲ್ಲ. ಆದರೆ, ರಾಜಕಾರಣಿಗಳಿಗೆ ವಿವಾದ ಬಗೆಹರಿಯುವುದು ಬೇಕಾಗಿಲ್ಲ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸ್ವತಂತ್ರವಾಗಿ ಅಧಿಕಾರ ನಡೆಸಲು ಕೇಶವ ಕುಂಜ ಬಿಡುತ್ತಿಲ್ಲ. ಮಾಜಿ ಸಿಎಂ ದಿ. ಎಸ್.ಆರ್. ಬೊಮ್ಮಾಯಿ ಅವರ ಸಮಯದಲ್ಲಿ ಬಸವರಾಜ ಬೊಮ್ಮಾಯಿ ನನ್ನ ಕಾರ್ಯದರ್ಶಿ ಆಗಿದ್ದರು. ಅವರಿಗೆ ಅಭಿವೃದ್ಧಿ ಮಾಡುವ ಇಚ್ಛೆ ಇದ್ದರೂ, ಕೆಲಸ ಮಾಡಲು ಆಗುತ್ತಿಲ್ಲ ಎಂದು ಟೀಕಿಸಿದರು.
ಮುಸ್ಲಿಂರಿಗೆ ಪ್ರತ್ಯೇಕ ಕಾಲೇಜು ಬೇಕಾಗಿಲ್ಲ. ಪ್ರತ್ಯೇಕ ಕಾಲೇಜುಗಳಿಗೆ ವಕ್ಪ ಬೋರ್ಡ್ನವರು ಬೆಂಬಲ ನೀಡುವುದು ತಪು್ಪ. ಎಲ್ಲ ಸಮಾಜದ ವಿದ್ಯಾರ್ಥಿಗಳು ಓದುವ ಕಾಲೇಜುಗಳು ಇರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.