

* ತಾಲೂಕಿನಲ್ಲಿ ಕುಂದುಕೊರತೆಗಳ ಅಹವಾಲು ಸಭೆಯಲ್ಲಿ ಯೋಜನೆ ಬಗ್ಗೆ ಸಾಕಷ್ಟು ದೂರು !
* ಯೋಜನೆಯ ಅವಾಂತರಗಳು ಅನಾವರಣ
ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ಕೇಂದ್ರ ಹಾಗೂ ರಾಜ್ಯಸರ್ಕಾರಗಳ ಸಹಭಾಗಿತ್ವದ ಬಹು ಮಹತ್ವಾಕಾಂಕ್ಷೆ ಯೋಜನೆಯಾದ ಜಲಜೀವನ್ ಮಿಷನ್ (ಜೆಜೆಎಂ) ಕಾಮಗಾರಿ ತಾಲೂಕಿನಲ್ಲಿ ಸಂಪೂರ್ಣವಾಗಿ ಹಳ್ಳ ಹಿಡಿದಿದೆಯೇ?... ಇಂತಹುದೊಂದು ಪ್ರಶ್ನೆ ಈಗ ಮೂಡಿದೆ.
ಹೌದು..., ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಈ ಯೋಜನೆ ಸಂಪೂರ್ಣ ಕಳಪೆಯಾಗಿದ್ದು, ಆರಂಭದಿಂದಲೇ ಈ ಬಗ್ಗೆ ಅಪಸ್ಪರಗಳು ಕೇಳಿಬಂದಿದ್ದವು. ಈಗ, ಶಾಸಕ ಸಿ.ಪಿ.ಯೋಗೇಶ್ವರ್ ನಡೆಸುತ್ತಿರುವ ಕುಂದುಕೊರತೆಗಳ ಅಹವಾಲು ಸಭೆಯಲ್ಲಿ ಈ ಯೋಜನೆ ಬಗ್ಗೆ ಸಾಕಷ್ಟು ದೂರು ಕೇಳಿ ಬರುತ್ತಿವೆ. ಸಭೆಗಳಲ್ಲಿ ಯೋಜನೆಯ ಅವಾಂತರಗಳು ಅನಾವರಣಗೊಳ್ಳುತ್ತಿವೆ.
ಕೆಲದಿನಗಳಿಂದ ಕ್ಷೇತ್ರದ ಶಾಸಕ ಸಿ.ಪಿ.ಯೋಗೇಶ್ವರ್ ಗ್ರಾಪಂಮಟ್ಟದಲ್ಲಿ ಇ-ಸ್ವತ್ತು ಆಂದೋಲನ ಹಾಗೂ ಸಾರ್ವಜನಿಕ ಕುಂದುಕೊರತೆಗಳ ಅಹವಾಲು ಸಭೆ ನಡೆಸುತ್ತಿದ್ದು, ಪ್ರತಿ ಸಭೆಯಲ್ಲೂ ಜಲಜೀವನ್ ಮಿಷನ್ ಕಾಮಗಾರಿ ಬಗ್ಗೆ ಅಪಸ್ವರಗಳು ಕೇಳಿಬರುವುದು ಸಾಮಾನ್ಯ ಎನಿಸಿದೆ. ಪ್ರತಿ ಗ್ರಾಪಂನಲ್ಲಿಯೂ ಈ ಯೋಜನೆಯ ಅಧ್ವಾನಗಳ ಬಗ್ಗೆ ಸಾರ್ವಜನಿಕರು ಶಾಸಕರ ಗಮನಸೆಳೆಯುತ್ತಿದ್ದಾರೆ. ಯೋಜನೆಯ ಜಾರಿ ಸಂಪೂರ್ಣ ಕಳಪೆ ಎಂಬುದು ನಾಗರಿಕರ ದೂರಾಗಿದೆ. ಈ ಬಗ್ಗೆ ಎಲ್ಲ ಸಭೆಗಳಲ್ಲೂ ಯೋಜನೆ ನಿರ್ವಹಣೆಯ ಅಧಿಕಾರಿಯನ್ನು ಶಾಸಕರು ತರಾಟೆಗೆ ತೆಗೆದುಕೊಳ್ಳುವುದು ಸಾಮಾನ್ಯ ಎನಿಸಿದೆ.
ಕೇಂದ್ರ ಸರ್ಕಾರ 2019ರ ಆಗಸ್ಟ್‌ನಲ್ಲಿ ಜಲಜೀವನ್ ಮಿಷನ್ (ಜೆಜೆಎಂ) ಯೋಜನೆಯನ್ನು ಘೋಷಿಸಿತ್ತು. ಎಲ್ಲ ಗ್ರಾಮೀಣ ಕುಟುಂಬಗಳಿಗೆ ಕೊಳವೆ ನೀರು ಸರಬರಾಜು (ಹರ್‌ಘರ್‌ಜಲ್) ಒದಗಿಸುವ ನಿಟ್ಟಿನಲ್ಲಿ
ನದಿಮೂಲದ ಸ್ವಚ್ಛ ನೀರನ್ನು ಪ್ರತಿ ಮನೆಗೆ ಪೂರೈಸಲು ಕೊಳಾಯಿ ಸಂಪರ್ಕ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿತ್ತು. ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಾಗೂ ಗ್ರಾಪಂಗಳ 15ನೇ ಹಣಕಾಸು ಆಯೋಗದ ಅನುದಾನ ಬಳಸಿಕೊಳ್ಳಲಾಗಿದೆ. ಆದರೆ, ಈ ಬಹು ನಿರೀಕ್ಷಿತ ಕಾಮಗಾರಿ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಗುತ್ತಿಗೆದಾರರ ಹಣ ಬಾಕತನಕ್ಕೆ ಬಲಿಯಾಗಿದೆ ಎನ್ನಬಹುದು.
ಈ ಯೋಜನೆಯ ಬಗ್ಗೆ ಪ್ರಾರಂಭದಲ್ಲೇ ತಾಲೂಕಿನಲ್ಲಿ ಅಪಸ್ವರ ಕೇಳಿಬಂದಿತ್ತು. ಜಿಪಂನ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ವತಿಯಿಂದ ಈ ಯೋಜನೆ ಅನುಷ್ಠಾನವಾಗಿದ್ದು, ಕಳಪೆ ಸಾಮಗ್ರಿಗಳನ್ನು ಬಳಸಲಾಗುತ್ತಿದೆ ಎನ್ನುವ ದೂರು ಜೋರಾಗಿತ್ತು. ಅಧಿಕಾರಿಗಳು ಸ್ಥಳದಲ್ಲಿ ನಿಂತು ಕಾಮಗಾರಿಯ ಗುಣಮಟ್ಟ ನೋಡಿಕೊಳ್ಳಲು ನಿರ್ಲಕ್ಷ್ಯವಹಿಸುತ್ತಿದ್ದಾರೆ. ಇದರ ಲಾಭ ಪಡೆಯುತ್ತಿರುವ ಗುತ್ತಿಗೆದಾರರು ಕಳಪೆ ಸಾಮಗ್ರಿ ಬಳಸಿಕೊಂಡು ಯಾಮಾರಿಸುವ ಕೆಲಸ ಮಾಡುತ್ತಿದ್ದಾರೆ ಎಂಬುದು ಹಲವರ ಆರೋಪವಾಗಿದ್ದವು. ಇದೀಗ, ಬಹುತೇಕ ಗ್ರಾಮಗಳಲ್ಲಿ ಕಾಮಗಾರಿ ಮುಕ್ತಾಯವಾಗಿದ್ದು, ಕಾಮಗಾರಿಯ ಬಗ್ಗೆ ವ್ಯಾಪಕ ದೂರುಗಳು ಕೇಳಿಬರುತ್ತಿವೆ.
ಶಾಸಕರ ಸಭೆಗಳಲ್ಲಿ ಜಲಜೀವನ್ ಅಧ್ವಾನದ ವಿಚಾರ ಜೋರಾಗಿದ್ದು, ಎಲ್ಲ ಸಭೆಗಳಲ್ಲೂ ಯೋಜನೆ ಅನುಷ್ಠಾನ ನಿರ್ವಹಣೆ ಮಾಡಿರುವ ಜಿಪಂ ಎಇಇ ಮಧುಸೂಧನ್ ಅವರನ್ನು ಶಾಸಕರು ತೀವ್ರ ತರಾಟೆಗೆ ಪಡೆಯುತ್ತಿದ್ದಾರೆ. ಇತ್ತೀಚಿನ ಸಭೆಯಲ್ಲಿ ‘ನಮ್ಮ ಜನರಿಗೆ ಯಾಕಯ್ಯ ಅನ್ಯಾಯ ಮಾಡುತ್ತಿದ್ದೀಯಾ..., ನಮ್ಮ ಜನ ನೀರಿಲ್ಲದೇ ಸಾಯುವ ಸ್ಥಿತಿ ತಂದಿದ್ದೀಯಾ’ ಎಂದು ತರಾಟೆಗೆ ತೆಗೆದುಕೊಂಡಿದ್ದರು. ಸೋಮವಾರ ತಿಟ್ಟಮಾರನಹಳ್ಳಿ ಗ್ರಾಪಂನಲ್ಲೂ ಈ ಯೋಜನೆಯ ಬಗ್ಗೆಯೇ ಪ್ರಮುಖ ಚರ್ಚೆ ನಡೆಯಿತು. ಈ ವೇಳೆ ಅಧಿಕಾರಿ ವಿರುದ್ಧ ಕಿಡಿಕಾರಿದ ಯೋಗೇಶ್ವರ್, ‘ಎಲ್ಲ ಊರಿನಲ್ಲೂ ನೀನು ಅಧ್ವಾನ ಮಾಡಿದ್ದೀಯಾ.., ಇಷ್ಟರಲ್ಲೇ ನೀನು ಜೈಲಿಗೆ ಹೋಗುತ್ತೀಯಾ ಹುಷಾರ್’ ಎಂದು ಎಚ್ಚರಿಕೆ ನೀಡಿದ್ದರು.
ತಾಲೂಕಿನಲ್ಲಿ ಜಲಜೀವನ್ ಕಾಮಗಾರಿಯ ಬಗ್ಗೆ ಸಾಕಷ್ಟು ಆರೋಪಗಳಿದ್ದು, ಶಾಸಕರ ಸಭೆಗಳಲ್ಲೂ ಇದು ಅನಾವರಣಗೊಳ್ಳುತ್ತಿದೆ. ಕೇವಲ ಒಂದು ಗ್ರಾಮವಲ್ಲದೇ ಇಡೀ ತಾಲೂಕಿನಲ್ಲಿ ಯೋಜನೆ ಹಳ್ಳ ಹಿಡಿದಿರುವುದು ಈ ಮೂಲಕ ಸಾಬೀತಾಗಿದೆ. ಕಾಮಗಾರಿಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆದರೆ, ಬ್ರಹ್ಮಾಂಡ ಭ್ರಷ್ಟಾಚಾರ ಹೊರಬರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಕ್ಷೇತ್ರದ ಶಾಸಕರು ಈ ಬಗ್ಗೆ ಮುತುವರ್ಜಿ ವಹಿಸಿ ಕಾಮಗಾರಿಯ ಲೋಪಗಳಿಗೆ ನ್ಯಾಯ ಒದಗಿಸಲಿ ಎಂಬುದು ಎಲ್ಲರ ಅನಿಸಿಕೆಯಾಗಿದೆ.