

ಹಾಸನ: ಒಂದು ದೇಶ ಅಭಿವೃದ್ಧಿ ಹೊಂದಲು ಶಿಕ್ಷಕರ ಪಾತ್ರ ಬಹುಮುಖ್ಯವಾಗಿದ್ದು, ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಮಾಡುವಂತಹ ಶಕ್ತಿ ಶಿಕ್ಷಕರಲಿದೆ ಎಂದು ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ತಾಲೂಕಿನ ಕಂದಲಿ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ಆವರಣದಲ್ಲಿ ಭಾನುವಾರ ಹಳೆಯ ವಿದ್ಯಾರ್ಥಿಗಳು ಶಾಲೆಯಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದ ಜೆ.ಬಿ. ತಮ್ಮಣ್ಣಗೌಡರಿಗೆ ಅಭಿನಂದನಾ ಸಮಾರಂಭ ಮತ್ತು ಅಭಿನಂದನ ಗ್ರಂಥ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವ ವಿದ್ಯಾರ್ಥಿ ತಂದೆ-ತಾಯಿ ಮತ್ತು ಗುರು ಹಿರಿಯರ ಮಾರ್ಗದರ್ಶನದಲ್ಲಿ ನಡೆದರೆ ಅವರಿಗೆ ಯಶಸ್ಸು ಲಭಿಸುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಯಶಸ್ವಿನ ಮೆಟ್ಟಿಲನ್ನ ಹತ್ತಬೇಕಾದರೆ ಹಿಂದೆ ತಿರುಗಿ ನೋಡಬಾರದು. ಆದರೆ, ಯಶಸ್ಸು ಸಿಕ್ಕಿದ ಮೇಲೆ ತಮ್ಮ ಹಿಂದಿನ ಹೆಜ್ಜೆಯ ಗುರುತುಗಳನ್ನ ಮರೆಯಬಾರದು. ಈ ಹಿನ್ನೆಲೆಯಲ್ಲಿ ಇಂದು ತಮ್ಮಣ್ಣಗೌಡರಿಗೆ ನೂರಾರು ವಿದ್ಯಾರ್ಥಿಗಳು ಅಭಿನಂದಿಸಿ ಗೌರವಿಸುವ ಮೂಲಕ ಅವರ ಸೇವೆಯನ್ನ ಸಾರ್ಥಕ ಗೊಳಿಸಿದ್ದಾರೆ ಮತ್ತು ಗುರು ಹಿರಿಯರನ್ನ ನೆನೆಯುವ ಮೂಲಕ ಮುಂದಿನ ಯುವ ಪೀಳಿಗೆಗೆ ಗುರುವಿನ ಮಹತ್ವವನ್ನು ತಿಳಿಸಿದ್ದಾರೆ ಎಂದು ಬಣ್ಣಿಸಿದರು.
ತಮ್ಮಣ್ಣಗೌಡರು ತಮ್ಮ ಜೀವನದಲ್ಲಿ ಮದುವೆ ಮತ್ತು ಸಾಂಸಾರಿಕ ಜೀವನವನ್ನು ತ್ಯಜಿಸಿ, ಬಡ ಮಕ್ಕಳ ಶಿಕ್ಷಣಕ್ಕೆ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ. ಇಂಥವರು ನಿವೃತ್ತಿಯಾದ ಮೇಲೆ ಸುಮ್ಮನೆ ಮನೆಯಲ್ಲಿ ಇರಬಾರದು.ಸರ್ಕಾರ ಇಂತಹವರನ್ನು ತಜ್ಞರ ಸಮಿತಿಗೆ ಶಿಫಾರಸ್ಸು ಮಾಡಬೇಕು. ಆಗ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ತರಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಮೊರಾರ್ಜಿ ವಸತಿ ಶಾಲೆಗಳನ್ನ ತೆರೆದರು. ಆದರೆ, ಇತ್ತೀಚಿನ ದಿನಗಳಲ್ಲಿ ಎಲ್ಲಾ ರಂಗಗಳು ಕೂಡ ವ್ಯಾಪಾರಿಕರಣವಾಗುತ್ತಿದೆ. ಸರ್ಕಾರ ಪ್ರತಿಯೊಂದು ಗ್ರಾಮ ಪಂಚಾಯಿತಿಗೆ ಒಂದು ವಸತಿ ಶಾಲೆಯನ್ನ ತೆರೆಯುವ ಮೂಲಕ ಶಿಕ್ಷಣದ ಗುಣಮಟ್ಟವನ್ನ ಹೆಚ್ಚಿಸಲು ಸಹಕಾರಿಯಾಗಬೇಕು ಮತ್ತು ವಿಷಯವಾರು ಶಿಕ್ಷಕರನ್ನ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ ಮಾತನಾಡಿ, ತಮ್ಮಣ್ಣಗೌಡರು ಶಿಕ್ಷಕ ಕ್ಷೇತ್ರಕ್ಕೆ ಅಪರೂಪದ ವ್ಯಕ್ತಿ ಮತ್ತು ಮಾದರಿ ವ್ಯಕ್ತಿ ಇಂತಹ ಶಿಕ್ಷಕರನ್ನ ಪಡೆದಂತಹ ಅದೆಷ್ಟು ವಿದ್ಯಾರ್ಥಿಗಳು ಪುಣ್ಯವಂತರು, ಅವರ ಮಾರ್ಗದರ್ಶನದಲ್ಲಿ ಬೆಳೆದು ಇಂದು ದೇಶದ ನಾನಾ ಭಾಗದಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರಿಗೆ ಎಲ್ಲ ವಿದ್ಯಾರ್ಥಿಗಳು ಅಭಿನಂದಿಸುವ ಮೂಲಕ ತಮ್ಮ ಗುರುಗಳನ್ನ ಸ್ಮರಿಸುತ್ತಿರುವುದು ನಿಜಕ್ಕೂ ಅತ್ಯಂತ ಸಂತೋಷ ತಂದಿದೆ ಎಂದು ಹೇಳಿದರು.
ಹಳೆಯ ವಿದ್ಯಾರ್ಥಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಣಾಧಿಕಾರಿ ಜೆ.ಬಿ.ತಮ್ಮಣ್ಣಗೌಡರು, ನನಗೆ ಶಾಲೆಗೆ ದೇವಸ್ಥಾನ, ವಿದ್ಯಾರ್ಥಿಗಳೇ ದೇವರು ಎಂಬ ನಂಬಿಕೆ ಇಟ್ಟುಕೊಂಡು ಕೆಲಸ ಮಾಡಿದ್ದೇನೆ. ನನ್ನ ವೃತ್ತಿ ಜೀವನದಲ್ಲಿ ಸಾಕಷ್ಟು ವಿದ್ಯಾರ್ಥಿಗಳು ವಿದ್ಯೆ ಕಲಿತಿದ್ದಾರೆ ಕಂದಲಿ ವಸತಿ ಶಾಲೆಗೆ ನಾನು ಆಗಮಿಸಿದಾಗ ಅದೆಷ್ಟು ಬಡ ವಿದ್ಯಾರ್ಥಿಗಳ ಅನುಕೂಲ ಮಾಡಿಕೊಟ್ಟಿದೆ. ಅವರೆಲ್ಲರೂ ಕೂಡ ಇಂದು ನನಗೆ ಸನ್ಮಾನಿಸಿ ಗೌರವಿಸುತ್ತಿರುವುದು ನನ್ನ ವೃತ್ತಿ ಬದುಕಿನಲ್ಲಿ ಮರೆಯಲಾಗದ ಕ್ಷಣ ಎಂದು ಬಣ್ಣಿಸಿದರು.
ಇದೇ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳು ತಮ್ಮಣ್ಣ ಗೌಡರ ಕುರಿತು ಗ್ರಂಥವನ್ನು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್. ಮುದ್ದೇಗೌಡ, ವಸತಿ ಶಾಲೆಗಳ ನೌಕರರ ಸಂಘದ ರಾಜ್ಯಾಧ್ಯಕ್ಷ ಪಿ.ಎನ್. ರವಿಚಂದ್ರನ್, ಕಂದಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲೆ ಎ.ಎನ್. ಪ್ರಸವಿ, ಜಿಲ್ಲಾ ಸಮನ್ವಯ ಅಧಿಕಾರಿ ಪ್ರಸನ್ನ ಕುಮಾರ್, ಸುಮಂತ್, ಜಿಲ್ಲಾ ವಸತಿ ಶಿಕ್ಷಣ ಪ್ರಾಂಶುಪಾಲರ ಸಂಘದ ಗೌರವಾಧ್ಯಕ್ಷ ಜಿ.ವಿ. ರಾಜಾರವಿಚಂದ್ರನ್, ವಸತಿ ಶಾಲೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಿ.ಎನ್.ಉಷಾ, ಜಯರಾಮ್, ನಾಗರಾಜ್ ಸೇರಿದಂತೆ ಇನ್ನಿತರರು ಹಾಜರಿದ್ದರು.