

ಯಾದಗಿರಿ: ಮುಂಬರುವ ಜೂನ್.೩೦ರ ಒಳಗೆ ಸಾರ್ವಜನಿಕರು ಆಸ್ತಿ ತೆರಿಗೆ ಕಟ್ಟುವ ಮೂಲಕ ಶೇ.೫ ವಿನಾಯಿತಿ ಪಡೆದುಕೊಳ್ಳಬೇಕು ಎಂದು ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಮತ್ತು ಪೌರಾಯುಕ್ತ ಉಮೇಶ ಚವ್ಹಾಣ್ ಜಂಟಿಯಾಗಿ ಹೇಳಿದರು.
ಆಸ್ತಿ, ನೀರಿನ ತೆರಿಗೆ ವಸಲಿ ಸೇರಿ ಸಾರ್ವಜನಿಕರ ವಿವಿಧ ಕೆಲಸಗಳಿಗೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ನಗರಸಭೆ ದಿಟ್ಟ ಹೆಜ್ಜೆ ಇಟ್ಟಿದ್ದು, ಈ ಕುರಿತು ನಗರಸಭೆಯಲ್ಲಿ ಸೋಮವಾರ ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು, ಈ ಕರ‍್ಯಕ್ಕಾಗಿ ಸಿಬ್ಬಂದಿ ತಂಡ, ಕಾಲಾವಧಿ ನಿಗದಿ ಮತ್ತು ಕಚೇರಿಯಲ್ಲಿ ಹೆಲ್ಪಲೈನ್ ವಿಭಾಗ ಆರಂಭಿಸಲಾಗಿದೆ ಎಂದರು.
೨೦೨೫-೨೬ನೇ ಸಾಲಿನ ಆಸ್ತಿ ತೆರಿಗೆ, ನೀರಿನ ಕರ, ಬಿ.ಖಾತಾ ಅಭಿಯಾನ ಮತ್ತು ಆಸ್ತಿಗಳನ್ನು ಡಿಜಿಟಲೀಕರಣ ಮಾಡಿಕೊಳ್ಳುವುದು ಸೇರಿ ನಗರದ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಮಾರ್ಗಸೂಚಿ ಮತ್ತು ಕೆಲಸದ ನಿರ್ವಹಣೆಗಾಗಿ ನಗರಸಭೆ ಕೆಲ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದು ಹೇಳಿದರು.
ಜೂ.೩೦ರೊಳಗೆ ತೆರಿಗೆ ಪಾವತಿಸುವವರಿಗೆ ಶೇ.೫ ವಿನಾಯತಿ ಸರ್ಕಾರ ನೀಡಿದೆ. ಪೌರಾಯುಕ್ತ ಇಲಾಖೆ ಅವಧಿ ವಿಸ್ತರಿದ್ದನ್ನು ಜನರು ಗಮನಿಸಿ ಇದರ ಲಾಭ ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ನಗರದ ಸಾರ್ವಜನಿಕರು ತಮ್ಮ ಆಸ್ತಿ ಮತ್ತು ನೀರಿನ ಕರ ಆದಷ್ಟು ಶೀಘ್ರ ಪಾವತಿಸಬೇಕು ಎಂದರು.
ಈ ಕೆಲಸಕ್ಕಾಗಿ ನಗರಸಭೆ ಸಿಬ್ಬಂದಿ ನಾಲ್ಕು ತಂಡ ರಚಿಸಲಾಗಿದೆ. ಪ್ರತಿ ತಂಡದಲ್ಲೂ ೩-೪ ಜನರಿದ್ದು, ಅವರೆಲ್ಲ ಪ್ರತ್ಯೇಕವಾಗಿ ನಿತ್ಯ ಬೆಳಗ್ಗೆ ೮.೩೦ರಿಂದ ೧೦.೩೦ರವರೆಗೆ ತಲಾ ೨೫ ಮನೆಗಳಿಗೆ ಭೇಟಿ ನೀಡಿ ತೆರಿಗೆ ವಸೂಲಿ ಬಗ್ಗೆ ಮಾಹಿತಿ ನೀಡಿ, ವಾರ್ಡ್ಗಳ ಸಮಸ್ಯೆ ಆಲಿಸಲಿದ್ದಾರೆ. ನಗರಸಭೆಯಲ್ಲಿ ಯಾವುದೇ ಕೆಲಸವಿದ್ದರೂ ನೇರವಾಗಿ ಕಚೇರಿಗೆ ಬಂದು ನಿಯಮಾನುಸಾರ ಮಾಡಿಕೊಡಲಾಗುವುದು. ಇದಕ್ಕಾಗಿ ಇಬ್ಬರು ಸಿಬ್ಬಂದಿ ಇರುವ ಹೆಲ್ಪ್ಲೈನ್ ವಿಭಾಗ ಆರಂಭಿಸಲಾಗಿದೆ. ಸಾರ್ವಜನಿಕರ ಯಾವುದೇ ಸಮಸ್ಯೆ ಇದ್ದರೆ ಇರುವ ಸಿಬ್ಬಂದಿ ನೇರವಾಗಿ ಮಾತಾಡಿ ಅವರ ಕೆಲಸ ಕಾರ್ಯ ಮತ್ತೆ ತೆರಿಗೆ ಪಾವತಿಸುವ ಕುರಿತು ಮಾಹಿತಿ ನೀಡಲಿದ್ದಾರೆ. ಇದರಿಂದ ತಲ್ಲಾಳಿಗಳ ಹಾವಳಿ ತಪ್ಪಲಿದೆ ಎಂದರು.
ಸರ್ಕಾರ ನೀಡಿರುವ ಈ ಕಾಲಾವಕಾಶ ತಪ್ಪಿಸಿಕೊಳ್ಳದೆ ಆಸ್ತಿ ತೆರಿಗೆ, ನೀರಿನ ಕರ ಪಾವತಿಸಿ ಆಸ್ತಿಗಳನ್ನು ಡಿಜಿಟಲೀಕರಣ ಮಾಡಿಕೊಳ್ಳಬೇಕು. ಅಲ್ಲದೆ ಬಿ.ಖಾತೆ ಮಾಡಿಸಿಕೊಳ್ಳವಲ್ಲಿ ಇರುವ ಅಡೆತಡೆ ನಿವಾರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಉಪಾಧ್ಯಕ್ಷೆ ರೂಕಿಯಾ ಬೇಗಂ ಇದ್ದರು.