ಜೂ.9ರಂದು ದರ್ಬಾರ್ ಶುರು

Published on

ಮೈಸೂರು: ರಾಜಕೀಯ, ವಿಡಂಬನೆಯ ಹಾಸ್ಯಭರಿತ ಸದಭಿರುಚಿಯ ‘ದರ್ಬಾರ್’ ಸಿನಿಮಾ ಜೂ. 9ರಂದು ಬಿಡುಗಡೆ ಆಗಲಿದೆ ಎಂದು ಚಿತ್ರದ ನಿರ್ದೇಶಕ ವಿ. ಮನೋಹರ್ ಹೇಳಿದರು.
ದರ್ಬಾರ್ ಪ್ರೊಡಕ್ಷನ್ಸ್ ಅಡಿ ನಿರ್ಮಿಸಿರುವ ಈ ಸಿನಿಮಾಕ್ಕೆ ನಾನು, ಜಯಂತ್ ಕಾಯ್ಕಿಣಿ, ಸತೀಶ್ ಸಾಹಿತ್ಯ ಬರೆದಿದ್ದು, ಇದೊಂದು ಅಶ್ಲೀಲ ಅಲ್ಲದ ಸದಭಿರುಚಿಯ ಹಾಸ್ಯವನ್ನು ಒಳಗೊಂಡಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
23 ವರ್ಷದಿಂದ ನಾನು ಸಿನಿಮಾ ನಿರ್ದೇಶನಕ್ಕೆ ಮುಂದಾಗಿರಲಿಲ್ಲ. ಓಂ ಸಿನಿಮಾ ನಂತರ ಅವಕಾಶವೇ ಸಿಗಲಿಲ್ಲ. ಆ ಸಂದರ್ಭದಲ್ಲಿ ಕಿರುತೆರೆ ನನ್ನ ಕೈ ಹಿಡಿಯಿತು. ಈಗ ಸತೀಶ್ ಅವರು ಒಳ್ಳೆಯ ಕಥೆ ಹೇಳಿದ್ದರಿಂದ ನಿರ್ದೇಶನಕ್ಕೆ ಮತ್ತೆ ಹಿಂದಿರುಗಿದ್ದೇನೆ ಎಂದರು.
ಸುಂದರವಾದ ಹಳ್ಳಿಯ ಜನ ಜಾತಿ, ಮತ, ಧರ್ಮ ಯಾವುದೇ ಭೇದವಿಲ್ಲದೆ ಬದುಕುತ್ತಾರೆ. ಆ ಹಳ್ಳಿಯ ಶ್ರೀಮಂತನ ಮಗ ದರ್ಪ, ದರ್ಬಾರು ಮತ್ತು ನೈತಿಕ ಪೊಲೀಸ್ ಗಿರಿಯ ದರ್ಪದಿಂದ ಮೆರೆಯುತ್ತಾನೆ. ಇದರಿಂದ ಇತರರಿಗೆ ಕಿರಿಕಿರಿ ಆಗುತ್ತದೆ. ಒಂದಷ್ಟು ಜನರು ಆತನ ದರ್ಪ ಮುರಿಯಲು ಪಂಚಾಯಿತಿ ಚುನಾವಣೆಗೆ ನಿಲ್ಲಿಸಿ ವೋಟಿಗಾಗಿ ಪರದಾಡುವಂತೆ ಮಾಡಿ ಮಜಾ ತೆಗೆದುಕೊಳ್ಳುತ್ತಾರೆ. ನಂತರ ಏನಾಗುತ್ತದೆ ಎಂಬುದೇ ಈ ಚುನಾವಣೆಯ ಕ್ಲೈಮಾಕ್ಸ್. ಇದು ಸಂಪೂರ್ಣ ರಾಜಕೀಯ ಮತ್ತು ವಿಡಂಬನೆಯನ್ನು ಒಳಗೊಂಡಿದೆ ಎಂದು ತಿಳಿಸಿದರು.
ನಾಯಕ ನಟ ಸತೀಶ್, ಕಾಮಿಡಿ ಕಿಲಾಡಿಯ ಎಂ.ಎನ್. ಸಂತು, ನಾಗೇಂದ್ರ, ಮಂಡ್ಯ ಜಯರಾಮ್, ಶಿವು ಬಾಲಾಜಿ, ಬಸವರಾಜೇಗೌಡ, ಶಂಕರ್, ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net