ಜೆಎಂಐಟಿ ಬಳಿ ಸ್ಕೈವಾಕ್ ನಿರ್ಮಾಣಕ್ಕೆ ಡಿಸಿ ಸೂಚನೆ

ctd.....---
Published on

ಚಿತ್ರದುರ್ಗ: ಜಿಲ್ಲೆಯಲ್ಲಿ ಅಪಘಾತಗಳ ತಡೆ ಹಾಗೂ ರಸ್ತೆ ಸುರಕ್ಷತೆ ಹೆಚ್ಚಿಸಲು ವಿವಿಧ ಇಲಾಖೆಗಳ ಅಧಿಕಾರಿಗಳು ಕೈಜೋಡಿಸಿ ಶ್ರಮಿಸಬೇಕೆಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಹೇಳಿದರು.

ಡಿಸಿ ಕಚೇರಿಯಲ್ಲಿ ಗುರುವಾರ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿ, ಜಿಲ್ಲೆಯ ರಾಷ್ಟ್ರೀಯ, ರಾಜ್ಯ  ಹಾಗೂ ಜಿಲ್ಲಾ ಹೆದ್ದಾರಿಗಳ ಕಪ್ಪುಚುಕ್ಕೆ ವಲಯಗಳಲ್ಲಿ ಅಪಘಾತ ತಡೆ ಕ್ರಮಗಳ ಕುರಿತು ಸೂಚಿಸಲಾಗಿತ್ತು. ಈ ಕುರಿತು ವಿಶ್ಲೇಷಣಾ ವರದಿ ಸಲ್ಲಿಸಬೇಕು ಎಂದರು.

ನಗರದ ಚಳ್ಳಕೆರೆ ಗೇಟ್ ಬಳಿ ಬಸ್ ತಂಗುದಾಣ ನಿರ್ಮಾಣಕ್ಕೆ ತಕ್ಷಣ ಕ್ರಮವಹಿಸಬೇಕು. ಇದಕ್ಕೆ ಎನ್‌ಒಸಿ ನೀಡಿ ಆರು ತಿಂಗಳಾದರೂ ಕಾಮಗಾರಿ ಆರಂಭಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕರ ಅನುದಾನದಲ್ಲಿ ಕೆಆರ್‌ಐಡಿಎಲ್‌ನಿಂದ ಟೆಂಡರ್ ಕರೆಯಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಚಳ್ಳಕೆರೆ ಗೇಟ್‌ನಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಬೇಕು. ಅಂಡರ್‌ಪಾಸ್‌ನಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸುವವರ ವಿರುದ್ಧ ಕ್ರಮ ಜ ರುಗಿಸಿ ಸುಗಮ ಸಂಚಾರಕ್ಕೆ ಕ್ರಮ ವಹಿಸಬೇಕು. ಈ ಭಾಗದ ನಾಲ್ಕು ಕಡೆ ಫುಟ್ ಪಾತ್ ಅತಿಕ್ರಮಣ ತೆರವುಗೊಳಿಸಿ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಬೇಕೆಂದು ಡಿಸಿ ಹೇಳಿದರು.

ಒಂದು ತಿಂಗಳ ಒಳಗೆ ಟೆಂಡರ್ ಕರೆದು ಜೆಎಂಐಟಿ ಬಳಿ ಸ್ಕೈವಾಕ್ ಕಾಮಗಾರಿ ಪ್ರಾರಂಭಿಸಬೇಕು. ಕೆಳಗೋಟೆಯ ರಾ.ಹೆ. ವೇಗ ಕಡಿತಗೊಳಿಸಲು ರಂಬಲ್ ಸ್ಟ್ರಿಪ್ಸ್, ಬ್ಲಿಂಕರ್ಸ್, ಲೈಟಿಂಗ್ ವ್ಯವಸ್ಥೆ ಮಾಡಬೇಕು. ಗಾಂಧಿ ವೃತ್ತದಿಂದ ಕೆಎಸ್‌ಆರ್‌ಟಿಸಿ ಮಾರ್ಗದ ರಸ್ತೆ ಡಿವೈಡರ್ ತೆರವು ಬಳಿಕ ಅಪಾಯಕಾರಿಯಾಗಿದೆ. ಕೂಡಲೇ ಎಲ್ಲೆಲ್ಲಿ ಡಿವೈಡರ್ ತೆರವಾಗಿದೆ ಅಲ್ಲಲ್ಲಿ ದುರಸ್ತಿಗೊಳಿಸುವಂತೆ ನಿರ್ದೇಶಿಸಿದರು.

ನಗರಸಭೆಯಿಂದ 27 ಕಡೆ ಆಟೋರಿಕ್ಷಾ ನಿಲುಗಡೆಗೆ ಜಾಗ ಗುರುತಿಸಿದ್ದು, ಈಗಾಗಲೇ 12 ಕಡೆ ವ್ಯವಸ್ಥೆ ಮಾಡಲಾಗಿದೆ ಎಂದು ನಗರಸಭೆ ಪೌರಾಯುಕ್ತೆ ಎಂ. ರೇಣುಕಾ ತಿಳಿಸಿದರು.

ಹಿರಿಯೂರು ನಗರದ ಒಳ ಬರುವ ಹಾಗೂ ಹೊರಗೆ ತೆರಳುವ ರಾ.ಹೆದ್ದಾರಿಯಲ್ಲಿ ಎಲ್ಲೆಂದರಲ್ಲಿ ಬೃಹತ್ ವಾಹನಗಳು, ಲಾರಿಗಳ ಪಾರ್ಕಿಂಗ್‌ನಿಂದ ಅಪಾಯಕಾರಿ ವಲಯವಾಗಿದೆ. ಲಾರಿಗಳನ್ನು ನಿಲ್ಲಿಸುವ ಚಾಲಕರಿಗೆ ದಂಡ ವಿಧಿಸಬೇಕು. ನೋಟಿಸ್ ನೀಡಿ ಗೂಡಂಗಡಿಗಳನ್ನು ತೆರವುಗೊಳಿಸುವಂತೆ ಹಿರಿಯೂರು ನಗರಸಭೆ ಪೌರಾಯುಕ್ತ ಎ. ವಾಸೀಂಗೆ ಡಿಸಿ ಸೂಚಿಸಿದರು.

ಟ್ರಕ್ ಟರ್ಮಿನಲ್‌ಗೆ ಎರಡು ಕಡೆಗಳಲ್ಲಿ ಜಾಗ ಗುರುತಿಸಲಾಗಿದೆ. 15 ದಿನದೊಳಗೆ ನಗರ ವ್ಯಾಪ್ತಿಯಲ್ಲಿ ಸಂಚಾರ ಸೂಚನಾ ಫಲಕಗಳನ್ನು ಅಳವಡಿಸಲು ಕ್ರಮವಹಿಸಲಾಗುವುದು ಎಂದು ವಾಸೀಂ ತಿಳಿಸಿದರು.

ನಗರದ ಮುರುಘಾಮಠದಿಂದ ಕವಾಡಿಗರ ಹಟ್ಟಿ ಮಾರ್ಗದ ಮೂಲಕ ಹೊಳಲ್ಕೆರೆ ರಸ್ತೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣವಾಗಿಲ್ಲ. ಕವಾಡಿಗರ ಹಟ್ಟಿ ಬಳಿ ರಸ್ತೆ ಗುಂಡಿ ಬಿದ್ದು ಅಪಘಾತಗಳಾಗುತ್ತಿವೆ. ಕಾಮಗಾರಿ ನಿರ್ಲಕ್ಷಿಸಿರುವ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ, ಉಳಿಕೆ ಕಾಮಗಾರಿ ತ್ವರಿತಗೊಳಿಸಬೇಕೆಂದು ಡಿಸಿ ಹೇಳಿದರು.

ಜಿಲ್ಲೆಯಲ್ಲಿ ಟ್ರ್ಯಾಕ್ಟರ್ ಟ್ರ್ಯಾಲಿ, ಎತ್ತಿನಗಾಡಿಗಳಿಗೆ ರಿಫ್ಲೆಕ್ಟರ್ ಇಲ್ಲದೆ ರಾತ್ರಿ ವೇಳೆ ಅಪಘಾತಗಳಾಗುತ್ತವೆ. ತಪಾಸಣೆ ನಡೆಸಿ ಟ್ರ್ಯಾಕ್ಟರ್ ಟ್ರ್ಯಾಲಿ ಹಾಗೂ ಎತ್ತಿನ ಗಾಡಿಗಳಿಗೆ ರಿಫ್ಲೆಕ್ಟರ್ ಸ್ಟಿಕರ್‌ಗಳನ್ನು ಅಳವಡಿಸುವಂತೆ ಎಸ್‌ಪಿ ರಂಜಿತ್ ಕುಮಾರ್ ಬಂಡಾರು ಆರ್‌ಟಿಒ ಅಧಿಕಾರಿಗಳಿಗೆ ಸೂಚಿಸಿದರು.

ಚಿತ್ರದುರ್ಗದ ಗಾಂಧಿ ವೃತ್ತದಿಂದ ಪ್ರವಾಸಿ ಮಂದಿರ ಮಾರ್ಗದ ರಸ್ತೆ ಪಕ್ಕದಲ್ಲಿ ಆಟೋಗಳನ್ನು ನಿಲ್ಲಿಸದಂತೆ ಕ್ರಮ ವಹಿಸಲು ಸಂಚಾರಿ ಪೊಲೀಸರಿಗೆ ತಿಳಿಸಿದರು. ಅಪ್ರಾಪ್ತರು, ಚಾಲನೆ ಪರವಾನಗಿ ಇಲ್ಲದವರು, ಟ್ರ್ಯಾಕ್ಟರ್ ಮತ್ತಿತರ ವಾಹನ ಚಾಲನೆ ಮಾಡುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.

ಎಡಿಸಿ ಬಿ.ಟಿ. ಕುಮಾರಸ್ವಾಮಿ, ಆರ್‌ಟಿಒ ಭರತ್ ಎಂ. ಕಾಳಿಸಿಂಗೆ, ಡಿಎಚ್‌ಒ ಡಾ.ಜಿ.ಪಿ. ರೇಣುಪ್ರಸಾದ್ ಮತ್ತಿತರರು ಇದ್ದರು.

--------------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net