

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘವು ಬಾಗಲಕೋಟೆ ಜಿಲ್ಲಾ ಘಟಕದಿಂದ ಜೂ.೩೦ ರಂದು ಬೆಳಗ್ಗೆ ೧೦ ಗಂಟೆಗೆ ವಿಜಯಪುರ ಜಿಲ್ಲೆಯ ನೀಡಗುಂದಿಯ ಬಸ್ ನಿಲ್ದಾಣ ಎದುರಿಗೆ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ವಿರುಪಾಕ್ಷ ಹಿರೇಮಠ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀಳಗಿ, ಜಮಖಂಡಿ ಹಾಗೂ ಮುಧೋಳ ಸಂತ್ರಸ್ತರು ಪಾಲ್ಗೊಳ್ಳಲಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಹಿನ್ನಿರಿನಿಂದ ಮುಳುಗಡೆಯಾಗಿರುವ ಹಳ್ಳಿಗಳ ಪುನರ್ ವಸತಿ ಹಾಗೂ ೫೨೧.೬ ಮೀಟರ್ ವರೆಗೆ ಮುಳುಗಿ ೫೨೪ ರ ವರೆಗೆ ಸವಳು ಜವಳಾಗಿ ಪಾಳುಬಿದ್ದಿರುವ ರೈತರ ಜಮೀನುಗಳಿಗೆ ಯೋಗ್ಯ ಪರಿಹಾರ ಹಾಗೂ ಈಗಾಗಲೇ ಸರ್ವೇಯಾಗಿ ಐ ತೀರ್ಪು ಹಂತಕ್ಕೆ ಬಂದಿರುವ ಗ್ರಾಮಗಳ ಜಮೀನಕ್ಕೆ ತಕ್ಷಣ ಪರಿಹಾರ ಕೊಡಬೇಕೆಂದು ಒತ್ತಾಯಿಸಲಾಗುವುದು ಎಂದರು.
ಸಂತ್ರಸ್ತ ರೈತರಿಗೆ ಯೋಗ್ಯ ಪರಿಹಾರವನ್ನು ನೀಡಲು ವಿಳಂಬವಾದ ಹಿನ್ನೆಲೆಯಲ್ಲಿ, ಈ ಯೋಜನೆಗೆ ಸರ್ಕಾರ ಪ್ರಾಧಾನ್ಯತೆ ಕೊಟ್ಟು ಬೇಗ ೫೨೪.೬ ಮೀಟರ್ ಹಿನ್ನೀರನ್ನು ಸಂಗ್ರಹಿಸಿ ನಮ್ಮ ರಾಜ್ಯದ ೨೫ ಲಕ್ಷ ಎಕರೆ ಜಮೀನಕ್ಕೆ ನೀರಾವರಿ ಸೌಲಭ್ಯ ಒದಗಿಸಬೇಕು. ಆದ್ದರಿಂದ ಉತ್ತರ ಕರ್ನಾಟಕದ ಜನಪ್ರತಿನಿಗಳು ಪ್ರದರ್ಶನ ಮಾಡಿ ರೈತರ ಸಮಸ್ಯೆಗಳಿಗೆ ಕಡ್ಡಾಯ ಪರಿಹಾರ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಸಿದ್ಧನಗೌಡ ಪಾಟೀಲ, ಸುಬ್ಬರಾಯಗೌಡ ಪಾಟೀಲ, ಕುಮಾರ ಯಡಹಳ್ಳಿ ಇದ್ದರು.