

ಮೈಸೂರು: ದಸರಾ ಹಾಗೂ ಗಾಂಧಿ ಜಯಂತಿ ಅಂಗವಾಗಿ ಆಯೋಜಿಸಿರುವ ‘ಗಾಂಧಿ ಶಿಲ್ಪ ಬಜಾರ್’ ಕರಕುಶಲ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ನಗರದ ಹೆಬ್ಬಾಳು ರಿಂಗ್‌ರಸ್ತೆಯಲ್ಲಿರುವ ಜೆಎಸ್‌ಎಸ್ ಮೈಸೂರು ಅರ್ಬನ್ ಹಾತ್‌ನಲ್ಲಿ ಸೆ.24ರ ವರೆಗೆ ಕರಕುಶಲ ವಸ್ತುಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸಲಾಗಿದೆ.
ಕೇಂದ್ರ ಜವಳಿ ಸಚಿವಾಲಯದ ಸಹಾಯಕ ಕಾರ್ಯದರ್ಶಿ ನಿಧಿ ಬನ್ಸಾಲಿ ಚಾಲನೆ ನೀಡಿ ಮಾತನಾಡಿ, ರಾಜ್ಯ, ದೇಶದ ವಿವಿಧೆಡೆಯಿಂದ ಬಂದ ಕುಶಲಕರ್ಮಿಗಳು ಬಳಕೆದಾರರ ಅಗತ್ಯ ಹಾಗೂ ಅಭಿರುಚಿ ಅರಿತು ಮಾರುಕಟ್ಟೆಗೆ ಬೇಕಾದ ವಿನ್ಯಾಸ ವಸ್ತುಗಳನ್ನು ರೂಪಿಸಿ ಮಾರಾಟ ಮಾಡುತ್ತಿದ್ದಾರೆ. ತಯಾರಕರು ಹಾಗೂ ಮಾರಾಟಗಾರರ ನಡುವೆ ನೇರ ಸೇತುವೆಯಾಗಿ ಮೇಳ ಆಯೋಜಿಸಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕೋರಿದರು.
ಮೇಳದಲ್ಲಿ ಮರದ ಕೆತ್ತನೆ, ಶಿಲಾ ಶಿಲ್ಪ, ಕಂಚಿನ ವಿಗ್ರಹ, ಮರದ ಕುಂದಣ ಕಲೆ, ಟೆರ‌್ರಾಕೋಟ, ರತ್ನಗಂಬಳಿ, ಹತ್ತಿ ಜಮಖಾನ, ಅನುಕರಣೆ ಆಭರಣ, ಮರದ ಕಲಾ ವಸ್ತುಗಳು, ಬಾಟಿಕ್, ಕಲಾಂಕರಿ ಚಿತ್ರಕಲೆ, ಚರ್ಮದ ಆಕರ್ಷಕ ವಸ್ತುಗಳು, ಛತ್ತೀಸ್‌ಗಢದ ಧೋಕ್ರಾ, ಎರಕದ ವಸ್ತುಗಳು, ಮೇಘಾಲಯದ ಬಿದಿರಿನ ಕಲೆ, ರಾಜಸ್ಥಾನದ ಕರಕುಶಲ ವಸ್ತುಗಳು ಮೊದಲಾದವು ಇವೆ. ಪ್ರದರ್ಶನದಲ್ಲಿ ಮಧ್ಯವರ್ತಿಗಳಿಲ್ಲದೆ ಕುಶಲಕರ್ಮಿಗಳಿಂದ ಗ್ರಾಹಕರಿಗೆ ನೇರವಾಗಿ ಮಾರಾಟದ ವ್ಯವಸ್ಥೆ ಕಲ್ಪಿಸಲಾಗಿದೆ.
ಜೆಎಸ್‌ಎಸ್ ಮಹಾವಿದಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಜಿ.ಸಿ.ಬೆಟಸೂರ ಮಠ್, ಜೆಎಸ್‌ಎಸ್ ಮಹಾವಿದ್ಯಾಪೀಠದ ಹಣಕಾಸು ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ, ಕರಕುಶಲ ಸೇವಾ ಕೇಂದ್ರದ ನಿರ್ದೇಶಕ ಕೆ.ಎಸ್.ಸುನಿಲ್‌ಕುಮಾರ್, ಸಂಯೋಜಕ ಶಿವನಂಜಸ್ವಾಮಿ, ಆಯೋಜಕರಾದ ಸುಂದರ್, ಶಂಕರಪ್ಪ ಇತರರು ಇದ್ದರು.