ಜೆಎಸ್ಎಸ್ ಅರ್ಬನ್ ಹಾತ್ ನಲ್ಲಿ ಕೈಮಗ್ಗ ಉತ್ಪನ್ನಗಳ ಪ್ರದರ್ಶನ, ಮಾರಾಟ 'ವಸ್ತ್ರ ಉತ್ಸವ'ಕ್ಕೆ ಚಾಲನೆ

26
Published on

ಮೈಸೂರು: ವರ ಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ನಗರದ ಜೆಎಸ್‌ಎಸ್ ಅರ್ಬನ್ ಹಾತ್‌ನಲ್ಲಿ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳ ‘ವಸ್ತ್ರ ಉತ್ಸವ’ಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಕೆ.ಆರ್.ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ, ಕೈಮಗ್ಗ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆ ಒದಗಿಸುವ ದೃಷ್ಟಿಯಿಂದ ಇಂತಹ ಮೇಳಗಳ ಅವಶ್ಯಕತೆ ಹೆಚ್ಚಿದೆ. ಕೈಮಗ್ಗ ಉತ್ಪನ್ನಗಳು ನಶಿಸಿ ಹೋಗದಂತೆ ಕಾಪಾಡಿಕೊಂಡು ಹೊಗಲು ಇಂತಹ ಮೇಳ ಸಹಕಾರಿ. ನೇಕಾರರು, ನೇಕಾರ ಸಹಕಾರ ಸಂಘಗಳು ತಯಾರು ಮಾಡುತ್ತಿರುವ ಕೈಮಗ್ಗ ಹಾಗೂ ನೇಕಾರರು ಮತ್ತು ಕರಕುಶಲಕರ್ಮಿಗಳು ತಾವು ತಯಾರು ಮಾಡಿದ ಉತ್ಪನ್ನಗಳನ್ನು ಒಂದೇ ಸೂರಿನಡಿ ಮಾರಾಟಕ್ಕೆ ಅವಕಾಶ ಕಲ್ಪಿಸಿರುವುದು ಮೆಚ್ಚುಗೆ ಸಂಗತಿ ಎಂದರು.
ದೇಶದ ಸುಮಾರು 75ಕ್ಕೂ ಹೆಚ್ಚು ಕೈಮಗ್ಗ ನೇಕಾರರು ಮತ್ತು ಕುಶಲಕರ್ಮಿಗಳು ತಾವು ಉತ್ಪಾದಿಸಿರುವ ಉತ್ಪನ್ನಗಳು ಪ್ರದರ್ಶನ ಮತ್ತು ಮಾರಾಟಗೊಳ್ಳುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಟಿ.ಎಸ್.ಶ್ರೀವತ್ಸ ತಿಳಿಸಿದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಲೆಕ್ಕ ಪರಿಶೋಧಕ ವಿಭಾಗದ ನಿರ್ದೇಶಕ ಸಂತಾನಂ, ಯೋಜನಾ ನಿರ್ದೇಶಕ ಎಂ.ಶಿವನಂಜಸ್ವಾಮಿ, ಸಂಯೋಜಕ ರಾಕೇಶ್ ರೈ, ಸುಂದರಪ್ಪ ಇದ್ದರು.
ಮೇಳದಲ್ಲಿ ಉತ್ಪನ್ನಗಳು:
ಮೇಳದಲ್ಲಿ ಕರ್ನಾಟಕದ ರೇಷ್ಮೆ ಸೀರೆ, ಮೊಳಕಾಲ್ಮೂರು , ಇಳಕಲ್ ಸೀರೆ, ಕಸೂತಿ ಸೀರೆ, ತಮಿಳುನಾಡು ರಾಜ್ಯದ ಪರಿಶುದ್ಧ ಕಾಂಜಿವರಂ ಸೀರೆ, ಕೇರಳ ರಾಜ್ಯದ ಕೈಮಗ್ಗ ಉತ್ಪನ್ನಗಳು, ಬಿಹಾರ್ ತಸ್ಸರ್ ಸೀರೆ, ಪಶ್ಚಿಮ ಬಂಗಾಳದ ಕಾಂತಾ ಸೀರೆ, ಬಲಚುರಿ ಸೀರೆ, ಭುಟಿಕ್ ಸೀರೆ, ಕಾಟನ್ ಸೀರೆಗಳು, ಕರಕುಶಲಕರ್ಮಿಗಳು ತಯಾರು ಮಾಡಿರುವ ಕರಕುಶಲವ ವಸ್ತುಗಳು ಒಂದೇ ಸೂರಿನಡಿ ಲಭ್ಯವಿವೆ. ನಿತ್ಯ ಬೆಳಗ್ಗೆ 10 ರಿಂದ ರಾತ್ರಿ 9ರವರೆಗೆ ಮೇಳ ತೆರೆದಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net