

ಹಾಸನ: ಸ್ವಚ್ಛತೆ ಹಾಗೂ ಪರಿಸರ ಕಾಳಜಿ ಹೊಂದಿರುವ ಕ್ಲಿಯರಿಂಗ್ ಸಂಸ್ಥೆಯ ಉದ್ಘಾಟನೆ ಕಾರ್ಯಕ್ರಮ ಜೂನ್ 5ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಚಂದ್ರಶೇಖರ್ ತಿಳಿಸಿದರು.
ಸ್ವಚ್ಛ ಪರಿಸರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕಟ್ಟಲಾಗಿರುವ ಕ್ಲಿಯರಿಂಗ್ ಸಂಸ್ಥೆ ವಿಶ್ವ ಪರಿಸರ ದಿನಾಚರಣೆಯಂದು ನಗರದ ತನ್ವಿತ್ರಿಶ ಕಲ್ಯಾಣ ಮಂಟಪದ ಹಿಂಭಾಗ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ನಗರದ ಶ್ರೀ ಆದಿ ಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಬುನಾಥ ಸ್ವಾಮೀಜಿ, ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಶಾಸಕ ಸ್ವರೂಪ ಪ್ರಕಾಶ್ ಅವರ ಸೇರಿದಂತೆ ಇತರ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ನನ್ನ ಕಸ ನನ್ನ ಜವಾಬ್ದಾರಿ’ ಎಂಬ ಅಭಿಯಾನವನ್ನು ನಮ್ಮ ಸಂಸ್ಥೆಯಿಂದ ಆರಂಭಿಸಿ ನಗರದ ಸಾರ್ವಜನಿಕರಲ್ಲಿ ಸ್ವಚ್ಛ ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಸಂಸ್ಥೆಯಿಂದ ಕಾಂಪೋಸ್ಟ್ ತಯಾರಿಕೆ, ವೇಸ್ಟ್ ಪ್ಲಾಸ್ಟಿಕ್ ಸಂಗ್ರಹಿಸಿ ಇತರೆ ವಸ್ತುಗಳ ತಯಾರಿಕೆ ಬಗ್ಗೆಯೂ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಇತ್ತೀಚಿಗೆ ಆರ್‌ಆರ್‌ಆರ್ ಘಟಕ ತೆರೆದು ನಗರವನ್ನು ಸ್ವಚ್ಛವಾಗಿ ಇಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತದೆ ಎಂದರು.
ಮುಂದಿನ ದಿನಗಳಲ್ಲಿ ಶಾಲೆ, ಕಾಲೇಜು, ಹಾಸ್ಪಿಟಲ್, ಕಲ್ಯಾಣ ಮಂಟಪ ಸೇರಿದಂತೆ ಇತರೆ ಸ್ಥಳದಲ್ಲಿಯೂ ವೇಸ್ಟ್ ಮ್ಯಾನೇಜ್‌ಮೆಂಟ್ ಹಾಗೂ ಇತರೆ ಪರಿಸರ ಸ್ನೇಹಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು. ವೃತ್ತಿಯೊಂದಿಗೆ ಪ್ರವೃತ್ತಿಯಾಗಿ ಸಂಸ್ಥೆಯನ್ನು ಸ್ಥಾಪಿಸಿ ಹಾಸನ ನಗರವನ್ನು ಸ್ವಚ್ಛ ನಗರವನ್ನಾಗಿ ಮಾಡುವ ಗುರಿಯೊಂದಿಗೆ ಮುನ್ನಡೆಯುತ್ತಿದ್ದು ಸಾರ್ವಜನಿಕರ ಸಹಕಾರವು ಅತ್ಯಗತ್ಯ ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಗೋಪಾಲಕೃಷ್ಣ , ಶ್ರೀನಿವಾಸ ಶಾಸ್ತ್ರಿ, ಮಮತಾ ಪಾಟೀಲ್, ಮದನ ಕುಮಾರ್ ಇದ್ದರು.