ಜೂಜು ಅಡ್ಡೆಯ ಮಾಹಿತಿ ನೀಡಿದ್ದಕ್ಕೆ ಪೊಲೀಸರಿಂದ ಹಲ್ಲೆ?

Published on

ತಿಪಟೂರು: ಕಾನೂನುಬಾಹಿರವಾಗಿ ಜೂಜಾಡುತ್ತಿರುವ ಬಗ್ಗೆ ಪೊಲೀಸ್​ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ ಎಂಬ ಕಾರಣಕ್ಕೆ ತಾಲೂಕಿನ ಹೊನ್ನವಳ್ಳಿ ಠಾಣೆ ಪೊಲೀಸ್​ ಸಿಬ್ಬಂದಿ ಮಾಹಿತಿದಾರನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ತಾಲೂಕಿನ ಹೊನ್ನವಳ್ಳಿ ಹೋಬಳಿ ಚೌಲಿಹಳ್ಳಿಯಲ್ಲಿ ಅಕ್ರಮ ಜೂಜಾಟದ ಬಗ್ಗೆ ಚೌಲಿಹಳ್ಳಿಯ ರಘು ಎಂಬಾತ ಪೊಲೀಸ್​ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ಕಾರಣಕ್ಕೆ ಮಂಗಳವಾರ ಹೊನ್ನವಳ್ಳಿ ಪೊಲೀಸರು ಅಂಗವಿಕಲ ರಘು ಅವರಿಗೆ ಕಾಲು ಮುರಿಯುವಂತೆ ಥಳಿಸಿದ್ದು, ಈತ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆಗೆ ಪೊಲೀಸರ ಕಿರುಕುಳವೇ ಕಾರಣ, ಅವರ ವಿರುದ್ಧ ಸೂಕ್ತ ಕ್ರಮ ವಹಿಸಿ ಎಂದು ರಘುವಿನ ತಾಯಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಚೌಲಿಹಳ್ಳಿಯ ರಘುಗೆ ಕೆಲ ತಿಂಗಳ ಹಿಂದೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾಲು ಊನವಾಗಿದೆ. ಪೊಲೀಸರ ಹಲ್ಲೆಯಿಂದ ಕಾಲು ಮುರಿದಿಲ್ಲ. ಅಸಲಿಗೆ ಈತ ಕುಡಿದು ಗ್ರಾಮದಲ್ಲಿ ಗಲಾಟೆ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಹೊನ್ನವಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಹೋಗಿ ಗಲಾಟೆ ಮಾಡುತ್ತಿದ್ದ ರಘುಗೆ ಬುದ್ಧಿ ಹೇಳಿದ್ದಾರೆ. ಈತನ ವಿರುದ್ಧ ಈಗಾಗಲೇ ಎರಡು ಪ್ರಕರಣಗಳಿದ್ದು, ಈತನ ಅಣ್ಣ ರೌಡಿ ಶೀಟರ್​. ಘಟನೆಗೆ ಸಂಬಂಧಿಸಿದಂತೆ ಚೌಲಿಹಳ್ಳಿ ಗ್ರಾಮಸ್ಥರನ್ನುವಿಚಾರಿಸಿದರೆ ನಿಜಾಂಶ ತಿಳಿಯುತ್ತದೆ ಎಂದು ಘಟನೆ ಕುರಿತು ಗ್ರಾಮಾಂತರ ವೃತ್ತ ನಿರೀಕ್ಷಕ ಚಂದ್ರಶೇಖರ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net