ಜೆಎಸ್‌ಎಸ್ ವಿಜ್ಞಾನ, ತಾಂತ್ರಿಕ ವಿವಿಗೆ ವಜ್ರ ಮಹೋತ್ಸವ ಸಂಭ್ರಮ

Image-1
ವಿಜಯಕುಮಾರ್
Published on


ಮೈಸೂರು: 60 ವಸಂತಗಳನ್ನು ಪೂರೈಸಿರುವ ನಗರದ ಜೆಎಸ್‌ಎಸ್ ವಿಜ್ಞಾನ ಮತ್ತು ತಾಂತ್ರಿಕ ಮಹಾವಿದ್ಯಾಲಯವು ಜ್ಞಾನದಾಸೋಹವನ್ನು ಮುಂದುವರಿಸಿದ್ದು, ಇಲ್ಲಿಂದ ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ.

1960 ರಲ್ಲಿ ಶ್ರೀ ರಾಜೇಂದ್ರ ಸ್ವಾಮೀಜಿ ಅವರಿಂದ ಆರಂಭವಾಗಿದ್ದು, ಆರು ದಶಕಗಳನ್ನು ಪೂರೈಸಿದೆ. ಪ್ರಸಕ್ತ ಸಾಲನ್ನು ವಜ್ರ ಮಹೋತ್ಸವ ವರ್ಷವಾಗಿ ವಿವಿ ಆಚರಿಸಿಕೊಳ್ಳುತ್ತಿದೆ. ವಿವಿ ಕ್ಯಾಂಪಸ್‌ನಲ್ಲಿ 5,500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಒಟ್ಟು 300ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ. ಕಂಪ್ಯೂಟರ್ ಸೈನ್ಸ್ (ಸಿಎಸ್), ಎಲೆಕ್ಟ್ರಾನಿಕ್ಸ್, ಇನ್‌ಫರ್ಮೇಶನ್ ಸೈನ್ಸ್, ಬಿಸಿಎ ಮತ್ತು ಎಂಸಿಎ ಕೋರ್ಸ್‌ಗಳು ಇವೆ. ಇದರಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಬಿಸಿಎಗೆ ಬಹಳ ಬೇಡಿಕೆ ಇದೆ. ಕಳೆದ ಎರಡು ವರ್ಷಗಳಿಂದ 12 ತಿಂಗಳ ಅಲ್ಪಾವಧಿ ಕೋರ್ಸ್‌ಗಳನ್ನು ಸಹ ಆರಂಭಿಸಲಾಗಿದೆ.


ಜೆಸಿಇ ಕ್ಯಾಂಪಸ್‌ನಲ್ಲಿ ಇರುವ ಜೆಎಸ್‌ಎಸ್ ವಿಜ್ಞಾನ ಮತ್ತು ತಾಂತ್ರಿಕ ವಿವಿಗೆ ದೇಶಾದ್ಯಂತ ಬೇಡಿಕೆ ಇದೆ. ಅಲ್ಲದೆ ಎನ್‌ಐಆರ್‌ಎಫ್ ರ‌್ಯಾಂಕಿಂಗ್ ಪಟ್ಟಿಯಲ್ಲಿ ದೇಶದಲ್ಲೇ ಈ ವಿವಿಯು 162ನೇ ಸ್ಥಾನ ಪಡೆದುಕೊಂಡಿದೆ. ಪ್ರವೇಶ ಪರೀಕ್ಷೆ ಬರೆದು ಮ್ಯಾನೇಜ್‌ಮೆಂಟ್ ಕೋಟಾ ಮತ್ತು ಮೆರಿಟ್ ಕೋಟಾದಡಿ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಲಾಗುತ್ತಿದೆ. ಅಲ್ಲದೆ ಶುಲ್ಕ ಭರಿಸಲು ಸಾಧ್ಯವಾಗದ ಬಡ ವಿದ್ಯಾರ್ಥಿಗಳಿಗೆ ಜೆಎಸ್‌ಎಸ್ ಮಹಾವಿದ್ಯಾಪೀಠವು ನೆರವು ಸಹ ನೀಡುತ್ತಿದೆ ಎಂದು ವಿವಿಯ ಸಿಬ್ಬಂದಿ ಪ್ರೊ.ವಿಜಯಕುಮಾರ್ ತಿಳಿಸಿದರು.


ವಿಜಯವಾಣಿ ಮತ್ತು ದಿಗ್ವಿಜಯ ವಾಹಿನಿ ವತಿಯಿಂದ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಶನಿವಾರ ಮತ್ತು ಭಾನುವಾರ ಎರಡು ದಿನಗಳವರೆಗೆ ಆಯೋಜಿಸಿರುವ ಎಜುಕೇಶನ್ ಎಕ್ಸ್‌ಪೋದಲ್ಲಿ ಮಳಿಗೆಯನ್ನು ತೆರೆದಿರುವ ಈ ವಿವಿಯು ವಿದ್ಯಾರ್ಥಿಗಳು ಮತ್ತು ಆಸಕ್ತರಿಗೆ ಮಾಹಿತಿಯನ್ನು ನೀಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net