

ಮೈಸೂರು: ಹೆಬ್ಬಾಳದ ಕೈಗಾರಿಕಾ ಪ್ರದೇಶದಲ್ಲಿರುವ ರಿಂಗ್ ರಸ್ತೆಯ ಜೆಎಸ್‌ಎಸ್ ಅರ್ಬನ್ ಹಾತ್‌ನಲ್ಲಿ ಕೈಮಗ್ಗ ಮೇಳ ಜನಾಕರ್ಷಕವಾಗಿದೆ.
ನವದೆಹಲಿಯ ಅಭಿವೃದ್ಧಿ ಆಯುಕ್ತರು (ಕೈಮಗ್ಗ) ಜವಳಿ ಸಚಿವಾಲಯದ ಸಹಯೋಗದೊಂದಿಗೆ ಕೈಮಗ್ಗ ಮತ್ತು ಜವಳಿ ಇಲಾಖೆ, ರಾಜ್ಯ ಸಹಕಾರಿ ಕೈಮಗ್ಗ ನೇಕಾರರ ಮಹಾಮಂಡಳಿ ನಿಯಮಿತ ಸಹಯೋಗದಲ್ಲಿ ಇದು ನಡೆಯುತ್ತಿದೆ.
ನೇಕಾರರು, ನೇಕಾರರ ಸಹಕಾರ ಸಂಘಗಳು ಸಿದ್ಧಗೊಳಿಸುವ ಕೈಮಗ್ಗ ಉತ್ಪನ್ನಗಳಿಗೆ ಹೆಚ್ಚು ಮಾರುಕಟ್ಟೆ ಒದಗಿಸುವ ಮತ್ತು ಅವರ ಕೌಶಲವನ್ನು ಪ್ರಚುರಪಡಿಸುವ ಉದ್ದೇಶದಿಂದ ಮೇಳ ಹಮ್ಮಿಕೊಳ್ಳಲಾಗಿದೆ. ಸಾಂಪ್ರದಾಯಿಕ, ಪರಿಕರಗಳ ಲಭ್ಯತೆ ಮೇಳದ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ವಸ್ತುಗಳು ಯಾವುದೇ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ನೇರವಾಗಿ ನೇಕಾರರಿಂದ ಸಿಗುತ್ತಿವೆ.
ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಶಿವಮೊಗ್ಗ, ಚಿತ್ರದುರ್ಗ, ಗದಗ, ಬಾಗಲಕೋಟೆ, ಕಲಬುರ್ಗಿ ಮತ್ತು ಇಳಕಲ್‌ನ ಕೈಮಗ್ಗ ನೇಕಾರರು ತಮ್ಮ ಉತ್ಪನ್ನಗಳೊಂದಿಗೆ ಮೇಳಕ್ಕೆ ಮೆರುಗು ನೀಡಿದ್ದಾರೆ.
ಕೈಮಗ್ಗ, ಹತ್ತಿ ಮತ್ತು ಉಣ್ಣೆ ಹಾಗೂ ವಿವಿಧ ಮಿಶ್ರಿತ ನೂಲುಗಳಿಂದ ತಯಾರಿಸಲಾದ ಕೈಮಗ್ಗ ಉತ್ಪನ್ನಗಳನ್ನು 75 ಕ್ಕೂ ಹೆಚ್ಚು ನೇಕಾರರು, ನೇಕಾರರ ಸಹಕಾರ ಸಂಘಗಳು ಪ್ರದರ್ಶಿಸುತ್ತಿದ್ದು, ಮಾರಾಟ ಮಾಡುತ್ತಿದ್ದಾರೆ. ಕಾವೇರಿ ಹ್ಯಾಂಡ್ಲೂಮ್ಸ್ ಮಳಿಗೆಯಲ್ಲಿ ಕೈಮಗ್ಗ ಉತ್ಪನ್ನಗಳು ಅದರಲ್ಲಿಯೂ ಮುಖ್ಯವಾಗಿ ಬೆಡ್ ಶೀಟ್‌ಗಳು ನೆಲ ಹೊದಿಕೆಗಳು ಹೆಚ್ಚು ಆಕರ್ಷಣೀಯವಾಗಿದೆ.
ವಿಶೇಷ ಕೈಮಗ್ಗ ಮೇಳದಲ್ಲಿ ಜಮ್ಮು-ಕಾಶ್ಮೀರ, ದೆಹಲಿ, ರಾಜಸ್ತಾನ್, ಗುಜರಾತ್, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ, ಹರಿಯಾಣ, ಬಿಹಾರ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ದಕ್ಷಿಣ ಭಾರತದ ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕದ ಕೈಮಗ್ಗ ನೇಕಾರರ ಮಳಿಗೆಗಳು ಗಮನ ಸೆಳೆಯುತ್ತಿವೆ.
ನೇಕಾರ ಸೇವಾಕೇಂದ್ರದವರು ಕೈಮಗ್ಗದ ನೈಗೆ ಪ್ರಾತ್ಯಕ್ಷಿಕತೆ ವಿಶೇಷ ಎನಿಸಿದೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ರೇಷ್ಮೆ ಸೀರೆಗಳಂತೂ ಮಳಿಗೆ ಸಂಖ್ಯೆ 5 ಮತ್ತು 9ರಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ಗದಗಿನ ಸಾಲೇಶ್ವರ ಕೈಮಗ್ಗ ನೇಕಾರರ ಸಹಕಾರ ಸಂಘದ ಮಳಿಗೆಯಲ್ಲಿ ಇಳಕಲ್ ಸೀರೆಗಳು ಜನರನ್ನು ಆಕರ್ಷಿಸುತ್ತಿದೆ. ಸಾಂಪ್ರದಾಯಿಕ ಇಳಕಲ್ ಸೀರೆಗಳ ನೇಯ್ಗೆಯಂತೂ ಕಣ್ಣಿಗೆ ಹಬ್ಬವನ್ನೇ ಉಂಟುಮಾಡುತ್ತವೆ.
ತಮಿಳುನಾಡಿನ ಅಪ್ಪಟ ಕಾಂಚೀವರಂ ರೇಷ್ಮೆ ಸೀರೆ ಪ್ರದರ್ಶನ ಮತ್ತು ಮಾರಾಟ ಮಾಡುತ್ತಿದ್ದು ಜನಾಕರ್ಷಣೆಗೊಳ್ಳುತ್ತಿದೆ. ತಮಿಳುನಾಡು ಚೆನ್ನಕುಮಾರ್ ಟೆಕ್ಸ್ ಟೈಲ್ಸ್ ಮಳಿಗೆಯಲ್ಲಿ ನೆಲಹಾಸುಗಳು, ಮೇಲು ಹೋದಿಕೆ, ಇತರ ಕೈಮಗ್ಗ ಉತ್ಪನ್ನಗಳು ಕೈಗೆಟಕುವ ಬೆಲೆಯಲ್ಲಿ ಗ್ರಾಹಕರಿಗೆ ಸಿಗುತ್ತಿದೆ.
ಆಂಧ್ರಪ್ರದೇಶ ಸ್ಟೇಟ್ ಹ್ಯಾಂಡ್ಲೂಮ್ ವೀವರ್ಸ್ ಕಾರ್ಪೊರೇಟಿವ್ ಸೊಸೈಟಿ ಸರ್ಕಾರದ ಮಳಿಗೆ, ವಾರಣಾಸಿ ಕೈಮಗ್ಗ ನೇಕಾರರ ಮಳಿಗೆಯಲ್ಲಿ ಪರಿಶುದ್ಧ ಬನಾರಸಿ ರೇಷ್ಮೆ ಸೀರೆಗಳು ಆಕರ್ಷಿಸುತ್ತಿವೆ.
ಆಂಧ್ರಪ್ರದೇಶದ ಗಡ್ವಾಲ್ ರೇಷ್ಮೆ ಸೀರೆಗಳಂತೂ ಕಣ್ಣಿಗೆ ಮುದ ನೀಡುತ್ತವೆ. ಕಲಾಂಕಾರಿ, ಉಪ್ಪಾಡ ಹಾಗೂ ಇತರ ರೇಷ್ಮೆ ಸೀರೆಗಳೂ ಇವೆ. ಕಾಶ್ಮೀರ ರಾಜ್ಯದ ಮಳಿಗೆಯಲ್ಲಿ ಉತ್ತಮ ಗುಣಮಟ್ಟದ ಪಶ್ಮಿನಾ ಶಾಲುಗಳು, ಪಶ್ಚಿಮ ಬಂಗಾಳ ಮಳಿಗೆಗಳಲ್ಲಿ ಕೈಮಗ್ಗದ ರೇಷ್ಮೆ ಸೀರೆಗಳು, ಕಾಂತವರ್ಕ್ ಸೀರೆಗಳು, ಬಲಚೂರಿ ಸೀರೆಗಳು ಕಡಿಮೆ ಬೆಳೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ.
ಆಸ್ಸಾಂ ರಾಜ್ಯದ ಕುಂಜಲತಾ ದಾಸ್ ಮಳಿಗೆಯಲ್ಲಿ ಸಾಂಪ್ರದಾಯಿಕ ರೇಷ್ಮೆ ಸೀರೆಗಳು ಹಾಗೂ ಇತರ ಕೈಮಗ್ಗ ಉತ್ಪನ್ನಗಳು ಪ್ರದರ್ಶನಗೊಳ್ಳುತ್ತಿದೆ. ತಮಿಳುನಾಡು ಮಳಿಗೆಯಲ್ಲಿ ಕಾಂಚೀವರಂ ರೇಷ್ಮೆ ಸೀರೆಗಳು ಬಹಳ ಹೆಚ್ಚಿನ ಬೇಡಿಕೆಯಲ್ಲಿ ಮೈಸೂರಿನ ಜನತೆ ಖರೀದಿಸುತ್ತಿದ್ದಾರೆ. ಕಾಂಚೀವರಂ ಸೀರೆಗಳು ತಮ್ಮ ಮೆರುಗನ್ನು ಸಾರಿ ಹೇಳುತ್ತಿವೆ.
ರಾಜಸ್ಥಾನ್ ರಾಜ್ಯದ ಭಗೀರಥ ಕೈಮಗ್ಗ ನೇಕಾರರ ಕೈಯಿಂದ ವಿಶಿಷ್ಟವಾಗಿ ಮೂಡಿ ಬಂದಿರುವ ನೆಲಹಾಸುಗಳು, ಮೇಲು ಹೊದಿಕೆ, ಸಾಲುಗಳ ಸಂಗ್ರಹವೂ ಇದೆ. ಇವರ ಮಳಿಗೆಯಲ್ಲಿ ಕೈಮಗ್ಗ ನೈಗೆ ಪ್ರಾತ್ಯಕ್ಷತೆ ಮೂಲಕ ಮೈಸೂರಿಗರನ್ನು ಕಲೆಯ ಕಡೆಗೆ ಆಕರ್ಷಿಸುವಂತೆ ಮಾಡುತ್ತಿದ್ದಾರೆ.
ಕಸೂತಿ ಮಾಡಿದ ಬೆಡ್ ಶೀಟ್‌ಗಳು, ಟವಲ್‌ಗಳು, ಕುಶನ್ ಕವರ್‌ಗಳು, ಕೈಮಗ್ಗ ಉತ್ಪನ್ನಗಳು ಮೇಳದಲ್ಲಿ ಮನ ಸೆಳೆಯುತ್ತಿವೆ. ಕರಕುಶಲ ಸಂಸ್ಕೃತಿಯ ಉಡುಗೆ-ತೊಡುಗೆಗಳು ಮತ್ತು ಅಲಂಕಾರಿಕ ವಸ್ತುಗಳು ನೇರವಾಗಿ, ಉತ್ತಮ ಗುಣಮಟ್ಟದಲ್ಲಿ ಕಡಿಮೆ ಬೆಲೆಗೆ ದೊರೆಯುತ್ತಿವೆ.
80 ಮಳಿಗೆಗಳಲ್ಲಿ ದೇಶದ ಸಂಸ್ಕೃತಿಯ ಅನಾವರಣಗೊಂಡಿದೆ. ಕೈಮಗ್ಗ ಉತ್ಪನ್ನಗಳು ಜತೆಗೆ ಕರಕುಶಲ ಉತ್ಪನ್ನಗಳು ಕೂಡ ಸಿಗುತ್ತಿದ್ದು ಗ್ರಾಹಕರಿಗೆ ಒಂದೇ ಸೂರಿನಡಿಯಲ್ಲಿ ಹಲವು ಉತ್ಪನ್ನಗಳನ್ನು ಖರೀದಿಸುವ ಸುವರ್ಣ ಅವಕಾಶ ಇದಾಗಿದೆ. ರಾಜ್ಯ ಕೈಮಗ್ಗ ಮೇಳವು ಆ.5ರ ವರೆಗೂ ನಡೆಯಲಿದ್ದು, ಬೆಳಗ್ಗೆ 10ರಿಂದ ರಾತ್ರಿ 9ರ ತನಕ ಉಚಿತ ಪ್ರವೇಶವಿರುತ್ತದೆ