

ಮೈಸೂರು: ಪಡುವಾರಹಳ್ಳಿಯ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ವ್ಯಕ್ತಿತ್ವ ಮತ್ತು ಸೌಂದರ್ಯ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿ ಜೆ.ಭಾಗ್ಯ ‘ಮಿಸ್ ಮಹಾರಾಣಿ- 2025’ ಕಿರೀಟವನ್ನು ಮುಡಿಗೇರಿಸಿಕೊಂಡು ಮಿಂಚಿದರು.
ವಿಜೇತರ ಸಾಲಿನಲ್ಲಿ ಗೆದ್ದು ಎಲ್ಲರ ಪ್ರಶಂಸೆಗೆ ಪಾತ್ರರಾದ ಜೆ.ಭಾಗ್ಯ ಮೊದಲ ಸ್ಥಾನದೊಂದಿಗೆ 10 ಸಾವಿರ ರೂ. ನಗದು ಬಹುಮಾನವನ್ನೂ ಪಡೆದುಕೊಂಡರು.
ದ್ವಿತೀಯ ಸ್ಥಾನಕ್ಕೆ ಎಂ.ಕಾಂ ಪ್ರಥಮ ವರ್ಷದ ಲಿಖಿತಾ ಸಿಂಗ್ ಭಾಜನರಾಗಿ 8 ಸಾವಿರ ರೂ. ನಗದು ಬಹುಮಾನ ಗಿಟ್ಟಿಸಿಕೊಂಡರು. ಬಿ.ಕಾಂ ತೃತೀಯ ವರ್ಷದ ಆಡಲಿನ್ ಶರೋನ್ 3ನೇ ಸ್ಥಾನದೊಂದಿಗೆ 6 ಸಾವಿರ ರೂ. ನಗದು ಬಹುಮಾನ ಸ್ವೀಕರಿಸಿದರು. ಜೆ.ಭಾರ್ಗವಿ (ತೃತೀಯ ಬಿ.ಕಾಂ)ಮಿಸ್ ಫೋಟೊಜೆನಿಕ್ ಪ್ರಶಸ್ತಿ ಮತ್ತು ನೂರ್‌ಆಯೇಷಾ ಖಾನುಂ (ತೃತೀಯ ಬಿ.ಕಾಂ)ಮಿಸ್ ಟ್ಯಾಲೆಂಟ್ ಪ್ರಶಸ್ತಿಗೆ ಪಾತ್ರರಾದರು.
ಕಾಲೇಜಿನ ಅಂದಾಜು 80 ವಿದ್ಯಾರ್ಥಿನಿಯರು ಉತ್ಸಾಹದಿಂದ ಭಾಗಿಯಾಗಿ ಗಮನ ಸೆಳೆದರು. ವಿವಿಧ ರೀತಿ ಉಡುಗೆ ತೊಟ್ಟು, ಹಂಸ ನಡಿಗೆಯಿಂದ ನೆರೆದಿದ್ದವರ ಗಮನ ಸೆಳೆದರು.
ವಿವಿಧ ಹಂತದ ಸ್ಪರ್ಧೆಯಲ್ಲಿ ತೇರ್ಗಡೆಯಾದ 19 ಅಭ್ಯರ್ಥಿಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಿಕೊಳ್ಳಲಾಯಿತು. ಅಂತಿಮ ಸುತ್ತಿನಲ್ಲಿ ಮೂರು ಹಂತಗಳಲ್ಲಿ ಸ್ಪರ್ಧೆ ನಡೆಯಿತು. ಮೊದಲ ಸುತ್ತು ವೆಸ್ಟರ್ನ್ ಉಡುಗೆ, ಎರಡನೇಯ ಸುತ್ತು ಸಾಂಪ್ರದಾಯಿಕ ಉಡುಗೆ ಹಾಗೂ ಮೂರನೇ ಸುತ್ತು ಪ್ರಶ್ನೋತ್ತರ ನಡೆಸಲಾಯಿತು.
ಇದರೊಂದಿಗೆ ಅಭ್ಯರ್ಥಿಗಳ ಹಂಸ ನಡಿಗೆ, ಉಡುಗೆ, ವ್ಯಕ್ತಿತ್ವ ಹಾಗೂ ಅವರ ಚಾಣಾಕ್ಷತನ ಆಧರಿಸಿ ಮೂರು ವಿಜೇತರು ಹಾಗೂ ಇಬ್ಬರು ಸಮಾಧಾನಕರ ಬಹುಮಾನಕ್ಕೆ ಆಯ್ಕೆ ಮಾಡಿ ಮಿಸ್ ಮಹಾರಾಣಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾಲೇಜಿನಲ್ಲಿ ಮೊದಲ ಬಾರಿಗೆ ಏರ್ಪಡಿಸಿದ್ದ ಈ ಸ್ಪರ್ಧೆಯನ್ನು ಐಎಡಬ್ಲುೃಎ ಮಿಸ್ ಇಂಡಿಯಾ ವಿಜೇತೆ, ನೃತ್ಯ ಕಲಾವಿದೆ ಬಿ.ಡಿ ಜ್ಯೋತಿ ಆಕರ್ಷಕವಾದ ಮುಕುಟವನ್ನು ಅನಾವರಣಗೊಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜತೆಗೆ ನಟಿ ಹಾಗೂ ನೃತ್ಯಕಲಾವಿದೆ ತ್ರಿವೇಣಿ ಹಾಗೂ ಜುಂಬಾ ಟ್ರೈನರ್ ದಾಕ್ಷಾಯಿಣಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದರು.
ಕಾಲೇಜು ಪ್ರಾಂಶುಪಾಲ ಪ್ರೊ.ಸೋಮಣ್ಣ, ಪ್ರೊ.ನಳೀನಿ, ಎಸ್‌ಐಕ್ಯುಎಸಿ ಸಂಚಾಲಕ ಡಾ.ಮುತ್ತುರಾಜು, ಸಾಂಸ್ಕೃತಿಕ ವೇದಿಕೆ ಕಾರ್ಯದರ್ಶಿ ಪ್ರೊ.ಎಚ್.ಎಸ್ ಧನಲಕ್ಷ್ಮಿ, ಖಜಾಂಚಿ ಪ್ರೊ.ಎನ್ ವನಿತಾ ಇದ್ದರು.