

ಹಾಸನ: ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜೂನ್ 21 ರಿಂದ ಜುಲೈ 1ರವರೆಗೂ ಹಾಸನಾಂಬ ಕಲಾಕ್ಷೇತ್ರದಲ್ಲಿ ನಾಟಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. 11 ದಿನಗಳ ಕಾಲ ಪ್ರತಿದಿನ ಬೆಳಿಗ್ಗೆ 11ರಿಂದ ರಾತ್ರಿ 8 ಗಂಟೆಯವರೆಗೂ ನಾಟಕ ಪ್ರದರ್ಶನಗೊಳ್ಳಲಿವೆ ಎಂದು ಶ್ರೀ ಲಕ್ಷ್ಮೀ ರಂಗನಾಥ್ ಸಾಂಸ್ಕೃತಿಕ ಕಲಾ ಸಂಘದ ನಿರ್ದೇಶಕ ಚಂದ್ರಶೇಖರ್ ತಿಳಿಸಿದರು.
2ನೇ ವರ್ಷದ ನಾಟಕೋತ್ಸವವನ್ನು ಶ್ರೀ ಲಕ್ಷ್ಮೀ ರಂಗನಾಥ್ ಸಾಂಸ್ಕೃತಿಕ ಕಲಾ ಸಂಘ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಕಲಾ ಸಂಘದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರತಿನಿತ್ಯ ಒಂದೊಂದು ಕಲಾತಂಡಗಳಿಂದ ನಾಟಕ ಪ್ರದರ್ಶನಗೊಳ್ಳಲಿದೆ. ಶ್ರೀ ಹರೀಶ್ ಅವರ ನೇತೃತ್ವದಲ್ಲಿ ನ್ಯೂ ಇಂದ್ರ ಡ್ರಾಮಾ ಸೀನರಿ ಸಿದ್ಧಪಡಿಸಲಾಗಿದೆ. ಮೊದಲ ದಿನ ಶುಕ್ರವಾರ ಕೌಂಡ್ಲಿಕನ ವಧೆ, ಎರಡನೇ ದಿನ ರಾಮಾಯಣ, ಮೂರನೇ ದಿನ ಕುರುಕ್ಷೇತ್ರ, ನಾಲ್ಕನೆ ದಿನ ದಕ್ಷಯಜ್ಞ, 5ನೇ ದಿನ ಧರ್ಮರಾಜ್ಯ ಸ್ಥಾಪನೆ, ಆರನೇ ದಿನ ಕುರುಕ್ಷೇತ್ರ, ಏಳನೇ ದಿನ ಸರ್ಕಾರಿ ಕಾರ್ಯಕ್ರಮ, ಎಂಟನೆ ದಿನ ಕುರುಕ್ಷೇತ್ರ, ಒಂಬತ್ತನೆ ದಿನ ತ್ರಿಜನ್ಯ ಮೋಕ್ಷ, ಹತ್ತನೆ ದಿನ ರಾಮಾಯಣ, ಕೊನೆಯ ದಿನದಂದು ಕುರುಕ್ಷೇತ್ರ ಸೇರಿ ಒಟ್ಟು 11 ದಿನಗಳ ಕಾಲ ಪ್ರತಿದಿನ ವಿವಿಧ ಕಲಾತಂಡಗಳಿಂದ ನಾಟಕ ನಡೆಯಲಿವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಹಾಸನ ಜಿಲ್ಲಾ ಕಲಾವಿದರ ವೇದಿಕೆ ಜಿಲ್ಲಾಧ್ಯಕ್ಷ ರವಿಕುಮಾರ್ ಬಿದರೆ ಮಾತನಾಡಿ, ನಾವು ಒಂದು ನಾಟಕ ಮಾಡಬೇಕಾದರೇ ಮೂರರಿಂದ ನಾಲ್ಕು ಲಕ್ಷ ರೂ. ಖರ್ಚು ತಗುಲಲಿದೆ. ಈ 11 ದಿನದ ನಾಟಕೋತ್ಸವಕ್ಕೆ 25 ಲಕ್ಷ ರೂ. ಖರ್ಚು ಆಗುತ್ತದೆ. ಕಲಾಭವನದ ಬಾಡಿಗೆಯೇ ದಿನಕ್ಕೆ 15 ಸಾವಿರ ಕೊಡಬೇಕು. ಈ ಹಣವನ್ನು ಕಲಾವಿದರೇ ಹಾಕುತ್ತಿದ್ದೇವೆ. ಕಲಾವಿದರಿಂದ 75 ಸಾವಿರ ರೂ. ಪಡೆದು ನಾಟಕ ಕಲೆ ಉಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಎಲ್ಲಾ ಜಿಲ್ಲೆಯಲ್ಲಿ ಸುಸಜ್ಜಿತ ಕಲಾಭವನ ಇವೆ. ಆದರೆ ಹಾಸನ ಜಿಲ್ಲೆಯಲ್ಲಿ ಮೊದಲಿನಿಂದಲೂ ಸಾಕಷ್ಟು ಸಮಸ್ಯೆಗಳಿವೆ. ಕಲಾವಿದರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲವಾಗಿದೆ. ಹಾಸನಾಂಬ ಕಲಾಕ್ಷೇತ್ರಕ್ಕೆ ಕಾಯಂ ಅಧಿಕಾರಿಯನ್ನು ನೇಮಿಸಬೇಕು. ಇರುವ ಅಧಿಕಾರಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಮಾಸಾಶನ ಕೂಡ ಕಲಾವಿದರಿಗೆ ಬರುತ್ತಿಲ್ಲ. ಇದು ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಕಲಾಭವನಕ್ಕೆ ಬೀಗಿ ಹಾಕುವ ಕೆಲಸ ಮಾಡಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಕಲಾವಿದರಾದ ಬಿ.ಪಿ. ರಮೇಶ್, ಚೆಲುವನಹಳ್ಳಿ ಶೇಖರಪ್ಪ, ಪ್ರಕಾಶ್, ದೇವಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.