

ಹಾಸನ: ಜೂನಿಯರ್ ವಿಷ್ಣುವರ್ಧನ್ ಆಗಿ ಕಳೆದ 35 ವರ್ಷಗಳಿಂದ ಕನ್ನಡಿಗರನ್ನು ರಂಜಿಸುತ್ತಾ ಬಂದಿರುವ ಎಂ.ಡಿ. ಅಲಿ ಅವರು ಹೃದಯ ರೋಗದಿಂದ ಬಳಲುತ್ತಿದ್ದು, ಅವರ ಚಿಕಿತ್ಸೆಗೆ ದಾನಿಗಳು ನೆರವಾಗಬೇಕೆಂದು ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕುಮಾರ್ ಮನವಿ ಮಾಡಿದರು.
ನೆರವು ನೀಡಲಿಚ್ಚಿಸುವವರು ಬೆಂಗಳೂರಿನ ಮತ್ತಿಕೆರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಎಂ.ಡಿ. ಅಲಿ ಹೊಂದಿರುವ ಬ್ಯಾಂಕ್ ಖಾತೆ ಸಂಖ್ಯೆ 64013077972, ಐಎಫ್‌ಎಸ್‌ಸಿ ಸಂಖ್ಯೆ ಎಸ್‌ಬಿಐಎನ್0040605 ಗೆ ಹಣ ಜಮಾವಣೆ ಮಾಡಲು ಗುರುವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಅಲ್ಲದೆ, ಅಲಿ ಅವರ ಹೃದಯ ಶಸ್ತ್ರಚಿಕಿತ್ಸೆ ಸಹಾಯಾರ್ಥ ನಗರದ ಹರ್ಷಮಹಲ್ ರಸ್ತೆಯಲ್ಲಿರುವ ಅಂಬೇಡ್ಕರ್ ಭವನದಲ್ಲಿ ಡಿ.11 ರಂದು ಸಂಜೆ 5:30 ಕ್ಕೆ ಹಾಸ್ಯ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ. ಜೂನಿಯರ್ ರಾಜ್‌ಕುಮಾರ್, ಜೂನಿಯರ್ ಅಂಬರೀಷ್, ಜೂನಿಯರ್ ಪುನೀತ್ ರಾಜಕುಮಾರ್ ಹಾಗೂ ವಿವಿಧ ಕಲಾವಿದರು ಆಗಮಿಸಿ ಮನರಂಜಿಸಲಿದ್ದಾರೆ. 100 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಸಂಗ್ರಹ ಆದ ಹಣವನ್ನು ಅಲಿ ಅವರ ಚಿಕಿತ್ಸೆಗೆ ನೀಡಲಾಗುವುದು. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಆಗಮಿಸಬೇಕು ಎಂದು ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ಜೂನಿಯರ್ ವಿಷ್ಣುವರ್ಧನ್ ಅಲಿ, ಜಯರಾಮ್, ಗಂಗಾಧರ್ ಇತರರು ಇದ್ದರು.