ಜೂ.8ರಂದು ಬಸವಣ್ಣ ಜಯಂತ್ಯುತ್ಸವ ಅಂಗವಾಗಿ ಮೆರವಣಿಗೆ

ಜೂ.8ರಂದು ಬಸವಣ್ಣ ಜಯಂತ್ಯುತ್ಸವ ಅಂಗವಾಗಿ ಮೆರವಣಿಗೆ
Published on

ಹಾಸನ: ನಗರದ ಶ್ರೀ ಜಗಜ್ಯೋತಿ ಬಸವೇಶ್ವರ ಆಚರಣಾ ಸಮಿತಿ ಸಹಯೋಗದಲ್ಲಿ ಜೂನ್ 8ರ ಶನಿವಾರ ಬೆಳಿಗ್ಗೆ 9 ಗಂಟೆಗೆ ಶ್ರೀ ಬಸವೇಶ್ವರ ವಿಶೇಷ ಜಯಂತಿಯ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಲಾತಂಡದೊಡನೆ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ವೀರಶೈವ ಲಿಂಗಾಯಿತ ಸಂಘದ ನಿರ್ದೇಶಕರಾದ ಶೋಭನ್ ಬಾಬು ತಿಳಿಸಿದರು.
ಚುನಾವಣೆಯ ನೀತಿ ಸಂಹಿತೆ ಇದ್ದುದರಿಂದ ಬಸವಣ್ಣನವರ ಜಯಂತಿ ಕಾರ್ಯಕ್ರಮವನ್ನು ಮೇ.10 ರಂದು ಸಾಂಕೇತಿಕವಾಗಿ ಸರಳವಾಗಿ ಆಚರಣೆ ಮಾಡಲಾಗಿತ್ತು. ಚುನಾವಣೆ ಮುಗಿದ ನಂತರ ಅದ್ಧೂರಿಯಾಗಿ ಆಚರಿಸಲು ಸಮಾಜದ ಎಲ್ಲಾ ಮುಖಂಡರು ನಿಶ್ಚಯಿಸಿದ್ದರಿಂದ ಜೂನ್ 8ರ ಶನಿವಾರದಂದು ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಿಂದ ಐದು ಜನ ಸ್ವಾಮೀಜಿಯ ದಿವ್ಯಸಾನಿಧ್ಯದಲ್ಲಿ ವಿಶೇಷ ಮೆರವಣಿಗೆ ಮೆರವಣಿಗೆ ನಡೆಯಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅಂದು ಹೇಳೇಬೀಡಿನ ಶ್ರೀ ಕ್ಷೇತ್ರದ ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿ, ಶ್ರೀ ಜವೇನಹಳ್ಳಿ ಮಠದ ಶ್ರೀ ಸಂಗಮೇಶ್ವರ ಸ್ವಾಮೀಜಿ, ಸೀಗೆನಾಡು ಮಳೆಮಲ್ಲೇಶ್ವರ ಬೆಟ್ಟದ ಶ್ರೀ ನಂದೀಶ್ವರ ಶಿವಾಚಾರ್ಯ ಮಹಾಸ್ವಾಮೀಜಿ, ತಣ್ಣೀರುಹಳ್ಳ ಮಠದ ಶ್ರೀ ವಿಜಯಕುಮಾರ ಸ್ವಾಮೀಜಿ, ಯಸಳೂರು ತೆಂಕಲಗೂಡು ಬೃಹನ್ ಮಠದ ಶ್ರೀ ಚನ್ನಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಅವರ ನೇತೃತ್ವದಲ್ಲಿ ಶ್ರೀ ಬಸವೇಶ್ವರರ ಭಾವಚಿತ್ರದೊಂದಿಗೆ ಅದ್ಧೂರಿ ಮೆರವಣಿಗೆ ಏರ್ಪಡಿಸಲಾಗಿದೆ. ಈ ವೇಳೆ ನಾದಸ್ವರ, ನಂದಿದ್ವಜ, ಚಂಡೆವಾದ್ಯ, ವೀರಗಾಸೆ, ಗೊಂಬೆ ಬಳಗ, ಡಿಜೆ, ನಾಸಿಕ್ ಡೋಲ್ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕಿರಣ್ ಕುಮಾರ್, ಮಾಜಿ ನಿರ್ದೇಶಕ ಲೋಕೇಶ್, ವೀರಶೈವ ಲಿಂಗಾಯಿತ ಸಮಾಜದ ಮುಖಂಡರಾದ ಸಂಗಂ, ಹೇಮಂತ್, ರೋಹಿತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net