

ಬೇಲೂರು: ರಾಜ್ಯ ಮಟ್ಟದ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಬೇಲೂರು ತಾಲೂಕಿನ ನಾರ್ವೆ ಜೆಎಸ್‌ಎಸ್ ಪ್ರೌಢಶಾಲೆ ವಿದ್ಯಾರ್ಥಿನಿ ಚೈತನ್ಯರನ್ನು ಶನಿವಾರ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೊರಟಿಕೆರೆ ಪ್ರಕಾಶ್ ಸನ್ಮಾನಿಸಿದರು.
ನಂತರ ಮಾತನಾಡಿ, ಬೇಲೂರು ತಾಲೂಕಿನ ಸಾಕಷ್ಟು ವಿದ್ಯಾರ್ಥಿಗಳು ಈ ಬಾರಿ ತಾಲೂಕು, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಎಲ್ಲ ವಿದ್ಯಾರ್ಥಿಗಳಿಗೂ ಮುಂದಿನ ಕ್ರೀಡಾ ಜೀವನ ಮತ್ತು ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಎಲ್ಲರೂ ಸಹಕಾರ ನೀಡಬೇಕಿದೆ. ಮತ್ತು ಮಕ್ಕಳೂ ಸಹ ಮುಂದೆ ಇನ್ನೂ ಹೆಚ್ಚಿನ ಸಾಧನೆ ಮಾಡುವ ಮೂಲಕ ಬೇಲೂರಿಗೆ ತಾವು ಓದಿದ ಶಾಲೆಗೆ ಕೀರ್ತಿ ತರಬೇಕು ಎಂದರು.
ಉದ್ಯಮಿ ಸಂತೋಷ್, ಮುಖಂಡರಾದ ಯೋಗೀಶ್, ಚಂದ್ರು ಸೇರಿದಂತೆ ಜೆಎಸ್‌ಎಸ್ ಪ್ರೌಢಶಾಲೆ ಶಿಕ್ಷಕರು, ವಿಧ್ಯಾರ್ಥಿಗಳು ಮತ್ತು ಗ್ರಾಮಸ್ಥರಿದ್ದರು.