

ಬಾಗಲಕೋಟೆ: ವಿಶ್ವ ಯೋಗ ದಿನಾಚರಣೆ ಬಿವಿವಿ ಸಂಘದ ಆಶ್ರಯದಲ್ಲಿ ವಿಜಯವಾಣಿ ಹಾಗೂ ದಿಗ್ವಿಜಯ ಮಾಧ್ಯಮ ಸಹಯೋಗದಲ್ಲಿ ಕೋಟೆ ನಗರಿಯಲ್ಲಿ ಮೂರು ಕಡೆ ವಿಶೇಷವಾಗಿ ಕಾರ್ಯಕ್ರಮ ಜೂ.೨೧ರಂದು ಹಮ್ಮಿಕೊಳ್ಳಲಾಗಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ಬಿವಿವಿ ಸಂಘದ ಹಳೆ ಬಾಗಲಕೋಟೆಯ ಮೈದಾನ, ನವನಗರದ ನಿಜಲಿಂಗಪ್ಪ ಮೆಡಿಕಲ್ ಕಾಲೇಜ್ ಆವರಣ, ವಿದ್ಯಾಗಿರಿಯ ಬಸವೇಶ್ವರ ಇಂಜನಿಯರಿಂಗ್ ಕಾಲೇಜ್ ಮೈದಾನದಲ್ಲಿ ಯೋಗ ದಿನಾಚರಣೆ ಅಂದು ಬೆಳಗ್ಗೆ ೬.೩೦ಕ್ಕೆ ನಡೆಯಲಿದ್ದು, ಬಿವಿವಿ ಸಂಘದ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು, ಪ್ರಾಧ್ಯಪಕರು, ಸಾರ್ವಜನಿಕರು ಭಾಗವಹಿಸಲಿದ್ದಾರೆ. ಸಾವಿರಾರು ಏಕಕಾಲಕ್ಕೆ ಯೋಗ ಮಾಡಿ ವಿಶ್ವಕ್ಕೆ ಭಾರತದ ಯೋಗವನ್ನು ಪರಿಚಯಿಸಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ ಅಽಕಾರ ವಹಿಸಿಕೊಳ್ಳುತ್ತಿದ್ದಂತೆ ೨೦೧೪ರಲ್ಲಿ ಯೋಗ ದಿನಾಚರಣೆಗೆ ಚಾಲನೆ ನೀಡಿದರು. ಪ್ರಸಕ್ತ ವರ್ಷ ೯ನೇ ವರ್ಷದಲ್ಲಿ ಮುನ್ನಡೆದಿದೆ. ಈ ವರ್ಷ ವಿಶೇಷವಾಗಿ ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ನ್ಯೂಯಾರ್ಕ ನಗರದಲ್ಲಿರುವ ವಿಶ್ವ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ೧೮೦ ದೇಶಗಳ ಪ್ರತಿನಿಽಗಳ ಜೊತೆಗೆ ಯೋಗ ದಿನಾಚರಣೆ ಆಚರಿಸುತ್ತಿರುವುದು ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದೆ. ಸಾರ್ವಜನಿಕರು ೧೫ ನಿಮಿಷ ಮುಂಚಿತವಾಗಿ ಕಾರ್ಯಕ್ರಮ ಸ್ಥಳದಲ್ಲಿ ಹಾಜರಿರಬೇಕು. ಮುಕ್ತವಾಗಿ ಪಾಲ್ಗೊಳ್ಳಲು ಅವಕಾಶವಿದೆ ಎಂದರು.
ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಎನ್.ಎನ್.ವೈದ್ಯಕೀಯ ಕಾಲೇಜ್ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಅಶೋಕ ಸಜ್ಜನ್ (ಬೇವೂರ), ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ಶಾಲಾ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಹಾಂತೇಶ ಶೆಟ್ಟರ, ಮಹೇಶ ಕಕರೆಡ್ಡಿ ಇದ್ದರು.