ಜೆಎಸ್‌ಎಸ್ ವಸತಿ ಶಾಲಾ ವಾರ್ಷಿಕೋತ್ಸವ

3
Published on

ಮೈಸೂರು: ವಿದ್ಯಾರ್ಥಿಗಳು, ಜೀವನದಲ್ಲಿ ಗುರಿ ಮತ್ತು ಛಲ ಬೆಳೆಸಿಕೊಳ್ಳುವುದರ ಜತೆಗೆ ಕಠಿಣ ಪರಿಶ್ರಮದ ಮೂಲಕ ಸಾಧನೆಯ ಹಾದಿಯಲ್ಲಿ ನಡೆಯಬೇಕು ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಯವಿಭವ ಸ್ವಾಮಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಜೆಎಸ್‌ಎಸ್ ವಸತಿ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಬದುಕಿನಲ್ಲಿ ಬರುವ ಕಷ್ಟ ಮತ್ತು ಸಾಧಿಸಬೇಕೆಂಬ ಛಲದಿಂದ ನಾನು ನನ್ನ ಗುರಿಯನ್ನು ತಲುಪಲು ಸಾಧ್ಯವಾಯಿತು. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಿಂದಲೇ ಗುರಿಯನ್ನು ನಿಗದಿಪಡಿಸಿಕೊಳ್ಳಬೇಕು. ಆಗ ಯಶಸ್ಸು ಸಾಧ್ಯ ಎಂದು ತಮ್ಮ ಯಶೋಗಾಥೆ ತಿಳಿಸುವ ಮೂಲಕ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.
ಜೆಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯದ ಆಡಳಿತಾಧಿಕಾರಿ ಎಸ್.ಆರ್. ಸತೀಶ್‌ಚಂದ್ರ ಮಾತನಾಡಿ, ಲಕ್ಷಾಂತರ ವಿದ್ಯಾರ್ಥಿಗಳಿಗೆ ಸುತ್ತೂರು ಶ್ರೀಗಳು ವಿದ್ಯೆ, ಅನ್ನ, ವಸತಿ ನೀಡಿದ್ದು, ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳ ಜೀವನ ಬೆಳಕಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಭವಿಷ್ಯ ರೂಪಿಸಿಕೊಳ್ಳಬೇಕಾದರೆ ಸತತ ಪರಿಶ್ರಮ ಪಡಬೇಕು ಎಂದರು.
ವಿದ್ಯಾರ್ಥಿ ಜೀವನದಿಂದಲೇ ಸಮಯ ಪಾಲನೆ, ಆರ್ಥಿಕ ಶಿಸ್ತು, ಸಾಮಾಜಿಕ ಶಿಸ್ತು, ದೇಹಾರೋಗ್ಯ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ಧನಾತ್ಮಕ ಚಿಂತನೆ ರೂಢಿಸಿಕೊಳ್ಳಬೇಕು. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರ ಜತೆಗೆ ಪ್ರಾಪಂಚಿಕ ಜ್ಞಾನವನ್ನು ಬೆಳೆಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗಬೇಕು. ಕೀಳಿರಿಮೆ ಇರಬಾರದು, ಗುರುಹಿರಿಯರನ್ನು ಗೌರವಿಸಬೇಕು, ನಮ್ಮ ಮೇಲೆ ನಮಗೆ ನಂಬಿಕೆ ಇರಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವಸತಿ ಶಾಲೆಯ ಸಂಯೋಜನಾಧಿಕಾರಿ ಜಿ.ಎಲ್. ತ್ರಿಪುರಾಂತಕ ಮಾತನಾಡಿ, ನಮ್ಮ ಶಾಲೆ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳುವುದರ ಜತೆಗೆ, ಬದುಕುವ ಕಲೆ, ಸಂಸ್ಕಾರ ಹಾಗೂ ಗುಣವಂತಿಕೆಯನ್ನು ಬೆಳೆಸುವ ಶಾಲೆ ಆಗಿದೆ ಎಂದು ತಿಳಿಸಿದರು.
ಸಾಂಸ್ಕೃತಿಕ ಸ್ಪರ್ಧೆ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನ ವಿತರಿಸಿದರು. ಶಾಲೆಯ ವಿವಿಧ ವಿಭಾಗದ ಮುಖ್ಯಸ್ಥರಾದ ಸಂಪತ್ತು, ವೀರಭದ್ರಯ್ಯ, ಎಚ್.ವಿ.ದಿವ್ಯಾ, ಎಸ್. ಶಿವಸ್ವಾಮಿ, ಜಿ. ಶಿವಮಲ್ಲು, ಎಂ.ಜಿ. ಬಸವಣ,್ಣ ಸಿ.ಪಿ. ನಿರ್ಮಲಾ, ಜಿ.ಎಂ. ಷಡಕ್ಷರಿ, ಮಹದೇವಪ್ರಸಾದ್, ಎಂ. ಷಡಕ್ಷರಿ, ಪಿ. ಸುಶೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net