ಜೆಎಸ್‌ಎಸ್ ಕಾಲೇಜಿನಲ್ಲಿ ಕಲಾ ವೈಭವ- 2025ರ ಲಾಂಛನ ‘ವರ್ಣಿಕಾ’ ಅನಾವರಣ

mysore
Published on

ಮೈಸೂರು: ಕಲಾವಿದನಾಗಲು ಪರಿಶ್ರಮ ಅಗತ್ಯ ಎಂದು ಹಿನ್ನೆಲೆ ಗಾಯಕ, ಜೆಎಸ್‌ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರನಾಳ ಶಿಶುತಂತ್ರಜ್ಞ ಡಾ.ಆರ್.ಎಂ.ಸುಮಂತ್ ವಸಿಷ್ಠ ಹೇಳಿದರು.

ಜೆಎಸ್‌ಎಸ್ ಮಹಿಳಾ ಕಾಲೇಜಿನ ಬಯಲು ರಂಗಮಂದಿರದಲ್ಲಿ ಇತ್ತೀಚೆಗೆೆ ಆಯೋಜಿಸಿದ್ದ ಕಲಾ ವೈಭವ- 2025ರ ಲಾಂಛನ ‘ವರ್ಣಿಕಾ’ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿ, ನಾನು ಕಲಾವಿದನಾಗುವುದಕ್ಕೆ ಮತ್ತು ನನ್ನ ಬೆಳವಣಿಗೆಯಲ್ಲಿ ಜೆಎಸ್‌ಎಸ್ ಸಂಸ್ಥೆಯ ಪಾತ್ರ ಮಹತ್ತರವಾದದ್ದು. ಪರಿಣಾಮವಾಗಿ 1,700ಕ್ಕೂ ಹೆಚ್ಚು ಕಾರ್ಯಕ್ರಮದಲ್ಲಿ ನಾನು ಹಾಡಲು ಸಾಧ್ಯವಾಯಿತು ಎಂದು ಸಂಸ್ಥೆಯನ್ನು ಸ್ಮರಿಸಿದರು.

ಈ ಸಂಸ್ಥೆಯಿಂದ ಹೊರಹೊಮ್ಮುವ ಪ್ರತಿಯೊಬ್ಬರೂ ಸಮಾಜದಲ್ಲಿ ಗುರುತರವಾದ ಸ್ಥಾನ ಅಲಂಕರಿಸಿದ್ದಾರೆ ಎಂದರು.

ಪ್ರಾಂಶುಪಾಲ ಡಾ.ರೇಚಣ್ಣ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಬಿ.ನಿರಂಜನಮೂರ್ತಿ ಮಾತನಾಡಿ, ವಿದ್ಯಾರ್ಥಿ ಬದುಕಿನಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ಒಂದು ನಾಣ್ಯದ ಎರಡು ಮುಖಗಳು ಇದ್ದ ಹಾಗೆ. ನಮ್ಮ ಸಂಸ್ಥೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುತ್ತ ಬಂದಿದೆ. ಇಲ್ಲಿ ಕಲಿತ ಬಹಳಷ್ಟು ವಿದ್ಯಾರ್ಥಿಗಳು ಸಿನಿಮಾ, ನಾಟಕ ಇತರ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದರು. ಸಂಚಾಲಕ ಡಾ.ಬಿ.ಪಿ.ಷಡಕ್ಷರಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net