ಜೆಜೆಎಂ ಪರಿಣಾಮಕಾರಿ ಜಾರಿಗೊಳಿಸಿ

Prabhu Chavan
Published on

ಬೀದರ್: ಜಲ ಜೀವನ ಮಿಷನ್ (ಜೆಜೆಎಂ) ಯೋಜನೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿ ಜಾರಿಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಎಲ್ಲ ಕಾಮಗಾರಿಗಳು ನಿಗದಿತ ಅವಧಿಯೊಳಗೆ ಉತ್ತಮ ಗುಣಮಟ್ಟದಿಂದ ಮುಗಿಸಬೇಕು. ಯೋಜನೆ ಅನುಷ್ಠಾನದಲ್ಲಿ ಯಾವುದೇ ರೀತಿಯ ದೂರುಗಳು ಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಮಂಗಳವಾರ ಇಲ್ಲಿ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 80 ಕೋಟಿ ರೂ. ಅನುದಾನದ ಕಾಮಗಾರಿ ಅನುಷ್ಠಾನಗೊಳಿಸಲಾಗುತ್ತಿದೆ. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ ಶೇ. 37.50ರಷ್ಟು, ಗ್ರಾಪಂ ಶೇ.15ರಷ್ಟು ಮತ್ತು ಜನರ ವಂತಿಗೆಯಿಂದ ಬಂದ ಹಣ ಶೇ.10ರಷ್ಟು ಇರಲಿದೆ. ಜಿಲ್ಲೆಯ ಪ್ರತಿ ಮನೆ-ಮನೆಗೆ ನಳಗಳ ಮೂಲಕ ನೀರು ಸರಬರಾಜು ಮಾಡುವ ಗುರಿಯಿದೆ ಎಂದು ಹೇಳಿದ್ದಾರೆ.

ಜಿಲ್ಲೆಯ 135 ಗ್ರಾಮಗಳಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಮೊದಲ ಹಂತದಲ್ಲಿ ಜಲಮೂಲ ಹೆಚ್ಚಿರುವ ಹಳ್ಳಿಗಳನ್ನು ಆಯ್ಕೆ ಮಾಡಲಾಗಿದೆ. ಈಗಾಗಲೇ 63 ಕಡೆಗಳಲ್ಲಿ ಯೋಜನೆ ಆರಂಭಗೊಂಡಿದೆ. ಕೆಲಸ ಆರಂಭಿಸದ ಕಡೆಗಳಲ್ಲಿ ಶೀಘ್ರ ಕಾಮಗಾರಿ ಶುರು ಮಾಡಬೇಕು. ಚಾಲ್ತಿಯಲ್ಲಿರುವ ಕಾಮಗಾರಿಗಳು ಶೀಘ್ರ ಪೂರ್ಣಗೊಳಿಸಿ ಜನತೆಗೆ ಅನುಕೂಲ ಕಲ್ಪಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಈ ಹಿಂದೆ ನೀರು ಸರಬರಾಜು ಕಾಮಗಾರಿಗಳು ಕಳಪೆ ನಡೆದಿರುವ ಬಗ್ಗೆ ದೂರು ಬಂದಿದೆ. ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಕಾಮಗಾರಿ ಮಾಹಿತಿ ಪಡೆಯದೆ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಕಾಮಗಾರಿ ಸುವ್ಯವಸ್ಥಿತ ನಡೆಯುತ್ತಿರುವ ಬಗ್ಗೆ ಪ್ರತಿ ದಿನ ವಾಟ್ಸ್ ಆ್ಯಪ್ ಮೂಲಕ ಮಾಹಿತಿ ನೀಡಬೇಕು.| ಪ್ರಭು ಚವ್ಹಾಣ್, ಜಿಲ್ಲಾ ಉಸ್ತುವಾರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net